ADVERTISEMENT

ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 4:59 IST
Last Updated 23 ಸೆಪ್ಟೆಂಬರ್ 2022, 4:59 IST

ಗದಗ: ಸೆ.19ರಂದು ನರಗುಂದ ತಾಲ್ಲೂಕಿನ ಗುರ್ಲಕಟ್ಟಿ ಗ್ರಾಮದಲ್ಲಿ ನಡೆದಿದ್ದ ಸಂಗನಗೌಡ ನಾಯ್ಕನೂರ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜು ತಿಳಿಸಿದ್ದಾರೆ.‌

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸೆ. 19ರಂದು ಮಧ್ಯಾಹ್ನ 2.30ರ ಸುಮಾರಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಂಗನಗೌಡ ನಾಯ್ಕನೂರ ಅವರ ಹೊಟ್ಟೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಅದೇ ಗ್ರಾಮದ ಸುರೇಶಗೌಡ ಕಲ್ಲನಗೌಡ ಪಾಟೀಲ (30) ಹಾಗೂ ಈರಣ್ಣ ಉಮೇಶ ಅಂತಕ್ಕನವರ (25) ಎಂಬುವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ’ ಎಂದು ಅವರು ತಿಳಿಸಿದರು.

ಕೊಲೆ ಮಾಡುವುದಕ್ಕೂ ಮುನ್ನ ಆರೋಪಿಗಳು ಮೃತನ ಮನೆಗೆ ಬಂದು ಗಂಡನನನ್ನು ಕೊಲ್ಲುವ ಬೆದರಿಕೆ ಹಾಕಿ ಹೋಗಿದ್ದರು ಎಂದು ಮೃತನ ಹೆಂಡತಿ ಪ್ರಿಯಾ ನರಗುಂದ ಠಾಣೆಗೆ ದೂರು ನೀಡಿದ್ದರು ಎಂದು ಅವರು ತಿಳಿಸಿದರು.

ADVERTISEMENT

ನರಗುಂದ ಡಿವೈಎಸ್‌ಪಿ ವೈ.ಎಸ್.ಏಗನಗೌಡ್ರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ಮಲ್ಲಯ್ಯ ಜಿ.ಮಠಪತಿ ನೇತೃತ್ವದಲ್ಲಿ ಪಿಎಸ್‌ಐ ಸುನೀಲಕುಮಾರ ನಾಯಕ ಹಾಗೂ ಸಿಬ್ಬಂದಿ ವಿ.ಡಿ ಕೊಣ್ಣೂರ, ಚಂದ್ರು ಕಾಕನೂರ, ಖಾಜೇಸಾಬ ಮುಲ್ಲಾನವರ, ಸುರೇಶ ಚಟ್ರಿ, ಎನ್.ಎಸ್ ಬಾರಕೇರ ಅವರನ್ನೊಳಗೊಂಡ ವಿಶೇಷ ತಂಡವು ಸವದತ್ತಿ ತಾಲ್ಲೂಕಿನ ಇನಾಮಹೊಂಗಲ್ ಹತ್ತಿರ ಇರುವ ಶಿರೂರ ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸಿ ಕರೆ ತಂದಿದ್ದಾರೆ ಎಂದು ತಿಳಿಸಿದರು.

‘ಕೊಲೆ ಪ್ರಕರಣವನ್ನು ಎಲ್ಲ ಆಯಾಮದಲ್ಲೂ ತನಿಖೆ ಮಾಡಲಾಗುವುದು’ ಎಂದು ಅವರು ತಿಳಿಸಿದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.