ನರಗುಂದ: ‘ಬಾಳ ದಿವಸಾಗಿತ್ತ ಗಂಡನ ಮನಿಗೆ ಹೋಗಿ, ಪಂಚಮಿ ಬಂದ ಮ್ಯಾಲೆ ಉಂಡಿ ತಿನ್ನಾಕ ತವರಮನಿಗೆ ಬರುವಂಗಾತ ನೋಡ’ ಎಂದು ಪಂಚಮಿ ಹಬ್ಬಕ್ಕೆ ತವರು ಮನೆಗೆ ಬಂದಿರುವ ಮಹಿಳೆಯರು ಮಾತನಾಡಿಕೊಳ್ಳುವ ಸನ್ನಿವೇಶಗಳು ಭಾನುವಾರ ಪಟ್ಟಣದಲ್ಲಿ ಕಂಡು ಬಂದವು.
ಐದು ದಿನಗಳ ಹಬ್ಬ ಪಂಚಮಿ: ಸವಿಯಾದ ತರಹೇವಾರಿ ಪಲ್ಯಗಳೊಂದಿಗೆ ರೊಟ್ಟಿಯನ್ನು ಹಂಚಿ ಬಾಂಧವ್ಯ ಬೆಸೆಯುವ ರೊಟ್ಟಿ ಪಂಚಮಿಯೊಂದಿಗೆ ಭಾನುವಾರ ಆರಂಭಗೊಂಡು ಐದು ದಿನಗಳ ಹಬ್ಬ ಗುರುವಾರ ದವರೆಗೂ ನಡೆಯಲಿದೆ.
ಉತ್ತರ ಕರ್ನಾಟಕದ ಪ್ರಮುಖ ಆಹಾರವಾದ ರೊಟ್ಟಿ ಹಂಚುವುದೇ ವಿಶೇಷ. ಸಜ್ಜೆ ರೊಟ್ಟಿ, ಎನಗಾಯಿ ಪಲ್ಯ, ಕಾಳು ಪಲ್ಯ, ಹಸಿ ತರಕಾರಿ ಸವಿಯುವುದು ಹಬ್ಬದ ಮೊದಲ ದಿನದ ವಿಶೇಷ. ಎರಡನೇ ದಿನ ಸೋಮವಾರ ಮನೆ, ದೇವಸ್ಥಾನದ ಅಶ್ವತ್ಥ ಕಟ್ಟೆಗಳಲ್ಲಿ ನಾಗದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಹಾಲೆರೆದು ಸಂಭ್ರಮಿಸುವರು. ಕೆಲವೆಡೆ ನಾಗದೇವರ ಜಾತ್ರೆಯು ನಡೆಯುತ್ತದೆ.
ಮೂರನೇ ದಿನ ಮಂಗಳವಾರ ಹುತ್ತದ ಮಣ್ಣಿನಿಂದ ಮಾಡಿದ ನಾಗದೇವರಿಗೆ ಮನೆಯಲ್ಲಿ ಹಾಲೆರೆದು ಮಹಿಳೆಯರು ಸಂಭ್ರಮಿಸುತ್ತಾರೆ. ಯುವಕರು ಪಟ್ಟಣದ ಮುಖ್ಯ ಸ್ಥಳಗಳಲ್ಲಿ ಮಣ್ಣಿನ ನಾಗದೇವರ ನಿರ್ಮಿಸಿ ಹಾಲೆರೆದು ಸಂಭ್ರಮ ಪಡುತ್ತಾರೆ.
ನಾಲ್ಕನೇ ದಿನ ಬುಧವಾರ ಕರಿಕಟಾಂಬ್ಲಿ ಈ ದಿನದಂದು ಶುಭ ಕಾರ್ಯಗಳು ನಡೆಯುತ್ತವೆ.
ಐದನೇ ದಿನ ಗುರುವಾರ ವರ್ಷ ತೊಡಕು ಆಚರಿಸುತ್ತಾರೆ. ಹೀಗೆ ಐದು ದಿನಗಳ ಪಂಚಮಿ ಸಂಭ್ರಮದಿಂದ ನಡೆಯುತ್ತದೆ.
ಉಂಡಿ, ಕೊಬ್ಬರಿ ಸಂಭ್ರಮ: ನಾಗರ ಪಂಚಮಿ ದಿನ ಅಳ್ಳಿಟ್ಟು, ತಂಬಿಟ್ಟು ನೈವೇದ್ಯ ಹಾಗೂ ಉಂಡಿಗಳನ್ನು ತಯಾರಿಸುತ್ತಾರೆ. ಸೇಂಗಾ ಉಂಡಿ, ದಾನಿ ಉಂಡಿ, ಗುಳಿಗಿ ಉಂಡಿ, ಗುಳ್ಳಡಕಿ ಉಂಡಿ, ಹೆಸರು ಉಂಡಿ, ಕೊಬ್ಬರಿ ಉಂಡಿ ಮೊದಲಾದ ಪ್ರಕಾರದ ಉಂಡಿಗಳನ್ನು ತಯಾರಿಸಿ ಪರಸ್ಪರ ವಿನಿಮಯ ಮಾಡಿಕೊಂಡು ಸಂಭ್ರಮಿಸುತ್ತಾರೆ.
ಕೊಬ್ಬರಿ ಬುಗುರಿ: ಚಿಣ್ಣರಂತೂ ಕೊಬ್ಬರಿ ಬಟ್ಟಲಕ್ಕೆ ದಾರ ಕಟ್ಟಿ ಬುಗುರಿ ರೂಪದಲ್ಲಿ ಆಡಿಸುವ ಸನ್ನಿವೇಶ ರೋಚಕವಾಗಿ ಕಂಡು ಬರುತ್ತದೆ. ಜೋಕಾಲಿ ಸಂಭ್ರಮ ಎಲ್ಲೆಡೆ ಮನೆ ಮಾಡುತ್ತದೆ. ಐದು ದಿನಗಳ ಕಾಲ ನಡೆಯುವ ನಾಗರ ಪಂಚಮಿ ಹಬ್ಬ ಪರಸ್ಪರ ಬಾಂಧವ್ಯ ಬೆಸುಗೆಗೆ ಸಾಕ್ಷಿಯಾಗಿದೆ.
ಪಂಚಮಿ ಎಂದರೆ ಖುಷಿ. ತವರು ಮನೆಗೆ ಬರಲು ಅವಕಾಶ ಸಿಗುತ್ತದೆ. ಕುಟುಂಬದವರೊಂದಿಗೆ ಉಂಡಿ ಸವಿಯಲು ಅವಕಾಶ ಸಿಕ್ಕಂತಾಗಿದೆ. ನಾಗರಪಂಚಮಿ ನಾರಿಯರ ಹಬ್ಬವಾಗಿದೆ-ಲಕ್ಷ್ಮಿ ಅಪ್ಪೋಜಿ, ನರಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.