ADVERTISEMENT

ನರೇಗಲ್:‌ ಐತಿಹಾಸಿಕ ಕೆರೆಗಳ ಪುನಶ್ಚೇತನಕ್ಕೆ ಸಾರ್ವಜನಿಕರ ಆಗ್ರಹ

ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ: ಬಯಲುಶೌಚದ ಸ್ಥಳವಾದ ಕೆರೆಗಳು; ರೋಗ ಹರಡುವ ತಾಣವಾದ ಪುಷ್ಕರಣಿ

​ಪ್ರಜಾವಾಣಿ ವಾರ್ತೆ
Published 19 ಮೇ 2025, 4:44 IST
Last Updated 19 ಮೇ 2025, 4:44 IST
ನರೇಗಲ್‌ ಪಟ್ಟಣ ಪಂಚಾಯಿತಿ ಹಿಂಬದಿ ಇರುವ ಹಿರೇಕೆರೆಯಲ್ಲಿ (ನಾಲ್ಕನೇ ಕೆರೆ) ಬೆಳೆದಿರುವ ಆಪು, ಮುಳ್ಳಿನಕಂಟಿ ಹಾಗೂ ಬಯಲು ಶೌಚಕ್ಕೆ ಹೋಗುತ್ತಿರುವ ಬಾಲಕರು
ನರೇಗಲ್‌ ಪಟ್ಟಣ ಪಂಚಾಯಿತಿ ಹಿಂಬದಿ ಇರುವ ಹಿರೇಕೆರೆಯಲ್ಲಿ (ನಾಲ್ಕನೇ ಕೆರೆ) ಬೆಳೆದಿರುವ ಆಪು, ಮುಳ್ಳಿನಕಂಟಿ ಹಾಗೂ ಬಯಲು ಶೌಚಕ್ಕೆ ಹೋಗುತ್ತಿರುವ ಬಾಲಕರು   

ನರೇಗಲ್:‌ ಹಿಂದೊಮ್ಮೆ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಿಗೆ ಕುಡಿಯಲು ಹಾಗೂ ಕೃಷಿ ಭೂಮಿಗೆ ನೀರು ಒದಗಿಸುತ್ತಿದ್ದ ನರೇಗಲ್‌ ಕೆರೆಗಳು ಸದ್ಯ ಸಂಪೂರ್ಣವಾಗಿ ಬತ್ತಿ ಹೋಗಿವೆ. ಕೆರೆಯ ಸುತ್ತ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಹೂಳು ತುಂಬಿವೆ. ಹೀಗಿದ್ದರೂ ಸ್ಥಳೀಯ ಪಟ್ಟಣ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾಡಳಿತಗಳು ಕೆರೆ ಪುನಶ್ಚೇತನಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ನಡುವೆ ಇಲ್ಲಿನ ನೆಲ ಜಲ ಅಭಿವೃದ್ಧಿ ಸಮಿತಿ, ರೈತರು, ನರೇಗಲ್‌ ಅಭಿವೃದ್ಧಿ ಸಮಿತಿಯವರು ಸಮುದಾಯದ ಸಹಭಾಗಿತ್ವದಲ್ಲಿ ಆಗಾಗ ತಮ್ಮ ಕೈಲಾದಷ್ಟು ಕೆರೆ ಹೂಳೆತ್ತುವ ಕಾಯಕ ಮಾಡುತ್ತಿದ್ದಾರೆ. ಆದರೆ ಪೂರ್ಣಪ್ರಮಾಣದ ಅಭಿವೃದ್ಧಿ ಕಾರ್ಯ ನಡೆಯದೇ ಇರುವ ಕಾರಣ ನರೇಗಲ್‌ ಪಟ್ಟಣದ ಕೆರೆಗಳು ಬೆಳಿಗ್ಗೆ ಬಯಲು ಶೌಚದ ಜಾಗವಾದರೆ; ಸಂಜೆ ಕುಡುಕರು, ಪುಂಡರ ಅಡ್ಡೆಯಾಗಿ ಪರಿವರ್ತನೆಯಾಗುತ್ತಿವೆ. ಆದರೂ, ಆಡಳಿತ ವ್ಯವಸ್ಥೆಗೆ ನಾಚಿಕೆ ಬಂದಿಲ್ಲ ಎಂದು ಪ್ರಜ್ಞಾವಂತ ಜನರು ಕಿಡಿಕಾರಿದ್ದಾರೆ.

ನರೇಗಲ್‌ ಪಟ್ಟಣದ ಮೂಲಕ ಯಾವುದೇ ನದಿ, ಕಾಲುವೆಗಳು ಹಾಯ್ದು ಹೋಗಿಲ್ಲ. ಕೃಷಿಗೆ ಹೇಳಿಕೊಳ್ಳುವಂತ ಯಾವುದೇ ಜಲಮೂಲಗಳಿಲ್ಲ. ಬಹುತೇಕ ರೈತರು ಒಣ ಬೇಸಾಯ ಹಾಗೂ ಕೊಳವೆಬಾವಿ ನೀರಿನಿಂದ ಕೃಷಿ ಮಾಡುತ್ತಿದ್ದಾರೆ. ಕೊಳವೆಬಾವಿಗಳಿಗೆ ಜಲ ಮರುಪೂರಣ ಮಾಡುವ ಬೃಹತ್‌ ಕೆರೆಗಳು ಸರ್ಕಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಮಳೆಗಾಲದಲ್ಲಿ ಮಳೆ ನೀರನ್ನೂ ಸಂಗ್ರಹಿಸಿಟ್ಟುಕೊಳ್ಳದಷ್ಟು ಹೂಳು ತುಂಬಿಕೊಂಡು, ಕೆರೆ ಅಂಗಳದಲ್ಲಿ ಜಾಲಿ ಕಂಟಿಗಳು ಬೆಳೆದು ನಿಂತಿವೆ.

ADVERTISEMENT

ಹೊಸ ಬಸ್‌ ನಿಲ್ದಾಣದಿಂದ ಅಬ್ಬಿಗೇರಿ ಮಾರ್ಗದ ಕಡೆಗೆ ಹೋಗುವಾಗ ಎಡಭಾಗಕ್ಕೆ ಬರುವ ಐತಿಹಾಸಿಕ ಹಿರೇಕೆರೆ ನರೇಗಲ್‌ ಪಟ್ಟಣದ ಜನರ ಪ್ರಮುಖ ಜಲಮೂಲವಾಗಿದೆ. ಅಂದಾಜು 30 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಯನ್ನು ನಾಲ್ಕು ಚಿಕ್ಕ ಕೆರೆಗಳಾಗಿ ವಿಂಗಡಿಸಲಾಗಿದೆ. ಕೋಡಿಕೊಪ್ಪದ ಭಾಗದಿಂದ ಎರಡು ಕೆರೆಗಳ ಹೂಳನ್ನು ರೈತರು ತಾವೇ ಸ್ವಯಂ ಪ್ರೇರಣೆಯಿಂದ 2020ರಲ್ಲಿ ತೆಗೆದಿದ್ದರು. ಮತ್ತೇ ಮರಳಿ ಹೂಳು, ಮುಳ್ಳಿನ ಕಂಟಿಗಳು ಬೆಳೆಯಲು ಆರಂಭಿಸಿವೆ. ಮೂರನೇ ಕೆರೆಯನ್ನು ಸಹ ರೈತರು ಈಚೆಗೆ ಹೂಳು ತೆಗೆಯಲು ಆರಂಭಿಸಿ ನಂತರ ನಿಲ್ಲಿಸಿದ್ದಾರೆ. ಆದರೆ ವೈಜ್ಞಾನಿಕವಾಗಿ ಹೂಳು ತೆಗೆಯುವ ಕಾರ್ಯ ನಡೆಯದೇ ಇರುವ ಕಾರಣ ಕೆಲವು ಕಡೆಗಳಲ್ಲಿ ಆಳವಾದ ತಗ್ಗು ಪ್ರದೇಶವಿದ್ದರೆ, ಇತರೆ ಕಡೆ ಎತ್ತರ ಪ್ರದೇಶ ನಿರ್ಮಾಣವಾಗಿದೆ. ಇದನ್ನು ಸಂಬಂಧಪಟ್ಟ ಇಲಾಖೆಯವರು ವೈಜ್ಞಾನಿಕ ಸ್ವರೂಪ ನೀಡಲು ಮುಂದಾಗಬೇಕು ಎನ್ನುವುದು ಗ್ರಾಮದ ಜನರ ಆಗ್ರಹವಾಗಿದೆ.

ಅದೇ ರೀತಿ ನಾಲ್ಕನೇ ಕೆರೆಯಲ್ಲೂ (ಪಟ್ಟಣ ಪಂಚಾಯಿತಿಯ ಹಿಂಬದಿಯ ಕೆರೆ) ಹೂಳು ತುಂಬಿದ್ದು, ಪಟ್ಟಣದ ಚರಂಡಿ ನೀರು ಇಲ್ಲಿಗೆ ಬಂದು ಸೇರುತ್ತದೆ. ಇದರಿಂದಾಗಿ ಕೆಟ್ಟ ದುರ್ವಾಸನೆ ಬೀರುತ್ತಿದೆ. ಚರಂಡಿ ನೀರು ಹರಿದು ಹೋಗಲು ಪರ್ಯಾಯ ವ್ಯವಸ್ಥೆ ಮಾಡಿ, ಮಳೆ ನೀರು ಸಂಗ್ರಹ ಮಾಡಿದರೆ ಉಪಯೋಗವಾಗುತ್ತದೆ ಎನ್ನುವುದು ಜನರ ಅಭಿಪ್ರಾಯವಾಗಿದೆ.

ಅದೇ ರೀತಿ, ಹಿರೇಕೆರೆಗೆ ಹರಿದು ಬರುವ ಮಳೆ ನೀರಿನ ಮಾರ್ಗಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಬೇಕು. ಕೆರೆ ತುಂಬಿದರೆ ಮಾತ್ರ ನರೇಗಲ್‌, ಕೋಡಿಕೊಪ್ಪ, ಕೋಚಲಾಪುರ, ತೋಟಗಂಟಿ, ಮಲ್ಲಾಪುರ, ಬೂದಿಹಾಳ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿರುವ ಕೊಳವೆಬಾವಿಗಳು ಮರುಪೂರಣಗೊಳ್ಳುತ್ತವೆ. ಇಲ್ಲವಾದರೆ ಜನರು ತೊಂದರೆಗೆ ಒಳಗಾಗುತ್ತಾರೆ.

ಒಂದು ಕಾಲದಲ್ಲಿ ಪುಷ್ಕರಣಿಯಾಗಿದ್ದ ಪಟ್ಟಣದ ದರ್ಗಾ ಮುಂಭಾಗದ ನಾಗರಕೆರೆ ಸಹ ಈಗ ಕಲುಷಿತ ನೀರು ತುಂಬಿಕೊಂಡು ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ. ಈ ಹಿಂದೆ ನಾಗರಕೆರೆಯಲ್ಲಿ ಸ್ನಾನ ಮಾಡಿದರೆ ಅನೇಕ ಚರ್ಮ ರೋಗಗಳು ನಿವಾರಣೆಯಾಗುತ್ತಿದ್ದವು ಎಂಬುದು ಇಲ್ಲಿನ ಜನರ ನಂಬಿಕೆಯಾಗಿತ್ತು. ಆದರೆ, ಇಂದು ಈ ಕೆರೆ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ರೋಗಗಳನ್ನು ಹರಡುವ ತಾಣವಾಗಿದೆ. ಒತ್ತುವರಿಗೆ ಒಳಗಾಗಿರುವ ಕೆರೆಯ ಸುತ್ತಲಿನ ಮನೆಗಳ ಕಲುಷಿತ ನೀರು ಇಲ್ಲಿಗೆ ಸೇರುತ್ತಿದ್ದು, ಸಂಪೂರ್ಣ ಕಲ್ಮಷವಾಗಿದೆ. ಸೊಳ್ಳೆಗಳ ಆಶ್ರಯ ತಾಣವಾಗಿದೆ. ಸಂಜೆ ಹಾಗೂ ನಸುಕಿನ ವೇಳೆ ಕೆರೆಯ ದಂಡೆಯ ಮೇಲೆ ಹಾಗೂ ಉಳಿದ ಸಂದರ್ಭದಲ್ಲಿ ಕೆರೆಯಲ್ಲಿ ಜನರು ಬಹಿರ್ದೆಸೆಗೆ ಮುಂದಾಗುತ್ತಿದ್ದಾರೆ. ಇದರಿಂದಾಗಿ ಹಂದಿಗಳ ಆಶ್ರಯ ತಾಣವಾಗಿ ಬದಲಾಗಿದೆ. ಅದೇರೀತಿ ದ್ಯಾಂಪುರ, ಕೋಚಲಾಪುರ, ತೋಟಗಂಟಿ ಸೇರಿದಂತೆ ಹಲವು ಕೆರೆಗಳು ಕಾಯಕಲ್ಪವಿಲ್ಲದೇ ಮುಳ್ಳುಕಂಟಿಗಳು ಬೆಳೆದು ನಿಂತಿವೆ.

ಜಲಮೂಲ ಸಂರಕ್ಷಣೆಗೆ ಸರ್ಕಾರ ಸಾಕಷ್ಟು ಹಣ ವಿನಿಯೋಗಿಸುತ್ತದೆ. ಜತೆಗೆ ಜನಜಾಗೃತಿಯನ್ನೂ ಮೂಡಿಸುತ್ತದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ನರೇಗಲ್‌ ಭಾಗದ ಕೆರೆಗಳ ಪರಿಸ್ಥಿತಿ ಹಳ್ಳ ಹಿಡಿದಿದೆ. ಆಡಳಿತ ವ್ಯವಸ್ಥೆ ಈಗಲಾದರೂ ಎಚ್ಚೆತ್ತುಕೊಂಡು ಪ್ರಜ್ಞಾಂತರ ಜನರ ಸಹಭಾಗಿತ್ವದಲ್ಲಿ ಜಲಮೂಲಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನರೇಗಲ್‌ ಪಟ್ಟಣದ ಹಿರೇಕೆರೆಯಲ್ಲಿ ರೈತರು ಅಲ್ಲಲ್ಲಿ ಹೂಳೆತ್ತಿರುವುದು
ನರೇಗಲ್‌ ಪಟ್ಟಣದ ನಾಗರಕೆರೆಯಲ್ಲಿ ಹಾಕಲಾಗಿರುವ ಕಸ ಹಾಗೂ ಕೆರೆಯಲ್ಲಿ ಬೆಳೆದಿರುವ ಆಪು
ನಮ್ಮಲ್ಲಿ ಕೆರೆ ಅಳತೆಗಳು ಮುಗಿದಿವೆ. ಆದರೂ ನರೇಗಲ್‌ ಹಿರೇಕೆರೆ ಅಳತೆ ಮಾಡಿರುವ ಬಗ್ಗೆ ಮರು ಪರಿಶೀಲನೆ ನಡೆಸಲಾಗುವುದು
ರುದ್ರನಗೌಡ ಡಿಡಿಎಲ್‌ಆರ್
ಮುಂಬರುವ ಯೋಜನೆ ಹಾಗೂ ಅನುದಾನದಲ್ಲಿ ಪಟ್ಟಣದ ಹಿರೇಕೆರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು
ಮಹೇಶ ಬಿ.ನಿಡಶೇಶಿ ನರೇಗಲ್‌ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಸರ್ವೇ ಅಧಿಕಾರಿಗಳ ನಿರ್ಲಕ್ಷ್ಯ; ಆರೋಪ

‘ರಾಜಮನೆತನಗಳ ಆಡಳಿತದ ಅವಧಿಯಲ್ಲಿ132 ಎಕರೆ ವಿಸ್ತೀರ್ಣ ಹೊಂದಿತ್ತು ಎನ್ನಲಾಗುವ ಕೆರೆ ನಂತರದ ದಿನಮಾನಗಳಲ್ಲಿ ಒತ್ತುವರಿಯಾಗಿ 69 ಎಕರೆಗೆ ಕುಗ್ಗಿತು’ ಎನ್ನುತ್ತಾರೆ ಹಿರಿಯರು. 1962ರಲ್ಲಿ ವಿದ್ಯುತ್ ಗ್ರಿಡ್‌ಗಾಗಿ ಕೆರೆಯ ಒಂದು ಭಾಗವನ್ನು ಬಿಟ್ಟುಕೊಟ್ಟ ನಂತರ ಈಗ ಕೇವಲ 30 ಎಕರೆಗೆ ಬಂದು ನಿಂತಿದೆ. ಹೀಗಾಗಿ ಹಿರೇಕೆರೆಯನ್ನು ಅಳತೆ ಮಾಡಿಕೊಡಬೇಕು. ಕೆರೆ ಎಲ್ಲಿಯವರೆಗೆ ಇದೆ ಎನ್ನುವುದನ್ನು ಗುರುತಿಸಿ ಕೊಡಬೇಕು ಎಂದು ರೋಣ ಸರ್ವೇ ಅಧಿಕಾರಿಗಳಿಗೆ 2019-20 ರಿಂದ ಇಲ್ಲಿಯವರೆಗೆ ಅನೇಕಬಾರಿ ಮನವಿ ಸಲ್ಲಿಸಿದ್ದೇವೆ. ಈ ಹಿಂದೆಯಿದ್ದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಂದ ಮತ್ತು ಜನಪ್ರತಿನಿಧಿಗಳ ಮೂಲಕ ಹೇಳಿಸಿದ್ದೇವೆ. ಆದರೂ ಸಹ ಕೆರೆಯನ್ನು ಪೂರ್ಣ ಪ್ರಮಾಣವಾಗಿ ಅಳತೆ ಮಾಡದೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಎನ್ನುವುದು ಗ್ರಾಮದ ಹಿರಿಯರ ಆರೋಪವಾಗಿದೆ.

ತ್ಯಾಜ್ಯ ಎಸೆಯುವ ತಾಣವಾದ ಕೆರೆಗಳು

ಪಟ್ಟಣದ ಹಿರೇಕೆರೆ ಹಾಗೂ ನಾಗರ ಕೆರೆಗಳಲ್ಲಿ ಜನರು ಮನೆ ಕಸ ಪ್ಲಾಸ್ಟಿಕ್‌ ಸತ್ತ ಕೋಳಿ ನಾಯಿ ಹಂದಿಗಳನ್ನು ಚಿಕನ್‌ ಅಂಡಿಯವರು ಕತ್ತರಿಸಿದ ಮಾಂಸ ಕಟ್ಟಿಂಗ್‌ ಅಂಗಡಿಯವರು ಕತ್ತರಿಸಿದ ಕೂದಲುಗಳನ್ನು ಇತರೇ ಅಂಗಡಿಯವರು ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ. ಇದರಿಂದಾಗಿ ನಿರಂತರವಾಗಿ ದುರ್ವಾಸನೆ ಬೀರುತ್ತಿವೆ. ಸದ್ಯ ನೀರು ಸಂಗ್ರಹಿಸುವ ಕೆರೆಗಳು ರೋಗ ಹರಡುವ ಕೇಂದ್ರಗಳಾಗಿ ಬದಲಾಗಿವೆ. ಆದ್ದರಿಂದ ನರೇಗಲ್‌ ಜನರಿಗೆ ಚಿಕೂನ್‌ಗುನ್ಯಾ ಡೆಂಗಿ ವೈರಲ್ ಜ್ವರ ಮೊದಲಾದ ಸೋಂಕು ರೋಗಗಳ ಹಾವಳಿ ಸಾಮಾನ್ಯವಾಗಿದೆ.

ಜನಪ್ರತಿನಿಧಿಗಳು ಏನಂತಾರೆ?

ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ ನರೇಗಲ್‌ ಹಿರೇಕೆರೆ ಅಭಿವೃದ್ಧಿಗಾಗಿ ಪ್ರಯತ್ನ ನಡೆದಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅದು ಮಂಜೂರಾದರೆ ಅನುದಾನ ದೊರೆಯಲಿದೆ.ಜಿ.ಎಸ್.‌ಪಾಟೀಲ ರೋಣ ಶಾಸಕ ಶೀಘ್ರವೇ ಅಭಿವೃದ್ಧಿ ನಗರೋತ್ಥಾನದವರು ಹಿರೇಕೆರೆಯನ್ನು ವೀಕ್ಷಣೆ ಮಾಡಿಕೊಂಡು ಹೋಗಿದ್ದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ

-ಫಕೀರಪ್ಪ ಮಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ

ಅನುದಾನ ಬಿಡುಗಡೆ ಕೆರೆಯ ಸುತ್ತಲೂ ಕಲ್ಲು ಜೋಡಿಸುವ ಹಾಗೂ ತಂತಿಬೇಲಿ ಹಾಕುವ ಯೋಜನೆಗೆ ಅನುದಾನ ಬಿಡುಗಡೆಯಾಗಿದೆಕುಮಾರಸ್ವಾಮಿ ಕೋರಧಾನ್ಯಮಠ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕೆರೆ ಅಭಿವೃದ್ಧಿಯಾದರೆ ಲಾಭ ಹಿರೇಕೆರೆ ಅಭಿವೃದ್ಧಿಯಾದರೆ ಪಟ್ಟಣ ಪಂಚಾಯಿತಿಗೆ ವಾಣಿಜ್ಯಿಕ ಲಾಭವಿದೆ. ಅದಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಪ್ರಯತ್ನ ಮಾಡಲಾಗುವುದು

-ಮುತ್ತಪ್ಪ ನೂಲ್ಕಿ ಸ್ಥಾಯಿ ಸಮಿತಿ ಚೇರ್ಮನ್‌

ಜನ ಏನಂತಾರೆ?

ಸಿಎಸ್‌ಆರ್‌ ನಿಧಿ ಬಳಸಿ ವಿಂಡ್‌ ಕಂಪನಿಗಳ ಸಿಎಸ್‌ಆರ್‌ ಅನುದಾನದಡಿ ಕೆರೆ ಅಭಿವೃದ್ದಿ ಮಾಡಿಸಿ ಕೊಡುವಂತೆ ಬೇಡಿಕೆ ಇಟ್ಟಿದ್ದೇವೆ. ಆದರೆ ಸರ್ವೇ ಇಲಾಖೆಯವರು ಕೆರೆಯನ್ನು ಅಳತೆ ಮಾಡಿ ಕೊಡುತ್ತಿಲ್ಲ. ಇದರಿಂದ ತುಂಬಾ ತೊಂದರೆಯಾಗಿದೆ

-ಶಿವನಗೌಡ ಪಾಟೀಲ ನರೇಗಲ್‌ ಅಭಿವೃದ್ಧಿ ಸಮಿತಿ ಅಧ್ಯಕ್ಷ

ಕೆರೆ ಅಭಿವೃದ್ಧಿಗೆ ಮಹತ್ವ ನೀಡಿ ಕೆರೆಗಳು ಕುಡುಕರ ತಾಣವಾಗಬಾರದು. ಅಲ್ಲಿ ಜನರ ಓಡಾಟ ನಿರಂತರವಾಗಿರಬೇಕು. ಅದಕ್ಕಾಗಿ ಕೆರೆಗಳ ಅಭಿವೃದ್ದಿ ಜತೆಗೆ ವಾಯುವಿಹಾರದ ರಸ್ತೆ ಕೆರೆ ಸೌಂದರ್ಯದ ಹೆಚ್ಚಳಕ್ಕೂ ಮಹತ್ವ ನೀಡಬೇಕು.

-ಜಗದೀಶ ಸಂಕನಗೌಡ್ರ ರೈತ ಸಮೃದ್ದಿ ಕೇಂದ್ರದ ಅಧ್ಯಕ್ಷ

ನೀರು ತುಂಬಿಸಲೂ ಕ್ರಮವಹಿಸಲಿ ಕೆರೆ ಅಭಿವೃದ್ದಿಯ ಜತೆಗೆ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೂ ಅಷ್ಟೇ ಮಹತ್ವ ನೀಡಬೇಕು. ಇದರಿಂದ ಸುತ್ತಮುತ್ತಲಿನ ಎಲ್ಲಾ ಕೊಳವೆಬಾವಿಗಳು ಮರುಪೂರಣ ಆಗುತ್ತವೆ

-ಶರಣಪ್ಪ ಧರ್ಮಾಯತ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.