ಶಿರಹಟ್ಟಿ: ಕೃಷಿ ಇಲಾಖೆ, ಇಫ್ಕೊ ಸಂಸ್ಥೆ ಹಾಗೂ ತಾಲ್ಲೂಕು ಕೃಷಿ ಪರಿಕರಗಳ ಮಾರಾಟ ಸಂಘದ ಸಹ ಭಾಗಿತ್ವದಲ್ಲಿ ತಾಲ್ಲೂಕಿನ ಛಬ್ಬಿ ಗ್ರಾಮದ ಜಮೀನೊಂದರಲ್ಲಿ ಡ್ರೋನ್ ಮೂಲಕ ನ್ಯಾನೊ ಯೂರಿಯೂ ಮತ್ತು ನ್ಯಾನೊ ಡಿಎಪಿ ಸಿಂಪಡಣೆ ಪ್ರಾತ್ಯಕ್ಷಿಕೆ ನಡೆಯಿತು.
ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದ ಜಿಲ್ಲಾ ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್ ಮಾತನಾಡಿ, ‘ನ್ಯಾನೊ ಗೊಬ್ಬರ ಬೆಳೆಗಳಿಗೆ ಅಗತ್ಯ ಸಾರಜನಕ ನೀಡುತ್ತದೆ. ಡ್ರೋನ್ ಮೂಲಕ ನ್ಯಾನೊ ಗೊಬ್ಬರ ಸಿಂಪಡಿಸುವುದರಿಂದ ನೇರವಾಗಿ ಎಲೆಗಳ ಮೇಲೆ ಬಿದ್ದು ಪೋಷಕಾಂಶದ ಸದ್ಬಳಕೆಯಾಗುತ್ತದೆ. ಇದರಿಂದ ಗೊಬ್ಬರ ಪೋಲಾಗುವಿಕೆ ಕಡಿಮೆಯಾಗುತ್ತದೆ’ ಎಂದರು.
‘ಯೂರಿಯಾ ಗೊಬ್ಬರವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳತ್ತಿದ್ದು, ಸರ್ಕಾರ ಹಾಗೂ ರೈತರು ಹೆಚ್ಚು ಕಾಯಬೇಕು. ಇದನ್ನು ಕೈಯಿಂದ ಸಿಂಪಡಣೆ ಮಾಡುವುದರಿಂದ ಹೆಚ್ಚಿನ ಗೊಬ್ಬರ ನೆಲಕ್ಕೆ ಬಿದ್ದು, ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಭಾರತದಲ್ಲಿ ತಯಾರಿಸುತ್ತಿರುವ ನ್ಯಾನೊ ಗೊಬ್ಬರವು ಮಾರುಕಟ್ಟೆಯ ಎಲ್ಲಾ ಗೊಬ್ಬರದಂಗಡಿಗಳಲ್ಲಿ ದೊರೆಯುತ್ತಿದ್ದು, ಕಡಿಮೆ ಖರ್ಚಿನಲ್ಲಿ ಸಿಂಪಡಣೆ ಮಾಡಬಹುದು’ ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ಮಾತನಾಡಿ, ‘ನ್ಯಾನೊ ಯೂರಿಯಾ ಬೆಳೆಗೆ ಪೋಷಕಾಂಶ ಒದಗಿಸಿ ಇಳುವರಿ ಹೆಚ್ಚಿಸುತ್ತದೆ. ಕೈಯಿಂದ ಗೊಬ್ಬರ ಹಾಕುವುದರಿಂದ ಶೇ 30ರಷ್ಟು ಮಾತ್ರ ಬೆಳೆಗಳಿಗೆ ಬಳಕೆಯಾಗುತ್ತದೆ. ನ್ಯಾನೊ ಯೂರಿಯಾ/ ಡಿಎಪಿಯನ್ನು ಡ್ರೋನ್ ಮೂಲಕ ಸಿಂಪಡಿಸಿದರೆ ಶೇ 80 ರಷ್ಟು ಬೆಳೆಗಳಿಗೆ ತಲುಪುತ್ತದೆ’ ಎಂದು ತಿಳಿಸಿದರು.
ಒಂದು ಎಕರೆಗೆ ಡ್ರೋನ್ ಮೂಲಕ ಕೇವಲ 6 ರಿಂದ 8 ನಿಮಿಷದಲ್ಲಿ ನ್ಯಾನೊಗೊಬ್ಬರವನ್ನು ಸಿಂಪಡಣೆ ಮಾಡಬಹುದು. ಇಫ್ಕೊ ಸಂಸ್ಥೆ ವತಿಯಿಂದ ಪ್ರತಿ ಎಕರೆಗೆ ₹350 ನಿಗದಿಪಡಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದರೊಂದಿಗೆ ಕಾಳು ಯೂರಿಯಾ ಗೊಬ್ಬರ ಬಳಕೆ ಕಡಿಮೆ ಮಾಡಿ ಮಣ್ಣಿನ ಸಂರಕ್ಷಣೆ ಮಾಡಬೇಕು’ ಎಂದರು.
ಕೃಷಿಕ ಸಮಾಜದ ಉಪಾಧ್ಯಕ್ಷ ಗುರಪ್ಪ ಲಮಾಣಿ, ವೀರಣ್ಣ ಕೊಡ್ಲಿ, ಕೃಷಿ ಸಖಿಯರು, ಇಲಾಖೆಯ ಸಿಬ್ಬಂದಿ, ಗ್ರಾಮದ ರೈತ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.