
ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ದೀಪಾವಳಿ ಎರಡನೇ ದಿನ ಮಂಗಳವಾರ ಅಮಾವಾಸ್ಯೆಯನ್ನು ವಿಶೇಷ ಪೂಜೆಯೊಂದಿಗೆ ಆಚರಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷ್ಮಿ ಪೂಜೆ ಸಂಭ್ರಮದಿಂದ ನಡೆಯಿತು. ನಗರ ಪ್ರದೇಶಗಳಲ್ಲಿ ಬಲಿಪಾಡ್ಯವನ್ನು ಜೋರಾಗಿ ಆಚರಿಸಿದರು.
ತಾಲ್ಲೂಕಿನಾದ್ಯಂತ ದೀಪಾವಳಿ ಸಂಭ್ರಮ ಕಂಡುಬಂದಿತು. ಅತಿವೃಷ್ಟಿಯ ಸಂಕಷ್ಟದ ನಡುವೆಯೂ ಸಂಪ್ರದಾಯ, ಸಂಸ್ಕೃತಿ ದ್ಯೋತಕವಾಗಿ ಮನೆ, ಅಂಗಡಿಗಳಲ್ಲಿ ಹಾಗೂ ವಾಹನಗಳ ಪೂಜೆ ಅಲಂಕಾರಯುಕ್ತವಾಗಿ ನಡೆಯಿತು.
ಖರೀದಿ ಜೋರು: ಸೋಮವಾರ ಮಂಕಾಗಿದ್ದ ಖರೀದಿ ವಹಿವಾಟು ಎರಡನೇ ದಿನ ಜೋರಾಗಿತ್ತು. ಅದರಲ್ಲೂ ಹೂ, ಹಣ್ಣು ಖರೀದಿ ಹೆಚ್ಚಿದ್ದು, ಅಧಿಕ ದರದಲ್ಲಿ ಮಾರಾಟವಾದವು.
ನೇಪಥ್ಯಕ್ಕೆ ಸರಿದ ಆಕಾಶಬುಟ್ಟಿಗಳು: ದೀಪಾವಳಿ ಬಂತೆಂದರೆ ಪ್ರತಿ ಮನೆಯಲ್ಲೂ ಬಿದಿರು ಸೀಳಿ, ವರ್ಣಗಳ ಕಾಗದ ಅಂಟಿಸಿ ತೂಗುಹಾಕಿ ದೀಪ ಹಚ್ಚಲಾಗುತ್ತಿತ್ತು. ಆದರೆ ಅವುಗಳು ಇಲ್ಲವಾಗಿ ರೆಡಿಮೇಡ್ ಆಕಾಶಬುಟ್ಟಿಗಳನ್ನು ಎಲ್ಲ ಅಂಗಡಿಗಳಲ್ಲಿ ಮಾರಾಟ ಮಾಡಲು ಇಡಲಾಗಿದ್ದು ಹೆಚ್ಚಿನ ಅಂಗಡಿಗಳಲ್ಲಿ ಅವುಗಳ ಮಾರಾಟ ನಡೆಯಿತು.
ಚಿಣ್ಣರ ಪಟಾಕಿ ಸಂಭ್ರಮ: ಚಿಣ್ಣರು ನವನವೀನ ವೇಷಭೂಷಣಗಳೊಂದಿಗೆ ಮಿಂಚಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಭಯಮಿಶ್ರಿತ ರೋಮಾಂಚನಗೊಂಡರು. ದೀಪಾವಳಿ ಎರಡನೇ ದಿನ ತಾಲ್ಲೂಕಿನಲ್ಲಿ ಸಂಭ್ರಮ ಕಂಡು ಬಂದು ಬಲಿಪಾಡ್ಯ ಪೂಜೆಗೆ ತಯಾರಿ ಜೋರಾಗಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.