ನರಗುಂದ: ‘ಭಕ್ತರ ಸಹಕಾರದಿಂದ ಮಾತ್ರ ಮಠಗಳು ಅಭಿವೃದ್ಧಿಗೊಂಡು ಸಮಾಜಮುಖಿ ಕೆಲಸ ಮಾಡಲು ಸಾಧ್ಯ’ ಎಂದು ಕಿಲ್ಲಾ ತೋರಗಲ್ ಗಚ್ಚಿನ ಹಿರೇಮಠದ ಚನ್ಮಮಲ್ಲ ಶಿವಾಚಾರ್ಯರು ಹೇಳಿದರು.
ಪಟ್ಟಣದ ಪತ್ರಿವನ ಮಠದಲ್ಲಿ ಭಾನುವಾರ ಲಿಂ. ಶಂಭುಲಿಂಗ ಶ್ರೀಗಳ ಜನ್ಮದಿನೋತ್ಸವ ಹಾಗೂ ಪೀಠಾಧಿಪತಿ ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯರ 43ನೇ ವರ್ಧಂತಿ ಉತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಭಕ್ತರ ಸಹಕಾರದಿಂದ ಪತ್ರಿವನಮಠ ನಾಡಿಗೆ ಅಧ್ಯಾತ್ಮ, ಸಾಹಿತ್ಯ, ಸಂಸ್ಕೃತಿಯನ್ನು ಪಸರಿಸುತ್ತಿದೆ. ಪೀಠಾಧಿಪತಿ ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರಿಂದ ಸುತ್ತಮುತ್ತಲಿನ ಹಲವಾರು ಗ್ರಾಮಗಳು ಅಧ್ಯಾತ್ಮಕ್ಕೆ ಒಳಗಾಗಿವೆ’ ಎಂದರು.
ಹರ್ಲಾಪುರದ ಢವಳೇಶ್ವರ ಹಿರೇಮಠದ ರೇಣುಕ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ‘ಪುಣ್ಯದ ತಾಣವೇ ಪತ್ರಿವನ ಮಠವಾಗಿದೆ. ಶಿಥಿಲಗೊಂಡ ದೇವಸ್ಥಾನಗಳನ್ನು ಸಮುದಾಯದವರ ಜೊತೆಗೂಡಿ ಜೀರ್ಣೋದ್ಧಾರಗೊಳಿಸಿದ ಕೀರ್ತಿ ಸಿದ್ದವೀರ ಶಿವಾಚಾರ್ಯರಿಗೆ ಸಲ್ಲುತ್ತದೆ’ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ‘ನವಲಗುಂದ ಕ್ಷೇತ್ರದ ಜನರಿಗೂ ಪತ್ರಿವನ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಅತಿವೃಷ್ಟಿಯಿಂದ ಹಾನಿಗೊಂಡ ಬೆಳೆಗಳ ರೈತರಿಗೆ ಪರಿಹಾರ ನೀಡುವಂತೆ ವಿಧಾನಸಭೆಯಲ್ಲಿ ಮನವಿ ಮಾಡಿದ್ದೇನೆ’ ಎಂದರು.
ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ಶಂಭುಲಿಂಗರ ಆಶೀರ್ವಾದದಿಂದ ಮಠ ಬೃಹದಾಕಾರವಾಗಿ ಬೆಳೆದಿದೆ. ಬರುವ ಬೇಸಿಗೆ ಸಂದರ್ಭದಲ್ಲಿ ಶಂಭುಲಿಂಗ ಶ್ರೀಗಳ ಜನ್ಮ ಶತಮಾನೋತ್ಸವವನ್ನು 35 ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.
ಕೆಪಿಸಿಸಿ ವಕ್ತಾರ ವೈದ್ಯ ಸಂಗಮೇಶ ಕೊಳ್ಳಿಯವರ ಮಾತನಾಡಿದರು. ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ವಿರಕ್ತಮಠದ ಶಿವಕುಮಾರ ಶ್ರೀ, ಮುನವಳ್ಳಿಯ ಮುರುಘೇಂದ್ರ ಶ್ರೀ, ಸಚ್ಚಿದಾನಂದ ಶ್ರೀ, ಮಲ್ಲಾಪುರದ ಶಂಕರ ಕಳಿಗೊಣ್ಣವರ, ಹಂಚಿನಾಳದ ಗುರುನಾಥ್ ಗಂಗಲ್, ಅನೀಲ ಧರಿಯಣ್ಣವರ, ಈಶ್ವರ ಮಠಪತಿ, ಆರ್.ಬಿ. ಚಿನಿವಾಲರ, ಪ್ರವೀಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.