ADVERTISEMENT

ನರಗುಂದ: ಇದ್ದು ಇಲ್ಲದಂತಾದ ನರಗುಂದ ಗ್ರಾಮೀಣ ಬಸ್ ನಿಲ್ದಾಣ

ಬಸವರಾಜ ಹಲಕುರ್ಕಿ
Published 14 ಏಪ್ರಿಲ್ 2025, 5:16 IST
Last Updated 14 ಏಪ್ರಿಲ್ 2025, 5:16 IST
ನರಗುಂದ ಗ್ರಾಮೀಣ ಬಸ್ ನಿಲ್ದಾಣ ಬಹಿರ್ದೆಸೆಯ ತಾಣವಾಗಿರುವ ದೃಶ್ಯ
ನರಗುಂದ ಗ್ರಾಮೀಣ ಬಸ್ ನಿಲ್ದಾಣ ಬಹಿರ್ದೆಸೆಯ ತಾಣವಾಗಿರುವ ದೃಶ್ಯ   

ನರಗುಂದ: ಪಟ್ಟಣ ದಿನೇ ದಿನೇ ಬೆಳೆಯುತ್ತಿದೆ. ಜನಸಂಖ್ಯೆಯೂ ಏರುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಇಲ್ಲಿನ ಸಂಚಾರ ವ್ಯವಸ್ಥೆ ಸುಧಾರಿಸಿಲ್ಲ. ಇರುವ ಬಸ್ ನಿಲ್ದಾಣ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. 

ಪಟ್ಟಣವು ಹುಬ್ಬಳ್ಳಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೇಲಿದೆ. ಇದಕ್ಕೆ ಹೊಂದಿಕೊಂಡೇ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣವಿದೆ. ಬೇರೆ ತಾಲ್ಲೂಕು ಕೇಂದ್ರ ಹಾಗೂ ಪಟ್ಟಣಗಳಿಗೆ ಹೋಲಿಸಿದಾಗ ಇಲ್ಲಿ ಬಸ್‌ಗಳ ಸಂಚಾರ ಹೆಚ್ಚಿದೆ. ಹಾಗಾಗಿ, ಈ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಸಾರ್ವಜನಿಕರ ಒತ್ತಾಯಕ್ಕೆ ಈವರೆಗೆ ಸರ್ಕಾರ ಸ್ಪಂದಿಸಿಲ್ಲ.

ಬಹಿರ್ದೆಸೆಯ ತಾಣ: ಬಸ್ ನಿಲ್ದಾಣವು ಸುಮಾರು ಒಂದು ಎಕರೆಗಿಂತಲೂ ಹೆಚ್ಚು ವಿಸ್ತಾರ ಹೊಂದಿದೆ. ಇದರಲ್ಲಿ ಶೇ 50ರಷ್ಟು ಪ್ರದೇಶ ಬಳಕೆಯಾಗಿದ್ದು, ಅಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಉಳಿದ ಜಾಗದಲ್ಲಿ ಗಡಿಗಂಟಿಗಳು ಬೆಳೆದಿವೆ. ತ್ಯಾಜ್ಯ ವಸ್ತುಗಳನ್ನು ಸುರಿಯುವ ಜಾಗವಾಗಿಯೂ ಬಳಕೆ ಆಗುತ್ತಿದೆ. ಉಳಿದ ಅಲ್ಪ ಜಾಗದಲ್ಲಿ ಗ್ರಾಮೀಣ ಬಸ್‌ಗಳ ನಿಲುಗಡೆಗೆ ತಗಡಿನ ಶೆಲ್ಟರ್ ಮಾಡಲಾಗಿದೆ.

ADVERTISEMENT

‘ಗ್ರಾಮೀಣ ಬಸ್ ನಿಲ್ದಾಣದ ಆವರಣ ಬಹಿರ್ದೆಸೆಯ ತಾಣವಾಗಿದೆ. ಮಳೆ ಬಂದರಂತೂ ಕೆಸರಿನ ಹೊಂಡ ನಿರ್ಮಾಣವಾಗಿ ಸೊಳ್ಳೆಗಳ ಉತ್ಪತ್ತಿ ತಾಣವಾಗಿ, ಇಡೀ ಬಸ್ ನಿಲ್ದಾಣ ದುರ್ವಾಸನೆಗೆ ಬೀರುತ್ತದೆ. ಅದರ ಅನತಿ ದೂರದಲ್ಲಿ ಗ್ರಾಮೀಣ ಬಸ್‌ಗಳು ನಿಲುಗಡೆಯಾಗುತ್ತವೆ. ಬಸ್ ಹೊರಡುವವರೆಗೂ ಅಲ್ಲಿ ನಿಲ್ಲುವುದು, ಬಸ್ ಹತ್ತುವುದು ನರಕಯಾತನೆ ಉಂಟು ಮಾಡುತ್ತದೆ. ಆದ್ದರಿಂದ ಗ್ರಾಮೀಣ ಬಸ್ ನಿಲ್ದಾಣವನ್ನು ಸುಸಜ್ಜಿತಗೊಳಿಸಬೇಕು. ಬಹಿರ್ದೆಸೆಗೆ ಕಡಿವಾಣ ಹಾಕಬೇಕು’ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಹೆಚ್ಚಿದ ಕಳ್ಳರ ಭಯ: ಶಕ್ತಿ ಯೋಜನೆ ಜಾರಿಯಾದಾಗಿನಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ಇರುವುದರಿಂದ ಪಟ್ಟಣದ ಮೂಲಕ ಹಾಯ್ದು ಹೋಗುವ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಿದೆ.

ಇದರಿಂದಾಗಿ ಕಿಡಿಗೇಡಿಗಳಿಗೆ, ಕಳ್ಳರಿಗೆ ಹೇಳಿ ಈ ಬಸ್‌ ನಿಲ್ದಾಣ ಪ್ರಿಯವಾಗಿದ್ದು ಪ್ರಯಾಣಿಕರು ಕಳ್ಳರ ಭಯದಿಂದ ನಲುಗುವಂತಾಗಿದೆ. ಈ ಬಸ್‌ ನಿಲ್ದಾಣದಲ್ಲಿ ಮೊಬೈಲ್‌ಗಳು, ಪರ್ಸ್‌ಗಳು, ಬ್ಯಾಗ್‌ಗಳು, ಬೈಕ್‌ಗಳು ಕಳುವಾದ ಸಾಕಷ್ಟು ಘಟನೆಗಳು ನಡೆದಿವೆ. ಸಿಸಿಟಿವಿ ಕಣ್ಗಾವಲಿನ ನಡುವೆಯೂ ಈ ರೀತಿ ಪ್ರಕರಣಗಳು ಆಗುತ್ತಿರುವ ಕಾರಣ ಬಸ್‌ ನಿಲ್ದಾಣದಲ್ಲಿ ಭದ್ರತೆ ಇಲ್ಲದಂತಾಗಿದೆ. ಇದರಿಂದಾಗಿ ಇಲ್ಲಿಗೆ ಪೊಲೀಸ್‌ ಸಿಬ್ಬಂದಿ  ಕಣ್ಗಾವಲು ಇಡುವಂತಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ಪಾರ್ಕಿಂಗ್ ಅವ್ಯವಸ್ಥೆ: ಬಸ್ ನಿಲ್ದಾಣದ ಆವರಣದಲ್ಲಿ ಇತರೆ ವಾಹನಗಳ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಇಲ್ಲ. ಆರು ತಿಂಗಳಿಂದ ಬೈಕ್‌ಗಳ ಪಾರ್ಕಿಂಗ್ ಅವ್ಯವಸ್ಥೆ ಹೇಳತೀರದಾಗಿದೆ. ಬಸ್ ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ಪ್ರಯಾಣಿಕರು, ಹೊರಗಿನವರು ಬೈಕ್ ನಿಲ್ಲಿಸುತ್ತಾರೆ. ಇದರಿಂದ ಬಸ್ ಸಂಚಾರಕ್ಕೆ ತೊಂದರೆ ಆಗುವುದರ ಮೂಲಕ ಪಾದಚಾರಿಗಳಿಗೂ ತೊಂದರೆ ಆಗುತ್ತಿದೆ.

ಆಗದ ಟೆಂಡರ್: ಬೈಕ್ ಪಾರ್ಕಿಂಗ್ ಮಾಡಿಸಿಕೊಂಡು ಅವುಗಳನ್ನು ವ್ಯವಸ್ಥಿತವಾಗಿ ನಿಲ್ಲಿಸಿ ರಕ್ಷಣೆ ಮಾಡುವ ಸಲುವಾಗಿ ಟೆಂಡರ್ ಕರೆಯಲಾಗುತ್ತಿತ್ತು. ಟೆಂಡರ್‌ದಾರರು ಹಣ ಪಡೆದು ಬೈಕ್ ರಕ್ಷಣೆ ಮಾಡುತ್ತಿದ್ದರು. ಇದರಿಂದ ಪ್ರಯಾಣಿಕರು ನಿರ್ಭಯವಾಗಿ ಬೈಕ್ ಬಿಟ್ಟು ಹೋಗುತ್ತಿದ್ದರು. ಟೆಂಡ್‌ ಆಗದ ಕಾರಣ ಹಲವಾರು ಬೈಕ್‌ಗಳು ಕಳುವಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ನರಗುಂದ ಬಸ್ ನಿಲ್ದಾಣದಲ್ಲಿ ಬೈಕ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿರುವ ದೃಶ್ಯ

ಶೌಚಾಲಯ ನಿರ್ಮಿಸಿ: ಪುರುಷ, ಮಹಿಳೆಯರಿಗೆ ಶೌಚಾಲಯಗಳಿದ್ದರೂ ಇಲ್ಲಿನ ಪ್ರಯಾಣಿಕರ ಸಂಖ್ಯೆಗೆ ಅವು ಸಾಲದಂತಾಗಿವೆ. ಆದ್ದರಿಂದ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದ ಶೌಚಾಲಯಗಳು ನಿರ್ಮಾಣಗೊಳ್ಳಬೇಕಿದೆ. ಇದು ಮಹಿಳೆಯರ ಆಗ್ರಹವೂ ಆಗಿದೆ.

ವಾಣಿಜ್ಯ ಮಳಿಗೆಗಳ ತ್ಯಾಜ್ಯ: ಬಸ್ ನಿಲ್ದಾಣದ ಸುತ್ತಲೂ ಸಾರಿಗೆ ಸಂಸ್ಥೆ ಖಾಸಗಿಯವರ ಪಾಲುದಾರಿಕೆಯೊಂದಿಗೆ 40ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ನಿರ್ಮಾಣಗೊಂಡಿವೆ. ಆದರೆ ಅವುಗಳು ಬಹುತೇಕ ಎಗ್ ರೈಸ್, ಮಿರ್ಚಿ, ಗಿರ್ಮಿಟ್, ಚಹಾದಂಗಡಿಗಳೇ ಆಗಿವೆ. ರಾತ್ರಿ ಹೊತ್ತು ಅದರ ತ್ಯಾಜ್ಯ ಬಸ್ ನಿಲ್ದಾಣದ ಬಳಕೆಯಾಗದ ಜಾಗದಲ್ಲಿ ಸಂಗ್ರಹವಾಗಿ ಸ್ವಚ್ಛತೆ ಎಲ್ಲ ರೀತಿಯಿಂದಲೂ ಮರೀಚಿಕೆಯಾಗಿದೆ.

ಪೊಲೀಸ್‌ ಚೌಕಿ ಸ್ಥಾಪಿಸಿ

ನರಗುಂದ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಕಾರಣ ಇಲ್ಲಿ ಪೊಲೀಸ್ ಚೌಕಿ ನಿರ್ಮಾಣವಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಬಸ್‌ ನಿಲ್ದಾಣದಲ್ಲಿ ಪೊಲೀಸರು ಇದ್ದರೆ ಅವರ ಭಯದಿಂದಲಾದರೂ ಕಳ್ಳತನ ಪ್ರಕರಣಗಳು ಕಡಿಮೆ ಆಗಲು ಸಾಧ್ಯ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ರಾತ್ರಿ ವೇಳೆ ಬಸ್ ತಪ್ಪಿಸಿಕೊಂಡ ಮಹಿಳಾ ಪ್ರಯಾಣಿಕರು ಅಲ್ಲಿಯೇ ಬೀಡು ಬಿಡುತ್ತಾರೆ. ಅವರ ರಕ್ಷಣೆಗೆ ಕೂಡ ಪೊಲೀಸ್‌ ಸಿಬ್ಬಂದಿಯ ಅಗತ್ಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಯಲ್ಲಮಗುಡ್ಡದ ಪ್ರಯಾಣಿಕರೇ ಜಾಸ್ತಿ

ಸೀಗೆ ಹುಣ್ಣಿಮೆಯಿಂದ ಭಾರತ ಹುಣ್ಣಿಮೆಯವರೆಗೆ ಸುಮಾರು ಐದಕ್ಕೂ ಹೆಚ್ಚು ತಿಂಗಳುಗಳ ಕಾಲ ಹಾಗೂ ಶಕ್ತಿ ಯೋಜನೆ ಆದಾಗಿನಿಂದ ಪಟ್ಟಣದಿಂದ 30 ಕಿ.ಮೀ. ದೂರದಲ್ಲಿ ಇರುವ ಸವದತ್ತಿ ಯಲ್ಲಮನ ಗುಡ್ಡಕ್ಕೆ ಸುತ್ತಮುತ್ತಲಿನ ಆರಕ್ಕೂ ಹೆಚ್ಚು ಜಿಲ್ಲೆಗಳ ಜನರು ನರಗುಂದ ಮಾರ್ಗವಾಗಿ ಯಲ್ಲಮನಗುಡ್ಡಕ್ಕೆ ತೆರಳುತ್ತಾರೆ. ಯಲಮ್ಮನಗುಡ್ಡಕ್ಕೆ ತೆರಳುವವರಿಗೆ ನರಗುಂದ ಸೆಂಟರ್ ಪಾಯಿಂಟ್ ಆಗಿದೆ. ಇದರಿಂದ ಇಲ್ಲಿನ ಪ್ರಯಾಣಿಕರಿಗೆ ಮೂಲಸೌಲಭ್ಯ ಅಗತ್ಯವಾಗಿ ಬೇಕಾಗಿದೆ. ವಿಜಯಪುರ ಬಾಗಲಕೋಟೆ ರಾಯಚೂರು ಕೊಪ್ಪಳ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಯಾಣಿಕರು ಇದೇ ಮಾರ್ಗ ಬಳಸಿ ಯಲ್ಲಮಗುಡ್ಡಕ್ಕೆ ತೆರಳುತ್ತಾರೆ.

ಸೌಲಭ್ಯ ಒದಗಿಸಲು ಕ್ರಮ ಗ್ರಾಮೀಣ ಬಸ್ ನಿಲ್ದಾಣದ ಆವರಣವನ್ನು ಕಾಂಕ್ರೀಟಿಕರಣ ಮಾಡಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಬಸ್ ನಿಲ್ದಾಣದ ಸ್ವಚ್ಛತೆ ಕಾಪಾಡಲು ನಿತ್ಯ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಬಹರ್ದೆಸೆ ತಪ್ಪಿಸಲು ಸ್ವಚ್ಛತೆ ಕಾಪಾಡಲು ಪುರಸಭೆ ಮೂಲಕ ಸ್ವಚ್ಛ ಭಾರತ ಮಿಷನ್ ಅಡಿ ಸುಮಾರು ₹27 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ಮೂತ್ರಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬೈಕ್ ಪಾರ್ಕಿಂಗ್ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
–ಪರುಶರಾಮ ಪ್ರಭಾಕರ ವ್ಯವಸ್ಥಾಪಕರು ಕೆಎಸ್ಆರ್‌ಟಿಸಿ ನರಗುಂದ
ಆಂತರಿಕ ಭದ್ರತೆ ಹೆಚ್ಚಿಸಲು ಕ್ರಮ ಕಳ್ಳತನ ಪ್ರಕರಣಗಳು ಹೆಚ್ಚದಂತೆ ಕ್ರಮ ವಹಿಸಲಾಗುವುದು. ಇದಕ್ಕೆ ಪೊಲೀಸ್ ಇಲಾಖೆ ಸಹಾಯ ಅಗತ್ಯವಿದೆ. ನಿತ್ಯ 730ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಪ್ರಯಾಣಿಕರ ಸುರಕ್ಷತೆಗೆ ಆಂತರಿಕ ಭದ್ರತೆ ಹೆಚ್ಚಿಸುವುದರೊಂದಿಗೆ ಹೆಚ್ಚು ಪೊಲೀಸರನ್ನು ನಿಯೋಜಿಸಲು ಪೊಲೀಸ್ ಠಾಣೆಗೆ ಮನವಿ ಮಾಡಲಾಗುವುದು.
– ವಿ.ಬಿ.ಕರಿಸಕ್ರಣ್ಣವರ ನಿಯಂತ್ರಕರು ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ನರಗುಂದ
ನರಗುಂದ ಬಸ್ ನಿಲ್ದಾಣಕ್ಕೆ ಪೊಲೀಸ್ ರಕ್ಷಣೆ ನಿರಂತರವಾಗಿ ಸಿಗುವಂತಾಗಬೇಕು. ಬೆಳಿಗ್ಗೆ 8ರಿಂದ ರಾತ್ರಿ 10 ಗಂಟೆಯವರೆಗೆ ಒಬ್ಬ ಪುರುಷ ಹಾಗೂ ಒಬ್ಬ ಮಹಿಳಾ ಪೊಲೀಸರು ಇರಬೇಕು. ಪೊಲೀಸ್ ಚೌಕಿ ನಿರ್ಮಾಣಗೊಳ್ಳಬೇಕು.
–ಕೃಷ್ಣ ಮಹಾಲಿನಮನಿ
ರಗುಂದ ಬಸ್ ನಿಲ್ದಾಣದ ಆವರಣ ಸ್ವಚ್ಛತೆಗೆ ಸಾರಿಗೆ ಸಂಸ್ಥೆ ಮುತುವರ್ಜಿ ವಹಿಸಬೇಕು. ಖಾಲಿ ಇರುವ ಜಾಗವನ್ನು ಬಳಕೆ ಮಾಡಬೇಕು.
 –ವಿ.ಬಿ.ಕರಿಸಕ್ರಣ್ಣವರ
ನನರಗುಂದ ಬಸ್ ನಿಲ್ದಾಣದ ಆವರಣದಲ್ಲಿ ಹೆಚ್ಚಿನ ಜಾಗ ಖಾಲಿ ಇದೆ. ಅದನ್ನು ಸ್ವಚ್ಛಗೊಳಿಸಿ ಸಸಿಗಳನ್ನು ನೆಡಬೇಕು. ಪ್ರಯಾಣಿಕರ ವಿಶ್ರಾಂತಿಗೆ ಉದ್ಯಾನ ಅಥವಾ ಹಸಿರೀಕರಣ ಮಾಡಬೇಕು.
–ಜಗದೀಶ ಗೊಂಡಬಾಳ ಪರಿಸರ ಪ್ರೇಮಿ
ನರಗುಂದ ನರಗುಂದ ಪಟ್ಟಣ ಹುಬ್ಬಳ್ಳಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೇಲಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಮೂಲಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು
–ಚನ್ನು ನಂದಿ ನರಗುಂದ
ನರಗುಂದ ಬಸ್ ನಿಲ್ದಾಣದ ಆವರಣದಲ್ಲಿ ಸುತ್ತಲಿನ ಅಂಗಡಿಗಳ ತ್ಯಾಜ್ಯ ಬಂದು ಸೇರುತ್ತದೆ. ಕಠಿಣ ಕ್ರಮಗಳಿಂದ ಕಡಿವಾಣ ಹಾಕಬೇಕು.–ನಾಗೇಶ ಅಪ್ಪೋಜಿ ನರಗುಂದ ಬಸ್ ನಿಲ್ದಾಣ ಸ್ವಚ್ಛತೆಗೆ ನಿರಂತರ ಜಾಗೃತಿ ನಡೆಯಬೇಕು. ಮೊಬೈಲ್ ಕಳ್ಳತನ ಹೆಚ್ಚುತ್ತಿವೆ. ಅಂಥವರ ಪತ್ತೆಗೆ ಕ್ರಮ ಆಗಬೇಕು
–ಎಸ್.ಎಸ್.ಪಾಟೀಲ ಕಿಸಾನ್‌ ಸಂಘ ನರಗುಂದ
ಶಕ್ತಿ ಯೋಜನೆ ಜಾರಿ ಆದಾಗಿನಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದರೆ ನಮ್ಮಂಥ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಆದ್ದರಿಂದ ವಿದ್ಯಾರ್ಥಿನಿಯರ ಸುರಕ್ಷತೆಗೆ ಸಾರಿಗೆ ಸಂಸ್ಥೆ ಕ್ರಮ ಕೈಗೊಳ್ಳಬೇಕು
–ಗಂಗಮ್ಮ ಪಾಟೀಲ ಪಿಯು ವಿದ್ಯಾರ್ಥಿನಿ
ನರಗುಂದ ರಾಯಚೂರಿನಿಂದ ಬಂದು ಯಲ್ಲಮಗುಡ್ಡಕ್ಕೆ ಹೊಂಟೇವಿ. ಆದರೆ ಇಲ್ಲಿ ಹೆಣ್ಣುಮಕ್ಕಳಿಗೆ ಸರಿಯಾದ ಶೌಚಾಲಯಗಳಿಲ್ಲ. ಮಹಿಳಾ ಪ್ರಯಾಣಿಕರಿಗೆ ಆಗುವ ತೊಂದರೆ ತಪ್ಪಿಸಲು ಶೌಚಾಲಯ ನಿರ್ಮಿಸಬೇಕು
–ಸಾಬವ್ವ ಗುಡ್ಡದ ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.