ADVERTISEMENT

ನರಗುಂದ: ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ವಾನರ..!

ನರಗುಂದ ಪಟ್ಟಣದಲ್ಲಿ ನಡೆದ ಅಪರೂಪದ ಘಟನೆ; ಮೂಕವಿಸ್ಮಿತರಾದ ಜನರು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 13:39 IST
Last Updated 12 ಡಿಸೆಂಬರ್ 2018, 13:39 IST
ಮೃತದೇಹದ ಸಮೀಪದಲ್ಲೇ ಕುಳಿತಿದ್ದ ಕೋತಿ
ಮೃತದೇಹದ ಸಮೀಪದಲ್ಲೇ ಕುಳಿತಿದ್ದ ಕೋತಿ   

ನರಗುಂದ: ಕೋತಿಯೊಂದು ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಮೂಲಕ ತಾಲ್ಲೂಕಿನಾದ್ಯಂತ ಸುದ್ದಿಯಾಗಿದೆ.

ಪಟ್ಟಣದ ಅರ್ಭಾಣ ಓಣಿಯ ನಿವಾಸಿ ನಾಗನಗೌಡ ಪಾಟೀಲ (71) ಅವರು ಮಂಗಳವಾರ ನಿಧನರಾದರು. ಅಂತ್ಯಕ್ರಿಯೆಗೆ ಮುನ್ನ ಮೃತದೇಹವನ್ನು ಅವರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಕುಟುಂಬದ ಸದಸ್ಯರೆಲ್ಲರೂ ದುಃಖತಪ್ತರಾಗಿದ್ದರು. ಈ ಸಂದರ್ಭದಲ್ಲಿ ಜನರ ಗುಂಪಿನ ನಡುವೆ ನುಗ್ಗಿಬಂದ ಕೋತಿಯೊಂದು, ಮೃತದೇಹ ಇರಿಸಿದ್ದ ಸ್ಥಳಕ್ಕೆ ಬಂದು ಒಂದು ಗಂಟೆ ಮೌನವಾಗಿ ಅಲ್ಲೇ ಕುಳಿತು, ಶ್ರದ್ಧಾಂಜಲಿ ಸಲ್ಲಿಸಿತು. ಬಳಿಕ ಮನೆಯ ಮುಂದಿನ ಜಗಲಿಯಲ್ಲಿ ದುಃಖದಿಂದ ಕುಳಿತಿದ್ದ ಮೃತ ವ್ಯಕ್ತಿಯ ಹಿರಿಯ ಮಗನ ಹೆಗಲೇರಿ, ತಲೆ ಸವರಿ, ಅವರ ಕಿವಿಯಲ್ಲಿ ತನ್ನದೇ ಭಾಷೆಯಲ್ಲಿ ಸಾಂತ್ವನ ಹೇಳಿ ಹೋಯಿತು. ಈ ಘಟನೆಯು ಪಟ್ಟಣ ಸೇರಿದಂತೆ ತಾಲ್ಲೂಕಿನ ಜನತೆಯನ್ನು ವಿಸ್ಮಯಗೊಳಿಸಿದೆ.

ಕೋತಿ ಸಾಂತ್ವನ ಹೇಳಿ ಹೋಗಿರುವ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಜನರ ಗುಂಪು ಇದ್ದ ಕಡೆ ಕೋತಿಗಳು ಸುಳಿಯುವುದಿಲ್ಲ. ಆದರೆ, ಜನದಟ್ಟಣೆ ನಡುವೆಯೇ ಈ ಕೋತಿ, ಮೃತದೇಹ ಇರಿಸಿದ್ದ ಮನೆಗೆ ಬಂದು, ಯಾವುದೇ ಭಯ ಇಲ್ಲದೆ, ಯಾರಿಗೂ ತೊಂದರೆ ಮಾಡದೆ, ಅರ್ಚಕರು ಪೂಜೆ ಸಲ್ಲಿಸುವಾಗ ಅಲ್ಲೇ ಮೌನವಾಗಿ ಕುಳಿತಿತ್ತು.ಇದು ಕುಟುಂಬ ಸದಸ್ಯರಿಗೆ ಮತ್ತು ಸುತ್ತಮುತ್ತಲಿನ ಜನರಿಗೆ ಆಶ್ಚರ್ಯ ಮೂಡಿಸಿದೆ.

ADVERTISEMENT

ಅರ್ಚಕರು ಕೋತಿಗೆ ಕೊಬ್ಬರಿ ಬಟ್ಟಲು ಕೊಟ್ಟರೂ, ಮೃತ ಶರೀರ ಇದ್ದ ಸ್ಥಳ ಬಿಟ್ಟು ಕದಲದೆ ಅಲ್ಲೇ ಕುಳಿತಿದೆ. ಬಳಿಕ ಒಂದು ಗಂಟೆ ನಂತರ ಮನೆಯಿಂದ ಹೊರಬಂದು, ಅಲ್ಲೇ ಇದ್ದ ಮೃತರ ಹಿರಿಯ ಮಗ ಮರಿಗೌಡರ ಹೆಗಲ ಮೇಲೆ ಕುಳಿತು ಕಿವಿಯಲ್ಲಿ ಏನೋ ಪಿಸಗುಟ್ಟಿ ಹೋಗಿದೆ.

‘ಇದು ಅಪರೂಪದಲ್ಲೇ ಅಪರೂಪದ ವಿದ್ಯಮಾನ. ಇದೊಂದು ಪವಾಡ’ ಎಂದು ಜನರು ಮಾತನಾಡಿಕೊಂಡು ಕೋತಿ ಮೇಲೆ ಪ್ರೀತಿ ತೋರಿದರು.ಕೋತಿಯ ರೂಪದಲ್ಲಿ ಹನುಮಂತ ದೇವರೇ ಮೃತರ ದರ್ಶನಕ್ಕೆ ಬಂದಿರಬಹುದು ಎಂಬ ಚರ್ಚೆಗಳೂ ನಡೆದವು.

‘ಇದೊಂದು ಅಪರೂಪದ ವಿದ್ಯಮಾನ’ ಎಂದು ಗ್ರಾಮದ ಮುತ್ತಪ್ಪ ನಾಯ್ಕರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.