ADVERTISEMENT

ಗದಗ | 'ನಾರಾಯಣ ಗುರು ಮಾರ್ಗದರ್ಶನ ಸ್ಫೂರ್ತಿದಾಯಕ'

ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ: ಪರುಶುರಾಮ ಈಳಗೇರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 2:45 IST
Last Updated 8 ಸೆಪ್ಟೆಂಬರ್ 2025, 2:45 IST
ಗದಗ ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತ್ಯುತ್ಸವ ಆಚರಿಸಲಾಯಿತು
ಗದಗ ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತ್ಯುತ್ಸವ ಆಚರಿಸಲಾಯಿತು   

ಗದಗ: ‘ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಯಾರೊಬ್ಬರೂ ಮರೆಯಬಾರದು. ಅವರ ಮಾರ್ಗದರ್ಶನ ನಮಗೆಲ್ಲ ಸ್ಪೂರ್ತಿದಾಯಕ’ ಎಂದು ಸಂಪನ್ಮೂಲ ವ್ಯಕ್ತಿ ಪರಶುರಾಮ ಈಳಗೇರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿ ಭಾನುವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.

‘ಕೇರಳದಲ್ಲಿ ಅನೇಕ ಜಾತಿಪಂಥಗಳಿದ್ದವು. ಮೇಲ್ಜಾತಿ, ಕೆಳಜಾತಿ, ಅಸ್ಪೃಶ್ಯತೆ ಮುಂತಾದ ಸಾಮಾಜಿಕ ಸಮಸ್ಯೆಗಳು ಎಲ್ಲೆಡೆ ಜನರ ಮನಸ್ಸನ್ನು ಹರಿದು ತಿನ್ನುತ್ತಿದ್ದವು. ಇಂತಹ ಸಂದರ್ಭದಲ್ಲಿ ಜಾತೀಯತೆ ತೊಲಗಿಸುವುದು ತಮ್ಮ ಜೀವನದ ಧ್ಯೇಯವೆಂದು ನಾರಾಯಣ ಗುರುಗಳು ಶಪಥಮಾಡಿದವರು’ ಎಂದರು.

ADVERTISEMENT

‘ಸಮಾಜದ ವಿರೋಧಿ ಕಾರ್ಯಗಳಿಗೆ ಮುಟ್ಟುಗೋಲು ಹಾಕಲು ಅವರು ತೆಗೆದುಕೊಂಡ ಕ್ರಮಗಳು, ಆಂದೋಲನಗಳು ಅನನ್ಯ. ಕೆಳವರ್ಗದಲ್ಲಿ ಜನಿಸಿದ ಜನರಿಗೆ ದೇವಸ್ಥಾನ ಪ್ರವೇಶಕ್ಕೆ ಅವರು ಬೇಡಲಿಲ್ಲ ಅಥವಾ ಹಿಂಸಾಚಾರದ ಚಳವಳಿಗಳನ್ನು ನಡೆಸಲಿಲ್ಲ. ತಾವೇ ದೇವಾಲಯಗಳನ್ನು ಸ್ಥಾಪಿಸುವುದರ ಮೂಲಕ ಒಂದು ಹೊಸ ಆಲೋಚನಾ ಕ್ರಮ ಹುಟ್ಟುಹಾಕಿದರು. ಕೇರಳದಾದ್ಯಂತ ಸುಮಾರು 60ಕ್ಕೂ ಹೆಚ್ಚು ದೇವಾಲಯಗಳನ್ನು ಸ್ಥಾಪಿಸಿದರು’ ಎಂದು ಹೇಳಿದರು.

ನಾರಾಯಣ ಗುರುಗಳು ಅಹಿಂಸೆಯಲ್ಲಿ ಬುದ್ಧ, ಯೋಗದಲ್ಲಿ ಪತಂಜಲಿ, ಜ್ಞಾನದಲ್ಲಿ ಶಂಕರ, ಅಹಿಂಸೆ– ಮಾನವೀಯತೆಯಲ್ಲಿ ಯೇಸುಕ್ರಿಸ್ತರಂತೆ ಇದ್ದರು ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನಿತಾ ಶಿವಮೂರ್ತಪ್ಪ ಕುರ್ತಕೋಟಿ, ಮಂಜುನಾಥ ರಮೇಶ ಹುಲಕೋಟಿ, ಬಸವರಾಜ ಹನುಮಂತಪ್ಪ ಈಳಗೇರ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಭು ಈಳಗೇರ, ಸಿಂಧು ಈಳಗೇರ, ಅರುಣ ಈಳಗೇರ, ಆನಂದ ಈಳಗೇರ, ಅಭಿಷೇಕ ಈಳಗೇರ, ಶೈಲಾ ಈಳಗೇರ, ಪೃಥ್ವಿ ಈಳಗೇರ, ಭೂಮಿಕಾ ಈಳಗೇರ, ಸಂಜನಾ ಈಳಗೇರ, ಬಸವರಾಜ ಈಳಗೇರ, ಸುಪ್ರೀಯಾ ಹೊಸಪೇಟೆ, ಸಮೃದ್ದಿ ಹಾನಗಲ್, ಆಶಾ ಕುರ್ತಕೋಟಿ, ಅನನ್ಯ ಕುರ್ತಕೋಟಿ ಅವರನ್ನು ಗೌರವಿಸಲಾಯಿತು.

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್ ಬೊಮ್ಮನಹಳ್ಳಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಿಲ್ಲಾ ವಾರ್ತಾಧಿಕಾರಿ ವಸಂತ ಬಿ. ಮಡ್ಲೂರ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು.

ನಾರಾಯಣ ಗುರುಗಳ ಬದುಕೇ ಸನಾತನ ಧರ್ಮದಂತಿದ್ದು ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಚಿಂತನೆಗಳು ಅಮೂಲ್ಯವಾಗಿದ್ದವು. ಯಾವುದೇ ಲೋಪ ದೋಷಗಳಿರದ ಜನಪರ ಕಾಳಜಿ ಅವರಿಗೆ ಇತ್ತು -ಪರಶುರಾಮ ಈಳಗೇರ ಸಂಪನ್ಮೂಲ ವ್ಯಕ್ತಿ

ಆರ್ಯ ಈಡಿಗ ಸಮುದಾಯದವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು. ಈ ಮೂಲಕ ಸಮುದಾಯ ಸಾಮಾಜಿಕವಾಗಿ ಆರ್ಥಿಕವಾಗಿ ಮುಂದೆ ಬರಬೇಕು

-ಅಕ್ಬರ್‌ಸಾಬ್ ಬಬರ್ಜಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ

‘ಶ್ರೇಷ್ಠ ಸಮಾಜ ಸುಧಾರಕ’ 

‘ಬ್ರಹ್ಮಶ್ರೀ ನಾರಾಯಣ ಗುರು ಮಹಾನ್ ಸಮಾಜಕ ಸುಧಾರಕರು. ಆಗಿನ ಕಾಲದಲ್ಲಿ ಸಮಾಜದಲ್ಲಿ ಹೆಚ್ಚಾಗಿದ್ದ ಜಾತಿ ಮತ ಭೇದಗಳನ್ನು ಕಡಿಮೆಮಾಡಲು ತಮ್ಮ ಇಡೀ ಜೀವನ ಮುಡಿಪಾಗಿಟ್ಟಿದ್ದರು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಹೇಳಿದರು.  ‘ನಾರಾಯಣ ಗುರುಗಳು ಪ್ರತಿಪಾದಿಸಿದ ತತ್ವವೇ ಇಂದು ಜಗತ್ತಿನಲ್ಲಿದೆ. ಒಂದೇ ಜಾತಿ ಒಂದೇ ಮತ ಹಾಗೂ ಒಂದೇ ದೇವರು ಎಂಬ ಸತ್ಯವಾಕ್ಯವನ್ನು ಸಮಾಜಕ್ಕೆ ಸಾರಿದವರಲ್ಲಿ ನಾರಾಯಣ ಗುರುಗಳು ಪ್ರಮುಖರು’ ಎಂದರು. ‘ಸಂಸ್ಕೃತ ಭಾಷೆಯಲ್ಲಿ ಪಂಡಿತರಾಗಿದ್ದ ನಾರಾಯಣ ಗುರುಗಳು ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ ಸಮಾಧಾನಕರ ಉಪಾಯಗಳನ್ನು ಕಂಡುಕೊಂಡರು. ದೇಶ ಸೇವೆಯೇ ಈಶ ಸೇವೆ ಎಂದು ಬೋಧಿಸಿದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.