ನರೇಗಲ್: ಓದಿನಲ್ಲಿ ಶ್ರದ್ಧೆ, ಪರಿಶ್ರಮವಿದ್ದರೆ ರೈತರ ಮಕ್ಕಳು ಸಹ ರಾಷ್ಟ್ರ ಮಟ್ಟದ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಬಹುದು ಎಂಬುದನ್ನು ಜಕ್ಕಲಿ ಗ್ರಾಮದ ಯುವಕ ಅಜಯ್ ಎಸ್. ದೊಡ್ಡಮೇಟಿ ನಿರೂಪಿಸಿದ್ದಾರೆ. ಅಖಿಲ ಭಾರತ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ನರೇಗಲ್ ಹೋಬಳಿ ವ್ಯಾಪ್ತಿಯ ಹಳ್ಳಿಗಳಿಂದ ಸಿಎ ಪಾಸಾದ ಮೊದಲಿಗನಾಗಿದ್ದಾರೆ.
ಕಲಿಕೆಗೆ ಅಗತ್ಯವಾಗಿ ಬೇಕಾದ ಮೂಲಸೌಕರ್ಯಗಳಿಲ್ಲದ ಹಳ್ಳಿಯಲ್ಲಿ ಬೆಳೆದು ಎರಡು ಬಾರಿ ವಿಫಲವಾದರೂ ಧೃತಿಗೆಡದೆ ನಿರಂತರ ಅಧ್ಯಯನ ನಡೆಸಿ ಮೂರನೇ ಪ್ರಯತ್ನದಲ್ಲಿ ತೇರ್ಗಡೆ ಹೊಂದುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಯುವಕನ ತಂದೆ ಸುಭಾಸ ದೊಡ್ಡಮೇಟಿ ರೈತರಾಗಿದ್ದಾರೆ. ತಾಯಿ ಶಕುಂತಲಾ ಮನೆ ನಿರ್ವಹಣೆ ಜತೆಗೆ ಕೃಷಿಕ ಮಹಿಳೆಯಾಗಿದ್ದಾರೆ. ಅಜಯ್ ಕಾಲೇಜಿನ ದಿನಗಳವರೆಗೂ ತಂದೆಯ ಜೊತೆಗೆ ಕೃಷಿಯಲ್ಲಿ ತೊಡಗಿಕೊಂಡಿದ್ದರು.
1ರಿಂದ 7ನೇ ತರಗತಿವರೆಗೆ ನರೇಗಲ್ ಪಟ್ಟಣದ ಪಿಎಸ್‌ಎಸ್ ಶಾಲೆ, 10ನೇ ತರಗತಿವರೆಗೆ ಗದಗ ಲೊಯಲಾ ಪ್ರೌಢಶಾಲೆ, ಪಿಯುಸಿ, ಬಿಕಾಂ ಪದವಿಯನ್ನು ಎಎಸ್‌ಎಸ್ ಕಾಲೇಜಿನಲ್ಲಿ ಪೂರೈಸಿದ್ದಾರೆ. ಎಸ್‌ಎಸ್‌ಎಲ್‌ಸಿ ಶೇ 68, ಪಿಯುಸಿ ಶೇ 77.10 ಹಾಗೂ ಪದವಿಯಲ್ಲಿ ಶೇ 88 ಅಂಕವನ್ನು ಪಡೆದಿದ್ದಾರೆ.
‘ಪಿಯುಸಿವರೆಗೂ ಸಾಮಾನ್ಯ ವಿದ್ಯಾರ್ಥಿಯಾಗಿದ್ದೆ. ಪದವಿಗೆ ಬಂದ ನಂತರ ಶಿಕ್ಷಕರು ಉನ್ನತ ಸಾಧನೆಗಳ ಕನಸು ಬಿತ್ತಿದರು. ಆ ಕನಸು ಪ್ರಬಲವಾಗತೊಡಗಿ ಸಿಎ ಆಗಬೇಕು ಎನ್ನುವ ಗುರಿ ನಿಗದಿ ಮಾಡಿಕೊಂಡೆ. ಅದರ ಬಗ್ಗೆ ಮಾಹಿತಿ ಸಂಗ್ರಹ ಹಾಗೂ ಅಧ್ಯಯನ ಆರಂಭಿಸಿದೆ. ನಂತರ ಬೆಂಗಳೂರಿನಲ್ಲಿ ತರಬೇತಿ ಪಡೆದೆ. ಅಲ್ಲಿ ಸಿಕ್ಕ ತರಬೇತುದಾರ ಜಿ.ಜಿ.ಪಾಟೀಲ ಅವರ ಸ್ಪೂರ್ತಿದಾಯಕ ಮಾರ್ಗದರ್ಶನ, ತಂದೆ-ತಾಯಿ ಪ್ರೋತ್ಸಾಹ ಹಾಗೂ ನಿರಂತರ ಆರೂವರೆ ವರ್ಷಗಳ ಅಧ್ಯಯನದ ಫಲವಾಗಿ ಚಾರ್ಟರ್ಡ್ ಅಕೌಂಟೆಂಟ್ ಆಗುವ ಸಂಕಲ್ಪ ಈಡೇರಿತು’ ಎನ್ನುತ್ತಾರೆ ಅಜಯ್.
––––
ರೈತರ ಮಕ್ಕಳು ದೊಡ್ಡ ಪರೀಕ್ಷೆಗಳನ್ನು ಪಾಸಾಗುವುದು ಅಪರೂಪ. ಆದರೆ ಮಗ ಅಂತಹ ಸಾಧನೆ ಮಾಡುವ ಮೂಲಕ ನಮ್ಮೂರಿನ ಕೀರ್ತಿ ಹೆಚ್ಚಿಸಿದ್ದಾನೆ
–ಸುಭಾಸ ಶಕುಂತಲಾ ಪಾಲಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.