ADVERTISEMENT

ಬೀಚಿ ಸಾಹಿತ್ಯದಲ್ಲಿ ಉತ್ತಮ ಸಂದೇಶ: ಹಾಸ್ಯ ಕಲಾವಿದ ಬಿ. ಗಂಗಾವತಿ ಪ್ರಾಣೇಶ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:05 IST
Last Updated 13 ಡಿಸೆಂಬರ್ 2025, 5:05 IST
ನರೇಗಲ್‌ ಪಟ್ಟಣದ ಬೀಚಿ ಬಳಗದ ವತಿಯಿಂದ ಹಿರೇಮಠದ ಸಭಾಭವನದಲ್ಲಿ ಗುರುವಾರ ಸಂಜೆ ನಡೆದ ಬೀಚಿಯವರ 13ನೇ ಸ್ಮರಣೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ನರೇಗಲ್‌ ಪಟ್ಟಣದ ಬೀಚಿ ಬಳಗದ ವತಿಯಿಂದ ಹಿರೇಮಠದ ಸಭಾಭವನದಲ್ಲಿ ಗುರುವಾರ ಸಂಜೆ ನಡೆದ ಬೀಚಿಯವರ 13ನೇ ಸ್ಮರಣೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ನರೇಗಲ್: ಬೀಚಿ ಹಾಸ್ಯ ಸಾಹಿತಿ ಎನ್ನಿಸಿಕೊಂಡಿದ್ದರೂ ಅವರ ಸಾಹಿತ್ಯದಲ್ಲಿ ಒಂದು ಉತ್ತಮ ಸಂದೇಶವಿರುತ್ತದೆ. ಆದ್ದರಿಂದ ಅಂತಹ ಸಾಹಿತ್ಯವನ್ನು ಓದಿದರೆ ನಮಗೆ ಬದುಕನ್ನು ಕಲಿಸುತ್ತದೆ ಎಂದು ನಗೆ ಭಾಷಣಕಾರ ಬಿ. ಪ್ರಾಣೇಶ ಗಂಗಾವತಿ ಪ್ರಾಣೇಶ್ ಹೇಳಿದರು.

ನರೇಗಲ್‌ ಪಟ್ಟಣದ ಬೀಚಿ ಬಳಗದ ವತಿಯಿಂದ ಸ್ಥಳೀಯ ಹಿರೇಮಠದ ಸಭಾಭವನದಲ್ಲಿ ಗುರುವಾರ ಸಂಜೆ ನಡೆದ ಬೀಚಿಯವರ 13ನೇ ಸ್ಮರಣೋತ್ಸವದಲ್ಲಿ ಮಾತನಾಡಿದರು.

ನಾನಿಂದು ಜಗದ್ವಿಖ್ಯಾತ ಕಲಾವಿದನಾಗಿದ್ದೇನೆ. ಅದಕ್ಕೆ ಮೂಲ ನರೇಗಲ್ ಪಟ್ಟಣ ಎಂಬುದನ್ನು ನಾನೆಂದಿಗೂ ಮರೆತಿಲ್ಲ. ಇಲ್ಲಿನ ದತ್ತಾತ್ರೇಯ ದೇವಸ್ಥಾನದ ಉತ್ಸವಕ್ಕೆ ಹಲವಾರು ವರ್ಷಗಳ ಕಾಲ ನಾನು ಬಂದಿದ್ದು, ಅನೇಕ ಭಕ್ತರು ತಮ್ಮ ಮನೆಯಲ್ಲಿ ನನ್ನನ್ನು ಮೂರು ನಾಲ್ಕು ದಿನಗಳು ಇರಿಸಿಕೊಂಡು ನನ್ನ ಈ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರ ಋಣವನ್ನೆಂದಿಗೂ ಜೊತೆಗೆ ಗುರು ದತ್ತಾತ್ರೇಯನ ಆಶೀರ್ವಾದವನ್ನೆಂದಿಗೂ ಮರೆಯಲಾರೆ ಎಂದರು. ನನ್ನ ಮಾತಿಗೆ ಗೌರವ ನೀಡಿದ ಇಲ್ಲಿನ ಸಾಹಿತ್ಯಾಸಕ್ತರು ಕರ್ನಾಟಕದಲ್ಲಿಯೇ ಮೊದಲನೆಯದಾದ ಬೀಚಿ ಬಳಗವನ್ನು ಸ್ಥಾಪಿಸಿ, ಈವರೆಗೆ ಅದನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ನನ್ನ ಗುರುಗಳ ಹೆಸರಿನ ಬಳಗದಿಂದ ಮಾಡುತ್ತಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೆ ಅತೀವ ಸಂತಸವಾಗಿದೆ ಎಂದರು.

ADVERTISEMENT

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಣ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ, ಪಟ್ಟಣದಲ್ಲಿ ಬೀಚಿ ಬಳಗ ಮಾಡುತ್ತಿರುವ ಸಾಹಿತ್ತಿಕ ಸೇವೆ ಶ್ಲಾಘನೀಯ. ದಶಮಾನೋತ್ಸವ ಕಾರ್ಯಕ್ರಮಕ್ಕೆ ಕನ್ನಡದ ಪೂಜಾರಿ ಕಣ್ಣನ್ ಮಾಮಾ ಅವರನ್ನೇ ನರೇಗಲ್‌ಗೆ ಕರೆಯಿಸಿದ ಕೀರ್ತಿ ಬಳಗಕ್ಕಿದೆ. ಬಳಗದ ಯಾವುದೇ ಕಾರ್ಯಕ್ಕೂ ನಮ್ಮ ಬೆಂಬಲ ಇದ್ದೇ ಇದೆ ಎಂದರು.

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಬಳಗದ ಸಾಮಾಜಿಕ ಕಳಕಳಿಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅಂತರರಾಷ್ಟ್ರೀಯ ಮಟ್ಟದ ಕಲಾವಿದರು ನರೇಗಲ್‌ಗೆ ಬರುವುದೆಂದರೆ ಸುಮ್ಮನೆ ಮಾತಲ್ಲ. ನಿವೃತ್ತರೇ ಹೆಚ್ಚಾಗಿರುವ ಸಂಘದ ಕ್ರಿಯಾಶೀಲ ಸದಸ್ಯರನ್ನು ಅಭಿನಂದಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ನಗೆಭಾಷಣಕಾರರಾದ ಅನಿಲ ವೈದ್ಯ, ಬಸವರಾಜ ಮಹಾಮನಿ ಮತ್ತು ನರಸಿಂಹ ಜೋಶಿ ತಮ್ಮದೇ ಆದ ವಿಶಿಷ್ಠಪೂರ್ಣ ಮಾತುಗಳಿಂದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿ, ನಗೆಯ ರಸದೌತಣ ಉಣಬಡಿಸಿದರು.

ಕಾರ್ಯಕ್ರಮದಲ್ಲಿ ಧರ್ಮ ರತ್ನಾಕರ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಜಿ. ಕೆ. ಕಾಳೆ, ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಸ್ಥಳೀಯ ಪದಾಧಿಕಾರಿಗಳನ್ನು, ಕಾನೂನು ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೇ ರ‍್ಯಾಂಕ್ ಗಳಿಸಿದ ವಿದ್ಯಾಶ್ರೀ ಬೇವಿನಕಟ್ಟಿಯವರನ್ನು ಸನ್ಮಾನಿಸಲಾಯಿತು.

ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಬೀಚಿ ಬಳಗದ ಅಧ್ಯಕ್ಷ ಶಿವಯೋಗಿ ಜಕ್ಕಲಿ ಅಧ್ಯಕ್ಷತೆ ವಹಿಸಿದ್ದರು. ಬಿ. ಬಿ. ಕುರಿ, ಮಹಾದೇವಪ್ಪ ಬೇವಿನಕಟ್ಟಿ, ಕೆ.ಎಸ್. ಕಳಕಣ್ಣವರ, ಎಂ. ಎಸ್. ದಢೇಸೂರಮಠ, ನಿರ್ಮಲಾ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.