ADVERTISEMENT

ಮಳೆಗಾಗಿ ಕೆರೆಯಲ್ಲಿ ಗಂಗಾಪೂಜೆ

ಮಹಿಳೆಯರಿಂದ ದೇವರ ಮೂರ್ತಿಗೆ ಜಲಾಭಿಷೇಕ: ಮೌನವ್ರತಾಚರಣೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 3:07 IST
Last Updated 8 ಜುಲೈ 2025, 3:07 IST
ನರೇಗಲ್‌ ವ್ಯಾಪ್ತಿಯ ಹೊಲವೊಂದರಲ್ಲಿ ಮಳೆ ಕೊರತೆಯಿಂದಾಗಿ ಬಾಡುತ್ತಿರುವ ಹೆಸರು ಬೆಳೆ
ನರೇಗಲ್‌ ವ್ಯಾಪ್ತಿಯ ಹೊಲವೊಂದರಲ್ಲಿ ಮಳೆ ಕೊರತೆಯಿಂದಾಗಿ ಬಾಡುತ್ತಿರುವ ಹೆಸರು ಬೆಳೆ   

ನರೇಗಲ್:‌ ಆರಂಭದಲ್ಲಿ ಅಬ್ಬರಿಸಿ ನಂತರ ಕೈಕೊಟ್ಟ ಮುಂಗಾರು ಮಳೆಯಿಂದಾಗಿ ಕೆಲವು ಹೊಲಗಳಲ್ಲಿ ಹೆಸರು ನೆಲಬಿಟ್ಟು ಮೇಲಕ್ಕೆ ಬಂದಿಲ್ಲ. ತೇವಾಂಶ ಕೊರತೆಯಿಂದ ಬಾಡುವ ಹಂತಕ್ಕೆ ತಲುಪಿವೆ. ರೈತರು ಮುಗಿಲು ನೋಡುತ್ತಾ ಪ್ರತಿದಿನ ಮಳೆಗಾಗಿ ಕಾಯುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ನರೇಗಲ್‌ ಪಟ್ಟಣದ ಕೃಷಿಕರ ಮನೆಯ ಮಹಿಳೆಯರು ಮಳೆಗಾಗಿ ಮೌನವ್ರತ ಆಚರಣೆಗೆ ಮುಂದಾಗಿದ್ದಾರೆ. ಪ್ರತಿದಿನ ನಸುಕಿನ ವೇಳೆ ಐದು ಗಂಟೆಗೆ ಎದ್ದು ಸ್ನಾನ ಮಾಡಿ, ವಿವಿಧ ವಿಧಿವಿಧಾನಗಳನ್ನು ಅನುಸರಿಸಿ ಪೂಜೆ ಮಾಡಿ ನಂತರ ವರುಣ ದೇವನಿಗೆ ವಿಶೇಷ ರೀತಿಯಲ್ಲಿ ಪ್ರಾರ್ಥಿಸುತ್ತಿದ್ದಾರೆ.

ನರೇಗಲ್‌ ಪಟ್ಟಣದ ಹಿರೇಮಠ ಓಣಿಯ ಮಹಿಳೆಯರು ಮೌನದಲ್ಲಿ ಸಮೀಪದ ಹಿರೇಕೆರೆಗೆ ಹೋಗಿ ಗಂಗಾ ಪೂಜೆ ಮಾಡುತ್ತಾರೆ. ನಂತರ ಅವರು ತಮ್ಮೊಂದಿಗೆ ತೆಗೆದುಕೊಂಡು ಹೋದ ಕೊಡದಲ್ಲಿ ಕೆರೆಯ ನೀರು ತುಂಬಿಕೊಂಡು, ತಲೆಯ ಮೇಲೆ ಹೊತ್ತು ತರುತ್ತಾರೆ. ಆ ನೀರನ್ನು ಮಲ್ಲಯ್ಯಜ್ಜನ ಗುಡಿಯ ಬರಮ ದೇವರ ಮೂರ್ತಿಗೆ ಹಾಕುತ್ತಾರೆ.

ADVERTISEMENT

ನಂತರ ಉತ್ತಮ ಮಳೆ, ಸಮೃದ್ಧಿ ಬೆಳೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಈ ಆಚರಣೆಯು ಸೂರ್ಯೋದಯದ ಮೊದಲು ಅಂದರೆ ಜನರು ಎದ್ದು ಮನೆಯಿಂದ ಹೊರಗಡೆ ಬರುವ ಮೊದಲೇ ಮುಗಿದಿರುತ್ತದೆ. ಹೀಗೆ ನಿರಂತರವಾಗಿ ಐದು ದಿನಗಳ ವಿಶೇಷ ಆಚರಣೆ ನಡೆಯುತ್ತದೆ.

ಕೊನೆಯ ದಿನ ಅನ್ನ ಸಂತರ್ಪಣೆ ನಡೆಯುತ್ತದೆ. ಹೀಗೆ ಮಾಡುವುದರಿಂದ ಮಳೆರಾಯನಿಗೆ ಕರುಣೆ ಬಂದು ತನ್ನ ಮುನಿಸು ಕಡಿಮೆ ಮಾಡಿಕೊಂಡು ಅನ್ನದಾತನಿಗೆ ಒಳ್ಳೆಯದನ್ನು ಮಾಡುತ್ತಾನೆ ಎಂಬುದು ಜನರ ನಂಬಿಕೆಯಾಗಿದೆ.

‘ಇದೊಂದು ಹಳೇ ಪದ್ದತಿಯಾಗಿದ್ದು ನಮ್ಮಜ್ಜನವರ ತಲೆಮಾರಿನಿಂದಲೂ ಮಳೆ ಕೈಕೊಟ್ಟಾಗ ಆಚರಣೆ ಮಾಡಿಕೊಂಡು ಬಂದಿರುವುದು ರೂಢಿಯಲ್ಲಿದೆ’ ಎಂದು ಗ್ರಾಮಸ್ಥರಾದ ಗಂಗಮ್ಮ ಕಳಕೊಣ್ಣವರ, ಮಂಜುಳಾ ಮಳ್ಳಿ, ನಿಂಗವ್ವ ಮಡಿವಾಳರ ತಿಳಿಸಿದರು.

ರಾಜ್ಯದ ಇತರೆ ಕಡೆಗಳಲ್ಲಿ ಮಳೆಯಾಗಿದೆ ಆದರೆ ನಮ್ಮಲ್ಲಿ ಆಗಿಲ್ಲ. ನರೇಗಲ್‌ ಹೋಬಳಿಯ ಬಹುತೇಕ ಜಮೀನುಗಳು ಬಿತ್ತನೆಯಾಗಿದ್ದು, ಮಳೆಗಾಗಿ ಕಾಯುವಂತಾಗಿದೆ. ಹೊಲಕ್ಕೆ ಹೋಗುವ ಜನರು ನೀರಿಗಾಗಿ ಮೈಲಿಗಟ್ಟಲೆ ದೂರ ಹೋಗುವಂತಾಗಿದೆ. ಕೊಳವೆಬಾವಿ, ಕೆರೆಗಳು ಬತ್ತಿ ಹೋಗಿವೆ. ಇಂತಹ ಕಠಿಣ ಸ್ಥಿತಿಯಲ್ಲಿ ಮಳೆಗಾಗಿ ಪ್ರಾರ್ಥಿಸುವುದು ಅತ್ಯಗತ್ಯವಾಗಿದೆ ಎಂದು ರೈತ ಮಹಿಳೆಯರಾದ ದ್ರಾಕ್ಷಾಯಣಿ ಹಡಪದ, ಲಕ್ಷ್ಮೀ ಹಡಪದ, ಕಸ್ತೂರಿ ಹಡಪದ ತಿಳಿಸಿದರು.

ನರೇಗಲ್‌ ಪಟ್ಟಣದ ಹಿರೇಕೆರೆಯಲ್ಲಿ ಮಳೆಗಾಗಿ ಗಂಗಾಪೂಜೆ ಮಾಡುತ್ತಿರುವ ಮಹಿಳೆಯರು

- ಕೇವಲ 4 ಸಾವಿರ ಹೆಕ್ಟೇರ್‌

ಹೆಸರು ಬಿತ್ತನೆ ನರೇಗಲ್‌ ಹೋಬಳಿಯು 44 ಸಾವಿರ ಹೆಕ್ಟೇರ್‌ ಬಿತ್ತನೆ ಪ್ರದೇಶವನ್ನು ಹೊಂದಿದೆ. ಅದರಲಿ 3.6 ಸಾವಿರ ಹೆಕ್ಟೇರ್‌ ಮಾತ್ರ ಕೊಳವೆಬಾವಿ ಅವಲಂಬಿತ ನೀರಾವರಿ ಪ್ರದೇಶವಿದೆ. ಇವರು ಸಹ ಮುಂಗಾರಿನಲ್ಲಿ ಮಳೆಯಾಶ್ರಿತ ಬೆಳೆಗಳ ಕಡೆಗೆ ಗಮನ ಹರಿಸುತ್ತಾರೆ. ಕಳೆದ ಸಾಲಿನಲ್ಲಿ 8 ಸಾವಿರ ಹೆಕ್ಟೇರ್‌ ಹೆಸರು ಬಿತ್ತನೆಯಾಗಿತ್ತು. ಈ ಬಾರಿ ಮಳೆ ಕೊರತೆಯಿಂದಾಗಿ ಕೇವಲ 4 ಸಾವಿರ ಹೆಕ್ಟೇರ್‌ ಬಿತ್ತನೆಯಾಗಿದೆ ಎಂದು ನರೇಗಲ್‌ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಿ.ಕೆ.ಕಮ್ಮಾರ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.