
ನರೇಗಲ್: ಹೋಬಳಿಯ ನರೇಗಲ್-ಗಜೇಂದ್ರಗಡ ರಸ್ತೆಗೆ ಚಾಚಿಕೊಂಡಿದ್ದ ಮುಳ್ಳಿನ ಹಾಗೂ ಇತರೆ ಗಿಡಗಳ ಟೊಂಗಿಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ. ಸದ್ಯ ನಿಡಗುಂದಿಯಿಂದ ನಿಡಗುಂದಿಕೊಪ್ಪದ ಕ್ರಾಸ್ ದಾಟಿ ನರೇಗಲ್ ಮಾರ್ಗದ ಗಡ್ಡಿ ಹಳ್ಳದ ವರೆಗೆ ಟೊಂಗಿಗಳ ತೆರವು ಕಾರ್ಯಚರಣೆ ಜೆಸಿಬಿ ಮೂಲಕ ನಡೆಸಿದ್ದಾರೆ.
ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ನರೇಗಲ್ ಹೋಬಳಿಯ ಮಾರ್ಗದ ರಸ್ತೆ ಬದಿಯ ಎರಡೂ ಕಡೆಗಳಲ್ಲಿ ಮುಳ್ಳಿನ ಕಂಟಿಗಳು ರಸ್ತೆಗೆ ಚಾಚಿಕೊಂಡು ಅಪಘಾತಕ್ಕೆ ಆಹ್ವಾನಿಸುತ್ತಿದ್ದವು. ಗಿಡದ ಟೊಂಗೆಗಳು ರಸ್ತೆ ಮಧ್ಯಭಾಗದವರೆಗೂ ಚಾಚಿಕೊಂಡಿದ್ದು, ಇದರಿಂದಾಗಿ ಎದುರಿಗೆ ಬರುವ ವಾಹನಗಳ ಕಾಣಿಸದಿರುವುದರಿಂದ ಅಪಘಾತಗಳು ನಡೆಯುತ್ತಿದ್ದವು. ಮಾರನಬಸರಿ-ನರೇಗಲ್, ಮಾರನಬಸರಿ ಕಳಕಾಪುರ, ಜಕ್ಕಲಿ-ಮಾರನಬಸರಿ, ಬೂದಿಹಾಳ-ನರೇಗಲ್ ಮಾರ್ಗದ ಗ್ರಾಮೀಣ ಭಾಗದ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಂಗೆಗಳು ರಸ್ತೆಗೆ ಚಾಚಿಕೊಂಡಿವೆ. ಈಗಲೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ನಡೆದಿರುವ ಕಾರ್ಯವನ್ನು ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೂ ವಿಸ್ತರಿಸಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.
ಕಳೆದೊಂದು ವಾರದಿಂದ ತೆರುವು ಕಾರ್ಯ ನಡೆದಿದೆ. ಆರಂಭದಲ್ಲಿ ನಿಡಗುಂದಿಕೊಪ್ಪದ ಕ್ರಾಸ್ ಬಳಿಯ ರಸ್ತೆ ಬದಿ ಆರಂಭಿಸಿದ್ದು, ನಂತರ ನರೇಗಲ್ ಮಾರ್ಗದ ಗಡ್ಡಿ ಹಳ್ಳ ಹಾಗೂ ನಿಡಗುಂದಿ-ಗಜೇಂದ್ರಗಡ ಮಾರ್ಗದ ವರೆಗೆ ಸಾಗಿದೆ. ಇನ್ನೂ ತೆರವು ಕಾರ್ಯಾಚರಣೆ ಮುಂದೆವರೆದಿದೆ.
ಕುರಿತು ‘ಪ್ರಜಾವಾಣಿ’ಯಲ್ಲಿ ಆ.3ರಂದು ‘ರಸ್ತೆಗೆ ಚಾಚಿದ ಟೊಂಗೆ ತೆರವಿಗೆ ಆಗ್ರಹ; ಅಪಘಾತಕ್ಕೆ ಆಹ್ವಾನ ನೀಡುವ ಕಂಟಿಗಳುʼ ಎಂದು ವಿಶೇಷ ವರದಿ ಪ್ರಕಟಿಸಲಾಗಿತ್ತು. ತದನಂತರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ‘ಕುಂದುಕೊರತೆ’ ವಿಭಾಗದಲ್ಲೂ ಸಮಸ್ಯೆಯ ಕುರಿತು ವರದಿ ಪ್ರಕಟಿಸಲಾಗಿತ್ತು. ನಿರಂತರ ವರದಿಗೆ ಎಚ್ಚೆತ್ತ ಅಧಿಕಾರಿ ರಸ್ತೆಗೆ ಚಾಚಿಕೊಂಡ ಟೊಂಗೆಗಳ ತೆರವಿಗೆ ಮುಂದಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.