
ನರಗುಂದ: ಪಟ್ಟಣದ ಐತಿಹಾಸಿಕ ನರಗುಂದ ಗುಡ್ದದತಡಿಯಲ್ಲಿ ಎರಡು ದಶಕಗಳ ಹಿಂದೆ ನಿರ್ಮಾಣಗೊಂಡ ಆಸರೆ ಮನೆಗಳ ತಾಣವಾದ ಎಸ್.ಎಂ.ಕೃಷ್ಣ ನಗರ ಮೂಲಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಜತೆಗೆ ಗುಡ್ಡ ಪ್ರದೇಶವಾಗಿದ್ದರಿಂದ ಉಳ್ಳವರು, ಪ್ರಭಾವಿಗಳಿಂದ ಅತಿಕ್ರಮಣ ನಿರಂತರ ನಡೆಯುತ್ತಲೇ ಇದ್ದು, ಇದಕ್ಕೆ ಕಡಿವಾಣ ಇಲ್ಲದಂತಾಗಿದೆ.
ಮೂಲಸೌಲಭ್ಯಗಳ ಕೊರತೆಗಳ ನಡುವೆಯೇ ಎರಡು ದಶಕಗಳಿಂದ ವಾಸಿಸುತ್ತಿರುವ ನೂರಾರು ನಿವಾಸಿಗಳು ಇದರಿಂದ ರೋಸಿಹೋಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಪುರಸಭೆಯನ್ನು ಶಪಿಸುತ್ತಿದ್ದಾರೆ. ಆದರೂ, ಅವರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ.
ಸುಮಾರು 2 ಸಾವಿರ ಮನೆಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ‘ಆಸರೆ’ ಯೋಜನೆ ರೂಪುಗೊಂಡಿತು. ಇದರಲ್ಲಿ 500 ಮನೆಗಳು ನಿರ್ಮಾಣಗೊಂಡು ಹಕ್ಕುಪತ್ರಗಳನ್ನು ನೀಡಲಾಗಿತ್ತು. ಆದರೆ, ಹಕ್ಕುಪತ್ರ ಪಡೆದವರು ಅಲ್ಲಿ ವಾಸ ಮಾಡದ ಕಾರಣ ಮನೆಗಳು ಖಾಲಿ ಬಿದ್ದಿದ್ದವು.
2008-09ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಪಟ್ಟಣದಲ್ಲಿನ ನೂರಾರು ಮನೆಗಳು ಕುಸಿದು ಬಿದ್ದವು. ಕೆಲವರಿಗೆ ಸೂರು ಇಲ್ಲದಂತಾಯಿತು. ಇದರಿಂದ ಮನೆ ಇದ್ದವರು, ಇಲ್ಲದವರೆಲ್ಲರೂ ತಮ್ಮದಲ್ಲದ ಮನೆಗಳಲ್ಲಿ ವಾಸ ಮಾಡಲು ಮುಂದಾದರು. ಕೆಲವರು ಇಂದಿನವರೆಗೂ ಅಧಿಕೃತ ಹಕ್ಕುಪತ್ರಗಳನ್ನು ಪಡೆದಿಲ್ಲ. ಪುರಸಭೆಯೂ ನೀಡಿಲ್ಲ. ಜತೆಗೆ ಮೂಲಸೌಲಭ್ಯಗಳನ್ನೂ ಒದಗಿಸಿಲ್ಲ. ಮಹಿಳೆಯರಿಗೆ ಸಾಮೂಹಿಕ ಶೌಚಾಲಯಗಳು ಇಲ್ಲ. ಇದರಿಂದ ಪಟ್ಟಣದ ವ್ಯಾಪ್ತಿಗೆ ಸೇರಿದ್ದರೂ ಎಸ್.ಎಂ.ಕೃಷ್ಣ ನಗರ ಸೌಲಭ್ಯಗಳಿಂದ ಕೊರತೆಯಿಂದ ಸೊರಗಿದೆ.
ಗುಡ್ಡದ ತಡಿ ವಿಶಾಲವಾಗಿದೆ. ಅಲ್ಲಿಯೇ ಜನತಾ ಪ್ಲಾಟ್‌ಗಳು ನಿರ್ಮಾಣಗೊಂಡಿವೆ. ಆದರೆ, ಅವುಗಳಿಗೂ ಸರಿಯಾದ ಮೂಲಸೌಲಭ್ಯಗಳಿಲ್ಲ. 500 ಮನೆಗಳಿರುವ ಈ ಬಡಾವಣೆಯಲ್ಲಿ ಕೆಲವೆಡೆ ಮಾತ್ರ ರಸ್ತೆ ನಿರ್ಮಾಣವಾದರೆ ಹೆಚ್ಚಿನ ಕಡೆ ತಗ್ಗು, ದಿಣ್ಣೆಗಳಿಂದ ಕೂಡಿದ ಕೆಂಪು ರಸ್ತೆಗಳೇ ಗೋಚರಿಸುತ್ತವೆ. ಈಚೆಗೆ 24/7 ನೀರಿನ ಸೌಲಭ್ಯ ದೊರೆತು ಜನತೆ ನಿಟ್ಟುಸಿರುಬಿಟ್ಟಿದ್ದಾರೆ. ಆದರೆ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ತ್ಯಾಜ್ಯ ನೀರು ಮನೆಗಳ ಮುಂದೆ ಹರಿಯುವಂತಾಗಿದೆ.
ಜನರು ಎರಡು ದಶಕಗಳಿಂದ ಇಲ್ಲಿ ವಾಸಿಸುತ್ತಿದ್ದರೂ ಬೀದಿ ದೀಪಗಳೇ ಇಲ್ಲ. ಇದರಿಂದ ರಾತ್ರಿ ವೇಳೆ ಇಡೀ ಪ್ರದೇಶ ಸಂಪೂರ್ಣ ಕತ್ತಲುಮಯವಾಗುತ್ತದೆ. ಜನರು ಹೊರಗಡೆ ಅಡ್ಡಾಡಲು ಭಯ ಬೀಳುತ್ತಾರೆ. ಮೊದಲೇ ಗುಡ್ಡದತಡಿ ಆಗಿರುವುದರಿಂದ ಅಲ್ಲಲ್ಲಿ ಮುಳ್ಳು ಕಂಟಿಗಳು ಬೆಳೆದು, ಹುಳು ಹುಪ್ಪಡಿಗಳ ಕಾಟ ಹೆಚ್ಚಾಗಿದೆ.
‘ಈಗೇನು ಜನ ವಾಸ ಮಾಡಕತ್ಥಾರ ಆರಂಭದಲ್ಲಿ ಹತ್ತ ಮನ್ಯಾಗ ಜನರು ಇದ್ದರು. ಸುತ್ತಲೂ ಕಾಡ ಕಾಣತಿತ್ತ. ಆಗು ರಸ್ತೆ ಹಿಂಗ ಇದ್ದವ, ಈಗಲೂ ಹಂಗ ಐತಿ’ ಎಂದು ವೃದ್ಧ ನಿಂಗಪ್ಪ ಹೇಳಿದ ಮಾಡುಗಳು ಅಲ್ಲಿನ ಕೊರತೆಗಳಿಗೆ ಕನ್ನಡಿ ಹಿಡಿಯಿತು.
ಇಲ್ಲಿನ ಮನೆಗಳು ಚಿಕ್ಕದಿರುವ ಕಾರಣ ಕೃಷ್ಣ ನಗರದ ನಿವಾಸಿಗಳಿಗೆ ಶೌಚಾಲಯ ಕಟ್ಟಿಕೊಳ್ಳಲು ಆಗುತ್ತಿಲ್ಲ. ಇದರಿಂದ ಇಲ್ಲಿನ ಜನರು ಬಹಿರ್ದೆಸೆಗೆ ಬಯಲೇ ಗತಿಯಾಗಿದೆ. ಶೌಚಕ್ಕಾಗಿ ಮಹಿಳೆಯರ ಪರದಾಟ ಹೇಳತೀರದಾಗಿದೆ. ಮಹಿಳೆಯರು ಮನೆಗಳ ದೂರದ ಬಯಲಲ್ಲಿ ಬಹಿರ್ದೆಸೆಗೆ ತೆರಳುತ್ತಿದ್ದರು. ಈಗ ಆ ಜಾಗೆಯನ್ನೂ ಎಲ್ಲೆಂದರಲ್ಲಿ ಅತಿಕ್ರಮಣ ಮಾಡುತ್ತಿರುವ ಪರಿಣಾಮ ಮಹಿಳೆಯರು ನಿತ್ಯ ಚಟುವಟಿಕೆಗೆ ಚಿಂತೆ ಮಾಡುವಂತಾಗಿದೆ.
ಮನೆಗಳ ಸಮೀಪ ಸಾಕಷ್ಟು ಬಯಲು ಜಾಗೆ ಇದೆ. ಇಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸಲು ಮನವಿ ಮಾಡಿದರೂ ಪುರಸಭೆ ಗಮನಹರಿಸುತ್ತಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಪುರಸಭೆಯು ಗುಡ್ಡದ ಮೇಲ್ಮೈ ಪ್ರದೇಶ ಬಿಟ್ಟು ಗುಡ್ಡದ ಕೆಳಗೆ, ಸುತ್ತಲಿನ ಭಾಗವನ್ನು ಅರಣ್ಯೀಕರಣ ಮಾಡಲು ಜವಾಬ್ದಾರಿ ನೀಡಿದೆ. ತನ್ನ ವ್ಯಾಪ್ತಿಯ ಪ್ರದೇಶ ಗುರುತಿಸಲು ಮನವಿ ಮಾಡಿದೆ. ಆದರೆ ಆ ಕಾರ್ಯ ಸಂಪೂರ್ಣ ನಡೆದಿಲ್ಲ. ಇದರಿಂದ ಅರಣ್ಯ ಇಲಾಖೆ ತನಗೆ ವಹಿಸಿದ ಗುಡ್ಡದ ಸುತ್ತಲೂ ಗಡಿ ಗುರುತಿಸಿಕೊಂಡು ಅರಣ್ಯೀಕರಣ ಮಾಡಬೇಕು. ಆಗ ಐತಿಹಾಸಿಕ ಗುಡ್ಡ ಗುಡ್ಡವಾಗಿಯೇ ಉಳಿದು ಮುಂದಿನ ಪೀಳಿಗೆಗೆ ಇತಿಹಾಸ ಸಾರಲು ಸಾಧ್ಯವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಶೌಚಾಲಯ ನಿರ್ಮಿಸಿ ಎಸ್.ಎಂ.ಕೃಷ್ಣ ನಗರದಲ್ಲಿ ಮಹಿಳೆಯರು ಶೌಚಾಲಯವಿಲ್ಲದೇ ಪರದಾಡಬೇಕಿದೆ. ಮೊದಲು ಬಹಿರ್ದೆಸೆಗೆ ತೆರಳುತ್ತಿದ್ದ ಜಾಗೆ ಅತಿಕ್ರಮಣವಾಗುತ್ತಿದ್ದು ಇದು ನಿಲ್ಲಬೇಕು. ಇಲ್ಲಿನ ಜನರಿಗೆ ಸ್ಥಳೀಯ ಆಡಳಿತ ಶೌಚಾಲಯ ನಿರ್ಮಾಣ ಮಾಡಿಕೊಡಬೇಕುನೇತ್ರಾ ಕಲಕುಟ್ರಿ ಎಸ್.ಎಂ.ಕೃಷ್ಣ ನಗರ ನಿವಾಸಿ
ನರಗುಂದ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳು ನಾವು ಕೃಷ್ಣ ನಗರದಾಗ ಇರಾಕತ್ತ 15 ವರ್ಷ ಆತು. ಆದರೆ ಇಲ್ಲಿ ಸರಿಯಾಗಿ ಬೇಕಾದ ಸೌಲಭ್ಯ ಸಿಗುತ್ತಿಲ್ಲ. ಪುರಸಭೆ ತಹಶೀಲ್ದಾರ್ ನಮ್ಮ ಕಷ್ಟ ನಿವಾರಣೆ ಮಾಡಬೇಕುನೂರಜಾನ್ ಹುನಗುಂದ
ರಗುಂದ ಅತಿಕ್ರಮಣಕ್ಕೆ ಕಡಿವಾಣ ಹಾಕಿ ಗುಡ್ಡದ ಕೆಳಗಿನ ಜಾಗವನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ. ಹಿಂದೆ ಕೃಷ್ಣ ನಗರದಲ್ಲಿ ಉದ್ಯಾನ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಆ ಜಾಗ ಇಂದು ಅತಿಕ್ರಮಣವಾಗುತ್ತಿದೆ. ನಮ್ಮ ನಗರಕ್ಕೆ ಪುರಸಭೆ ಎಲ್ಲ ಮುಲಸೌಲಭ್ಯಗಳನ್ನು ಒದಗಿಸಬೇಕು. ಅತಿಕ್ರಮಣಕ್ಕೆ ಕಡಿವಾಣ ಹಾಕಬೇಕು.ಬಸು ಹೂಗಾರ ಕೃಷ್ಣ ನಗರ ನಿವಾಸಿ
ಐತಿಹಾಸಿಕ ಗುಡ್ಡ ರಕ್ಷಣೆಯಾಗಲಿ ಗುಡ್ಡ ಅತಿಕ್ರಮಣ ತಡೆಯುವಲ್ಲಿ ಪುರಸಭೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಬಂಡಾಯದ ನೆಲ ನರಗುಂದ ಇತಿಹಾಸ ಸಾರಲು ಐತಿಹಾಸಿಕ ಗುಡ್ಡ ವಿಶೇಷ ಕುರುಹು ಆಗಿದ್ದು ಅದರ ರಕ್ಷಣೆಯ ಅಗತ್ಯವಿದೆ.ರಮೇಶ ಗಾಯಕವಾಡ ಕೃಷ್ಣ ನಗರ ನಿವಾಸಿ
ನರಗುಂದ ಸಮಸ್ಯೆ ಬಗೆಹರಿಸಲು ಕ್ರಮ ಆಸರೆ ಮನೆಗಳು ಇರುವ ಎಸ್.ಎಂ.ಕೃಷ್ಣ ನಗರಕ್ಕೆ ಅಗತ್ಯವಿರುವ ಮೂಲಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಲಾಗಿದೆ. ರಸ್ತೆ ನಿರ್ಮಿಸಲಾಗಿದೆ. ಮನೆ ಮನೆಗೂ ನಳಗಳ ಮೂಲಕ ನೀರು ಒದಗಿಸಲಾಗಿದೆ. ಬೀದಿ ದೀಪಗಳನ್ನು ಕೆಲವೇ ದಿನಗಳಲ್ಲಿ ಅಳವಡಿಸಲಾಗುವುದು. ಚರಂಡಿಗಳನ್ನು ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಿರ್ಮಿಸಲಾಗುವುದು. ಗುಡ್ಡದ ಕೆಳಗೆ ಹಾಗೂ ಸುತ್ತಲಿನ ಭಾಗದಲ್ಲಿ ಅರಣ್ಯೀಕರಣ ಮಾಡಲು ಅರಣ್ಯ ಇಲಾಖೆ ಜತೆಗೆ ಚರ್ಚಿಸಲಾಗಿದೆ.ಸಂಗಮೇಶ ಬ್ಯಾಳಿ ಮುಖ್ಯಾಧಿಕಾರಿ ಪುರಸಭೆ ನರಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.