
ನರಗುಂದ: ಮೆಕ್ಕೆಜೋಳ ಖರೀದಿ ಕೇಂದ್ರ ಪುನರ್ ಆರಂಭಿಸಬೇಕೆಂದು ಆಗ್ರಹಿಸಿ
ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಗುರುವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಸಾಬಳೆ ಅವರು, ತಾಲ್ಲೂಕಿನಲ್ಲಿ ಐನೂರಕ್ಕೂ ಹೆಚ್ಚು ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಆದರೆ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಕೇವಲ 190 ರೈತರ ಹೆಸರನ್ನು ನೊಂದಣಿ ಮಾಡಿಕೊಂಡು ನರಗುಂದ ತಾಲ್ಲೂಕಿನ ಕೋಟಾ ಮುಗಿದ ಪರಿಣಾಮ ನೊಂದಣಿ ಸಾಫ್ಟ್‌ವೇರ್ ಬಂದ್ ಆಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಹೇಳುತ್ತಾರೆ. ಜೊತೆಗೆ ಖರೀದಿ ಕೇಂದ್ರವು ಬಂದ್ ಆಗಿದೆ. ಹೀಗಾದರೆ ಉಳಿದ ರೈತರ ಪಾಡೇನು ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಕೂಡಲೇ ಖರೀದಿ ಕೇಂದ್ರ ಪುನರ್ ಆರಂಭಿಸುವಂತೆ ಸಾಬಳೆ ಆಗ್ರಹಿಸಿದರು. ಸದಸ್ಯ ಚನ್ನು ನಂದಿ ಮಾತನಾಡಿ ಮುಂಗಾರು ಸಂದರ್ಭದಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿದೆ. ಪರಿಹಾರ ಸಮರ್ಪಕವಾಗಿ ನೀಡಿಲ್ಲ. ಆದ್ದರಿಂದ ಕೂಡಲೇ ಪರಿಹಾರ ನೀಡಬೇಕು. ಬೆಳೆ ವಿಮೆ ಬಿಡುಗಡೆ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ಪರವಾಗಿ ನಿರೀಕ್ಷಕ ಸುನಿಲ್ ಪಾಟೀಲ್ ಮನವಿ ಸ್ವೀಕರಿಸಿದರು. ಎಂ.ಎನ್.ಮುಲ್ಲಾ, ಮನೋಹರ ಹುಯಿಲಗೋಳ, ರವಿ ಒಡೆಯರ, ವೀರಣ್ಣ ಸೊಪ್ಪಿನ ಹಾಗೂ ರೈತ ಸಂಘದ ಸದಸ್ಯರು ಇದ್ದರು.