ನರಗುಂದ: ನಾಲ್ಕು ದಿನಗಳ ಹಿಂದಷ್ಟೇ ನಿರಂತರ ಎರಡು ವಾರ ಸುರಿದು ರೈತರ ನಿದ್ದೆಗೆಡಿಸಿದ್ದ ಮಳೆ ಮತ್ತೇ ಬುಧವಾರ ರಾತ್ರಿ, ಗುರುವಾರ ಮಧ್ಯಾಹ್ನ ಜೋರಾಗಿ ಸುರಿಯುವ ಮೂಲಕ ಜನಜೀವನ ಅಸ್ತವ್ಯಸ್ತಗೊಳಿಸಿದೆ.
ತಾಲ್ಲೂಕಿನಲ್ಲಿ ಎರಡು ದಿನಗಳ ಸುರಿದ ಮಳೆಯಿಂದ ರೈತರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಈಗಾಗಲೇ ನಿರಂತರ ಮಳೆಗೆ ತೇವಾಂಶ ಹೆಚ್ಚಾಗಿ ಜಮೀನಿನಲ್ಲಿ ಕೊಳೆತು ಹೋಗಿವೆ. ಅಲ್ಪಸ್ವಲ್ಪ ಉಳಿದ ಹೆಸರು ಕಾಳನ್ನು ರೈತರು ಕಟಾವು ಮಾಡಿ ಅವುಗಳನ್ನು ಸ್ವಲ್ಪ ಬಿಸಿಲಿಗೆ ಒಣಗಿಸಲು ಹೆಣಗಾಡುತ್ತಿರುವಾಗ ಅಹೋರಾತ್ರಿ ಸುರಿದ ಮಳೆ ರೈತರನ್ನು ಮತ್ತಷ್ಟು ಕಷ್ಟಕ್ಕೆ ತಳ್ಳಿದೆ.
ಅಳಿದುಳಿದ ಹೆಸರನ್ನು ಕಟಾವು ಮಾಡಿಸಿದಾಗ ಶೇ 90ರಷ್ಟು ಹೆಸರು ಕಾಳು ಕೊಳೆತು, ಮೊಳಕೆ ಬಂದು ತ್ಯಾಜ್ಯ ರೂಪದಲ್ಲಿ ಸಂಗ್ರಹವಾಗುತ್ತಿದೆ. ಉಳಿದ ಶೇ 10ರಷ್ಟನ್ನಾದರೂ ಕಾಳು ಪಡೆಯಬೇಕೆಂದರೆ ಅದನ್ನು ಒಣಗಿಸಲು ಮಳೆ ಅವಕಾಶ ನೀಡುತ್ತಿಲ್ಲ.
ಕಟಾವು ಮಾಡಿದ ಹೆಸರುಕಾಳು ಒಣಗಿಸಲು ರೈತರಿಗೆ ಜಾಗ ಸಿಗದಂತಾಗಿದೆ. ಕೆಲವು ರೈತರು ಹೆದ್ದಾರಿ, ಒಳರಸ್ತೆಗಳ ಮೇಲೆಯೇ ಹೆಸರು ಒಣಗಿಸಲು ಮುಂದಾಗಿದ್ದಾರೆ. ಇದರಿಂದ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ.
ಬೆಲೆ ಕುಸಿತ: ಇರುವ ಒಂದು ಚೀಲ, ಎರಡು ಚೀಲ ಹೆಸರು ಕಾಳು ಮಾರಾಟ ಮಾಡಬೇಕೆಂದರೆ ವರ್ತಕರು ಹೆಸರನ್ನು ನೋಡಿ ಅಡ್ಠಾದಿಡ್ಡಿ ದರಕ್ಕೆ ಕೇಳುತ್ತಿದ್ದಾರೆ. ಕ್ವಿಂಟಲ್ ₹10 ಸಾವಿರ ಇದ್ದ ದರ ಈಗ ₹2 ಸಾವಿರದಿಂದ ₹5 ಸಾವಿರಕ್ಕೆ ಕೇಳುತ್ತಿದ್ದಾರೆ. ಇದರಿಂದ ರೈತನ ಬಾಳು ಗೋಳಾಗಿದೆ ಎಂದು ಬೆಳೆಗಾರರು ಅಲವತ್ತುಕೊಂಡಿದ್ದಾರೆ.
ಮಳೆ ಕಾರಣಕ್ಕೆ ಹೆಸರುಬೆಳೆ ಸಂಪೂರ್ಣ ಹಾನಿಯಾಗಿದೆ. ಸರ್ಕಾರ ಕೂಡಲೇ ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕು –ಯಲ್ಲಪ್ಪ ಚಲುವಣ್ಣವರ ಕುರ್ಲಗೇರಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.