ನರಗುಂದ: ಗ್ರಾಮೀಣ ಜನತೆ ಬೇಸಿಗೆಯಲ್ಲಿ ಗುಳೆ ಹೋಗಬಾರದೆಂದು ನರೇಗಾ ಯೋಜನೆ ಜಾರಿಗೆ ತಂದ ಪರಿಣಾಮ ಹೊಲದಲ್ಲಿ ಕೂಲಿಕಾರ್ಮಿಕರು ಬದು ನಿರ್ಮಾಣದ ಕಾಮಗಾರಿ ಕೈಗೊಂಡಿದ್ದರು. ಈ ವೇಳೆ ಉಂಟಾದ ಕಂದಕಗಳು ಈಚೆಗೆ ಸುರಿದ ಮಳೆ ನೀರಿನಿಂದ ಭರ್ತಿಯಾಗಿದ್ದು, ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿವೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ‘ದುಡಿಯೋಣ ಬಾ’ ಮತ್ತು ‘ಸ್ತ್ರೀ ಚೇತನ’ ಅಭಿಯಾನದಡಿ 13 ಗ್ರಾಮ ಪಂಚಾಯಿತಿಗಳಲ್ಲಿ ಸಾಮೂಹಿಕ ಬದು ನಿರ್ಮಾಣ ಕೈಗೊಳ್ಳಲಾಗಿತ್ತು. ಇದರಿಂದ ರೈತರ ಜಮೀನಿಗೆ ಬದು ನಿರ್ಮಾಣ ಮಾಡಲಾಗಿದ್ದು, ಸದ್ಯ ಮಳೆನೀರಿಗೆ ಕಂದಕಗಳು ತುಂಬಿಕೊಂಡಿವೆ.
ತಾಲ್ಲೂಕಿನ ಸುರಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯು ₹7 ಲಕ್ಷ ಮೊತ್ತದಲ್ಲಿ 1,866 ಮಾನವ ದಿನಗಳನ್ನು ಸೃಷ್ಟಿಸಿ ಬರೋಬ್ಬರಿ 350ಕ್ಕೂ ಅಧಿಕ ಕಂದಕಗಳನ್ನು ನಿರ್ಮಾಣದ ಗುರಿ ಹೊಂದಲಾಗಿತ್ತು. ಆದರೆ ಗುರಿ ಮೀರಿ 890 ಕಂದಕಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಮಣ್ಣಿನ ಸವಕಳಿ ತಪ್ಪಿದೆ.
ಅಂದಾಜು 37 ಹೆಕ್ಟೇರ್ ಪ್ರದೇಶದಲ್ಲಿ 356 ಜನ ಅಕುಶಲ ಕೂಲಿಕಾರರು ಕೆಲಸ ಮಾಡುತ್ತಿದ್ದು, 890 ಕಂದಕಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ಜಮೀನಿನ ಸುತ್ತ ಬದು ನಿರ್ಮಾಣವಾಗಿದೆ. ಭೂಮಿಯಲ್ಲಿ ನೀರು ಇಂಗಿದ ನಂತರ ಹರಿದು ಬಂದು ಕಂದಕಗಳಲ್ಲಿ ಸಂಗ್ರಹಗೊಂಡಿದೆ. ಇದರಿಂದಾಗಿ ರೈತರ ಜಮೀನಿನಲ್ಲಿನ ಮಣ್ಣಿನ ಸವಕಳಿ ತಪ್ಪಿದೆ. ಬದುವಿನ ಹತ್ತಿರ ಕಂದಕಗಳನ್ನು ನಿರ್ಮಾಣ ಮಾಡಿದ್ದರಿಂದ ಬದು ಬೇಸಾಯ ಮಾಡಲು ಅನುಕೂಲವಾಗಿದೆ.
ಚಿಕ್ಕನರಗುಂದ, ಕೊಣ್ಣೂರು, ಬೆನಕನಕೊಪ್ಪ, ಭೈರನಹಟ್ಟಿ, ಬನಹಟ್ಟಿ, ವಾಸನ ಗ್ರಾ.ಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಜಲಾನಯನ ಮಾದರಿಯೊಳಗೆ ಯೋಜನೆ ರೂಪಿಸಿ, ಭೌಗೊಳಿಕವಾಗಿ ಮೇಲ್ಮಟ್ಟದಿಂದ ಕೆಳ ಮಟ್ಟದವರೆಗೂ ಹಂತ ಹಂತವಾಗಿ ರೈತರ ಜಮೀನಿನಲ್ಲಿ ಸಾಮೂಹಿಕ ಬದು ನಿರ್ಮಾಣವಾಗಿವೆ.
‘ನಮ್ಮ ಜಮೀನಿನಲ್ಲಿ ಈ ಮೊದಲು ಬದು ನಿರ್ಮಾಣ ಇರಲಿಲ್ಲ. ನರೇಗಾ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಯಿಂದ ನಮ್ಮ ಜಮೀನಿಗೆ ಬದು ಹಾಕಿಸಿಕೊಡಲು ಮನವಿ ಮಾಡಲಾಗಿತ್ತು. ಇದರಿಂದ ಜಮೀನಿನ ಫಲವತ್ತಾದ ಮಣ್ಣು ಮಳೆಗೆ ಹರಿದು ಹೋಗದೇ ಅನುಕೂಲವಾಗಿದೆ’ ಎಂದು ತಾಲೂಕಿನ ಸುರಕೋಡ ಗ್ರಾಮದ ರೈತ ಬಸಪ್ಪ ಡಂಬಳ ಹೇಳಿದರು.
‘ಸಮುದಾಯ ಬದು ನಿರ್ಮಾಣ ಕಾಮಗಾರಿ ಪ್ರಾರಂಭ’ ‘ತಾಲ್ಲೂಕಿನ ಸುರಕೋಡ ಚಿಕ್ಕನರಗುಂದ ಕೊಣ್ಣೂರು ಬೆನಕನಕೊಪ್ಪ ಬೈರನಹಟ್ಟಿ ಬನಹಟ್ಟಿ ವಾಸನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮುದಾಯ ಬದು ನಿರ್ಮಾಣ ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.
‘ಅಂತರ್ಜಲ ಮಟ್ಟ ಏರಿಕೆಗೆ ಸಹಕಾರಿ’ ‘ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಕಿರು ಜಲಾನಯನ ಮಾದರಿಯೊಳಗೆ ಯೋಜನೆ ರೂಪಿಸಿ ಭೌಗೋಳಿಕವಾಗಿ ಮೇಲ್ಮಟ್ಟದಿಂದ ಸಮುದಾಯ ಬದು ನಿರ್ಮಾಣ ಮಾಡುತ್ತಾ ಬರಲಾಗುವುದು. ರೈತರ ಜಮೀನಿನಲ್ಲಿ ಬದು ನಿರ್ಮಾಣ ಮಾಡಿದ್ದರಿಂದ ಅಂತರ್ಜಲ ಮಟ್ಟ ಏರಿಕೆಗೆ ಸಹಕಾರಿಯಾಗಿದೆ’ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.