ADVERTISEMENT

ಗದಗ | ಜಲ ಸಂರಕ್ಷಣೆ: ಜಿಲ್ಲೆಗೆ ನರಗುಂದ ಪ್ರಥಮ

ಗದಗ ಜಿಲ್ಲೆ ದೇಶದಲ್ಲೇ ನಾಲ್ಕನೇ ಸ್ಥಾನಕ್ಕೇರಲು ನರಗುಂದ ತಾಲ್ಲೂಕು ಪಂಚಾಯಿತಿ ಕೊಡುಗೆ

ಬಸವರಾಜ ಹಲಕುರ್ಕಿ
Published 12 ಡಿಸೆಂಬರ್ 2025, 5:35 IST
Last Updated 12 ಡಿಸೆಂಬರ್ 2025, 5:35 IST
<div class="paragraphs"><p>ನರಗುಂದ ತಾಲ್ಲೂಕಿನ ನರೇಗಾ ಕಾಮಗಾರಿ ದೃಶ್ಯ</p></div>

ನರಗುಂದ ತಾಲ್ಲೂಕಿನ ನರೇಗಾ ಕಾಮಗಾರಿ ದೃಶ್ಯ

   

ನರಗುಂದ: ಜಲಶಕ್ತಿ ಅಭಿಯಾನದ ಮಹತ್ವದ ಭಾಗವಾಗಿರುವ ‘ಜಲಸಂಚಾಯಿ ಜನಭಾಗಿದಾರಿ 1.0’ ಕಾರ್ಯಕ್ರಮದಲ್ಲಿ ನರಗುಂದ ತಾಲ್ಲೂಕು ಐತಿಹಾಸಿಕ ಸಾಧನೆ ಮಾಡುವ ಮೂಲಕ ಗದಗ ಜಿಲ್ಲೆಗೆ ಕೀರ್ತಿ ತಂದಿದೆ. ಜಲ ಸಂರಕ್ಷಣೆ ಕಾಮಗಾರಿಗಳ ಅನುಷ್ಠಾನದಲ್ಲಿ ತಾಲ್ಲೂಕು ಪ್ರಥಮ ಸ್ಥಾನ ಗಳಿಸಿರುವುದು ವಿಶೇಷ.

ದೇಶದ 780 ಜಿಲ್ಲೆಗಳಲ್ಲಿ (ಝೋನ್ 3, ಕೆಟಗರಿ 3ರಲ್ಲಿ) ಗದಗ ಜಿಲ್ಲೆ ನಾಲ್ಕನೇ ಸ್ಥಾನ ಪಡೆಯಲು ನರಗುಂದ ತಾಲ್ಲೂಕು ಪ್ರಮುಖವಾದ ಕೊಡುಗೆ ನೀಡಿದೆ. ಇದರಿಂದಾಗಿ ಗದಗ ಜಿಲ್ಲೆ ಕೇಂದ್ರ ಸರ್ಕಾರದಿಂದ ₹25 ಲಕ್ಷ ನಗದು ಬಹುಮಾನಕ್ಕೆ ಭಾಜನವಾಗಿದೆ.

ADVERTISEMENT

‘ನೀರಿಗಾಗಿ ಒಂದಾಗಿ; ಪ್ರತಿ ಹನಿ ನೀರನ್ನು ಸಂರಕ್ಷಿಸಿ’ ಎಂಬ ಘೋಷವಾಕ್ಯದೊಂದಿಗೆ ಜಲಸಂಚಾಯಿ ಜನಭಾಗಿದಾರಿ 1.0 ಅಭಿಯಾನ ಪ್ರಾರಂಭಿಸಲಾಗಿತ್ತು. ಮಳೆ ನೀರನ್ನು ಸಂಗ್ರಹಿಸುವುದು, ಜಲ ಸಂರಕ್ಷಣೆಯ ಸಂಸ್ಕೃತಿಯನ್ನು ಬೆಳೆಸುವುದು, ನೀರಿನ ಗುಣಮಟ್ಟವನ್ನು ಸುಧಾರಿಸುವುದು, ನೀರಿನ ಕೊರತೆಯ ಸವಾಲಿಗೆ ಸಮುದಾಯದ ಸಹಭಾಗಿತ್ವದೊಂದಿಗೆ ಸಮರ್ಥ ಪರಿಹಾರವನ್ನು ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿತ್ತು.

ನರಗುಂದ ತಾಲ್ಲೂಕಿನಿಂದ 4,029 ಕಾಮಗಾರಿಗಳ ಮಾಹಿತಿಯನ್ನು ಜಲಸಂಚಾಯಿ ಜನಭಾಗಿದಾರಿ 1.0 ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಗದಗ ಜಿಲ್ಲೆಯಿಂದ ಒಟ್ಟು 11,971 ಕಾಮಗಾರಿಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ಅದರಲ್ಲಿ ಲಕ್ಷ್ಮೇಶ್ವರ-353, ಮುಂಡರಗಿ-1,272, ರೋಣ-2,669, ಗಜೇಂದ್ರಗಡ-74, ಶಿರಹಟ್ಟಿ-45 ಹಾಗೂ ಗದಗ ತಾಲ್ಲೂಕಿನಿಂದ 3,529 ಜಲಸಂರಕ್ಷಣೆಯ ಕಾಮಗಾರಿಗಳ ಪೋಟೊಗಳನ್ನು ಅಪ್‌ಲೋಡ್ ಮಾಡಲಾಗಿದೆ.

2024 ಏಪ್ರಿಲ್ 1ರಿಂದ 2025ರ ಮಾರ್ಚ್ 31ರವರೆಗಿನ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಸೇರಿದಂತೆ ವಿವಿಧ ಯೋಜನೆಗಳಡಿ ಬೃಹತ್ ಜಲ ಕ್ರಾಂತಿಗೆ ನರಗುಂದ ತಾಲ್ಲೂಕಿನಲ್ಲಿ ನಾಂದಿ ಹಾಡಲಾಯಿತು.
ಇದರಲ್ಲಿ ವೈಯಕ್ತಿಕ ಮತ್ತು ಸಮುದಾಯ ಬದು ನಿರ್ಮಾಣ, ಮಳೆನೀರು ಸಂಗ್ರಹ ಕಾಮಗಾರಿಗಳು, ಕೊಳವೆಬಾವಿ ಮರುಪೂರಣ, ಚೆಕ್‌ಡ್ಯಾಂ ನಿರ್ಮಾಣದಂತಹ ಕಾಮಗಾರಿಗಳು ಪ್ರಮುಖವಾಗಿವೆ.

ನರಗುಂದ ತಾಲ್ಲೂಕಿನ ಈ ಶ್ರಮಕ್ಕೆ ಕೇಂದ್ರ ತಂಡದಿಂದಲೂ ಮನ್ನಣೆ ದೊರೆತಿದೆ. ಕೇಂದ್ರ ನೋಡಲ್ ಅಧಿಕಾರಿಗಳು 2025 ಜೂನ್ 16ರಿಂದ 21ರವರೆಗೆ ಗದಗ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸ್ಥಳ ಪರಿಶೀಲನೆ, ದಾಖಲೆಗಳ ಪರಿಶೀಲನೆ ನಡೆಸಿದರು. ಈ ವೇಳೆ ನರಗುಂದ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಂಡ ಜಲಸಂರಕ್ಷಣೆಯ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ಉನ್ನತ ಮಾನದಂಡಗಳನ್ನು ಪೂರೈಸಿರುವುದು ಖಚಿತಪಡಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದೇ ಗದಗ ಜಿಲ್ಲೆಗೆ ಈ ಪ್ರಶಸ್ತಿ ಬರಲು ಕಾರಣವಾಗಿದೆ.

ಮಾನವ ದಿನಗಳ ಸೃಜನೆ ನರೇಗಾ ಕೂಲಿಕಾರರ ಇ-ಕೆವೈಸಿ ಕಾರ್ಯ ಜಲಸಂಚಾಯಿ ಜನಭಾಗಿದಾರಿ ಅಭಿಯಾನದಲ್ಲಿ ಗದಗ ಜಿಲ್ಲೆಗೆ ನರಗುಂದ ತಾಲ್ಲೂಕು ಪ್ರಥಮ ಸ್ಥಾನ ಬಂದಿರುವುದು ಸಂತಸ
–ಎಸ್.ಕೆ.ಇನಾಮದಾರ ನರಗುಂದ ತಾಲ್ಲೂಕು ಪಂಚಾಯಿತಿ ಇಒ
ಸಂತೋಷ ಕುಮಾರ್ ಪಾಟೀಲ
ನರಗುಂದ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಹಲವು ಕಾಮಗಾರಿ ಅನುಷ್ಠಾನ ಮಾಡಲಾಗಿದೆ. ಜಿಲ್ಲೆಯ ರಾಷ್ಟ್ರ ಮಟ್ಟದಲ್ಲಿ ಛಾಪು ಮೂಡಿಸಲು ನರಗುಂದ ತಾಲ್ಲೂಕಿನ ಕೊಡುಗೆ ಅಪಾರ
–ಸಂತೋಷಕುಮಾರ್ ಪಾಟೀಲ್ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ
ನರಗುಂದ ತಾಲ್ಲೂಕಿನ ನರೇಗಾ ಕಾಮಗಾರಿ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.