ನರಗುಂದ ತಾಲ್ಲೂಕಿನ ಕೊಣ್ಣೂರಿನ ಬಸ್ ನಿಲ್ದಾಣ ಕೆಸರಿನ ಹೊಂಡದಂತಾದ ದೃಶ್ಯ.
ನರಗುಂದ: ನಿರಂತರ ಸುರಿಯುತ್ತಿರುವ ಮಳೆ ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ ಜನಜೀವನ ಅಸ್ತವ್ಯಸ್ತಗೊಳಿಸಿದೆ.
ತಾಲ್ಲೂಕಿನ ಕೊಣ್ಣೂರಿನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿ ಕೆಸರಿನ ಹೊಂಡವಾಗಿದೆ. ಮೂಲ ಸೌಲಭ್ಯಗಳಿಲ್ಲದೇ ಬಳಲುತ್ತಿರುವ ಬಸ್ ನಿಲ್ದಾಣದಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ದಿನನಿತ್ಯ ಪ್ರಯಾಣಿಕರು ಸಾರಿಗೆ ಸಂಸ್ಥೆಯನ್ನು ಶಪಿಸುವಂತಾಗಿದೆ. ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೇಲಿರುವ ಕೊಣ್ಣೂರ ಗ್ರಾಮವು ತಾಲ್ಲೂಕಿನ ದೊಡ್ಡ ಗ್ರಾಮ. ಕೊಣ್ಣೂರ ಗ್ರಾಮದ ಮೂಲಕ ನಿತ್ಯ ಹುಬ್ಬಳ್ಳಿ ಹಾಗೂ ವಿಜಯಪುರ ಕಡೆ 500ಕ್ಕೂ ಅಧಿಕ ಬಸ್‌ಗಳು ಸಂಚರಿಸುತ್ತವೆ. ಜತೆಗೆ ರಾಮದುರ್ಗ, ರೋಣ ಹೊಳೆಆಲೂರಿಗೆ ತೆರಳಲು ಇದೇ ಗ್ರಾಮವೇ ಕೇಂದ್ರವಾಗಿದ್ದು, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿದೆ.
ಬಸ್ ನಿಲ್ದಾಣದಲ್ಲಿ ಮಾತ್ರ ಕಾಂಕ್ರೀಟ್ ರಸ್ತೆ ಮಾತ್ರ ಆಗುತ್ತಿಲ್ಲ. ಇದರ ಬಗ್ಗೆ ಗ್ರಾಮಸ್ಥರು ಹಲವು ಭಾರಿ ಮನವಿ ನೀಡಿ ಸಾಕಾಗಿದೆ. ಕೆಎಸ್ಆರ್‌ಟಿಸಿ ನರಗುಂದ ವಿಭಾಗ ಇದರ ಬಗ್ಗೆ ಗಮನಹರಿಸುತ್ತಿಲ್ಲ. ಇದರ ಬಗ್ಗೆ ಕೇಳಿದರೆ ಗದಗ ವಿಭಾಗೀಯ ಕಚೇರಿಯವರು ಈ ಕೆಲಸ ನಿರ್ವಹಿಸಬೇಕು ಎನ್ನುತ್ತಾರೆ ಎಂದು ಕೊಣ್ಣೂರ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಸರಿನ ಸ್ನಾನ: ವೇಗವಾಗಿ ಬರುವ ಬಸ್‌ಗಳು ಕೆಸರಲ್ಲಿ ಚಲಾಯಿಸುವುದರಿಂದ ರಸ್ತೆ ಬದಿ ನಿಂತಿರುವ ಪ್ರಯಾಣಿಕರಿಗೆ ಕೆಸರಿನ ಸ್ನಾನ ಸಾಮಾನ್ಯವಾಗಿದೆ.
ಪೇರಲ ಮಾರಲು ಹರ ಸಾಹಸ: ಕೊಣ್ಣೂರ ಗ್ರಾಮದ ಸುತ್ತ ಪೇರಲ ಬೆಳೆಯುವ ಪ್ರದೇಶ ಹೆಚ್ಚು ಇದ್ದು, ರಸ್ತೆಬದಿ ಇಟ್ಟು ಮಾರಾಟ ಮಾಡಲಾಗುತ್ತದೆ. ಆದರೆ, ನಿರಂತರ ಮಳೆ ಹಾಗೂ ಬಸ್ ನಿಲ್ದಾಣ ಕೆಸರಿನ ಹೊಂಡವಾದ ಪರಿಣಾಮ ಪೇರಲ ಮಾರಾಟ ಮಾಡಲು ತೀವ್ರ ಹರಸಾಹಸ ಪಡಬೇಕಿದೆ. ಆಳವಾದ ಕೆಸರಿನ ಹೊಂಡದಲ್ಲಿ ನಿಂತು ಪೇರಲ ಮಾರಾಟ ಮಾಡಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.
ನಿರಂತರ ಮಳೆಯಿಂದ ಜಲಾವೃತಗೊಂಡ ಬೆಳೆಗಳು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ತಾಲ್ಲೂಕಿನಾದ್ಯಂತ ಬಹುತೇಕ ರಸ್ತೆಗಳು ಸಂಪೂರ್ಣ ಕೆಸರಿನಿಂದ ಕೂಡಿದ್ದು, ಸಂಚರಿಸಲು ಬಾರದಂತಾಗಿದೆ. ಒಟ್ಟಾರೆಯಾಗಿ ನಿರಂತರ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ.
ಕೊಣ್ಣೂರ ಬಸ್ ನಿಲ್ದಾಣದಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಬಗ್ಗೆ ಈಚೆಗೆ ಕೆಎಸ್ಆರ್‌ಟಿಸಿ ವಿಭಾಗೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.ಪರುಶರಾಮ ಪ್ರಭಾಕರ, ಕೆಎಸ್ಆರ್‌ಟಿಸಿ ನರಗುಂದ ವಿಭಾಗ ವ್ಯವಸ್ಥಾಪಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.