ಗದಗ: ‘ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ರಥಬೀದಿಯಲ್ಲಿ ವ್ಯಾಪಾರ ಮಳಿಗೆ ಹಾಕಲಾಗಿದೆ. ಅನ್ಯ ರಾಜ್ಯದ ವ್ಯಾಪಾರಸ್ಥರನ್ನು ಕೈ ಬಿಟ್ಟು ಕನ್ನಡಿಗರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಶ್ರೀರಾಮ ಸೇನೆಯ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಗದಗ ಬಂದ್‌ಗೆ ಕರೆ ನೀಡಿವೆ. ಆದರೆ, ಮೇ 26ರಂದು ಯಾವುದೇ ಬಂದ್ ಇರುವುದಿಲ್ಲ. ಸಾರ್ವಜನಿಕರು ಎಂದಿನಂತೆ ತಮ್ಮ ವ್ಯಾಪಾರ, ವಹಿವಾಟುಗಳನ್ನು ನಡೆಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು.
‘ಒತ್ತಾಯಪೂರ್ವಕವಾಗಿ ಯಾರು ಬಂದ್ ಮಾಡುವಂತಿಲ್ಲ. ಒಂದು ವೇಳೆ ಬಂದ್ ಮಾಡಲು ಪ್ರಯತ್ನಿಸಿದರೇ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ನಗರದ ಶಹರ ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಶಾಂತಿಯುತ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಆದರೆ, ಬಂದ್ ಮಾಡಿ ಯಾರೂ ಹೋರಾಟ ಮಾಡಲು ಅವಕಾಶ ಇಲ್ಲ’ ಎಂದು ಎಚ್ಚರಿಕೆ ನೀಡಿದರು.
‘ಬಂದ್ ಮಾಡುವುದರಿಂದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಹಾಗೂ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ಬಂದ್ ಮಾಡಿದರೆ ಯಾವುದೇ ತಕರಾರಿಲ್ಲ. ಆದರೆ, ಇಲ್ಲಿ ಒಂದು ಗುಂಪು ಪರವಾಗಿ ಹಾಗೂ ಮತ್ತೊಂದು ಗುಂಪು ವಿರೋಧವಾಗಿ ಇರುವುದರಿಂದ ಶಾಂತಿ ಭಂಗ ಆಗುವ ಸಾಧ್ಯತೆ ಹೆಚ್ಚಾಗಿದೆ. ಶಾಂತಿ ಕಾಪಾಡುವ ದೃಷ್ಟಿಯಿಂದ ಮೇ 26ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಿದಾಗ ಇಲಾಖೆಯಿಂದ ಅವರಿಗೆ ಸಂಪೂರ್ಣ ಸಹಕಾರ ನೀಡಲಾಗಿತ್ತು. ಈಗಲೂ ಅವರು ಶಾಂತಿಯುತ ಹೋರಾಟ ಮಾಡಿದರೆ ಅನುಕೂಲ ಮಾಡಿಕೊಡುತ್ತೇವೆ. ಜಾತ್ರಾ ಸಮಯದಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿ ನೇಮಿಸಿ ಸುಗಮವಾಗಿ ನಡೆಯಲು ಅನುವು ಮಾಡಿಕೊಡಲಾಗಿದೆ. ಅಲ್ಲದೆ ನಗರಸಭೆ ಆ ಜಾಗ ಮಠಕ್ಕೆ ಸೇರಿದ್ದು ಅಂತ ಈಗಾಗಲೇ ತಿಳಿಸಿದೆ. ಈ ಎಲ್ಲ ವಿಚಾರ ಗಮನದಲ್ಲಿಟ್ಟುಕೊಂಡು ಇಂದು ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಭಾರಿ ಭದ್ರತೆ
ನಿಷೇಧಾಜ್ಞೆ ಜಾರಿ ಇದ್ದರೂ ಕೂಡ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಾಲ್ವರು ಡಿಎಸ್‌ಪಿ ಹತ್ತಕ್ಕೂ ಹೆಚ್ಚು ಇನ್‌ಸ್ಪೆಕ್ಟರ್ ಎರಡು ಕೆಎಸ್‌ಆರ್‌ಪಿ ತುಕಡಿ ಡಿಆರ್ ಸಿಬ್ಬಂದಿ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರು ಎಂದಿನಂತೆ ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ.-ಬಿ.ಎಸ್. ನೇಮಗೌಡ ಎಸ್‌ಪಿ ಗದಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.