ರೋಣ: ಗ್ರಾಮಗಳ ಸಮಸ್ಯೆಗಳ ನಿವಾರಣೆ ಹಾಗೂ ಅಭಿವೃದ್ಧಿಗೆ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇಂತಹ ಪಂಚಾಯತಿಗಳೇ ಗ್ರಾಮಗಳ ಸಮಸ್ಯೆ ಸ್ಪಂದಿಸದಿದ್ದರೆ ಗ್ರಾಮಗಳು ಹೇಗೆ ಸಮಸ್ಯೆಯಿಂದ ತುಂಬಿರುತ್ತವೆ ಎಂಬುದಕ್ಕೆ ತಾಲ್ಲೂಕಿನ ಬೆಳವಣಿಕಿ ಗ್ರಾಮ ಸಾಕ್ಷಿಯಾಗಿದೆ.
ಗ್ರಾಮದ ರಸ್ತೆಗಳು ಕೆಸರು ಗದ್ದೆಯಂತಾದರೂ ಸಂಬಂಧಿಸಿದ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಮಳೆಗಾಲ ಪ್ರಾರಂಭವಾಗಿದ್ದು, ವಠಾರಗಳಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ತಾಣಗಳಾಗುತ್ತಿವೆ. ಗ್ರಾಮದ ಮಹಿಳೆಯರು ಮತ್ತು ಮಕ್ಕಳು ಈ ಕೆಸರಿನಲ್ಲಿ ಓಡಾಡುವಂತಾಗಿದೆ. ಜನರಿಗೆ ಸ್ವಚ್ಛತೆಯ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದ್ದ ಗ್ರಾಮ ಪಂಚಾಯಿತಿಯೇ ನಿರ್ಲಕ್ಷ್ಯ ಧೋರಣೆಯಿಂದ ಸಾಗುತ್ತಿದೆ. ಇದರಿಂದಾಗಿ ರೋಗಭೀತಿಯಲ್ಲಿಯೇ ಗ್ರಾಮಸ್ಥರು ಕಾಲ ಕಳೆಯುವ ಪರಿಸ್ಥಿತಿ ಉಂಟಾಗಿದೆ.
ಗ್ರಾಮದ ಹಲವು ಮನೆಗಳಿಗೆ ಜಲ ಜೀವನ ಮಿಷನ್ ಯೋಜನೆಯಡಿ ಕೊಳಾಯಿ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ ಅನೇಕ ಮನೆಗಳಿಗೆ ಕೊಳಾಯಿ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಅಳವಡಿಸಿದ ಕೊಳಾಯಿಗಳಿಗೆ ನೀರಿನ ಸಂಪರ್ಕ ಕೂಡ ಕಲ್ಪಿಸಿಲ್ಲ. ಹಳೆಯ ಕೊಳಾಯಿಗಳ ಮೂಲಕವೇ ಡಿಬಿಓಟಿ ನೀರು ಪೂರೈಕೆ ಮಾಡಲಾಗುತ್ತಿದೆ. 8ರಿಂದ 10 ದಿನಕ್ಕೊಮ್ಮೆ ಅಲ್ಪ ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು ಈ ನೀರು ಗ್ರಾಮಸ್ಥರ ದಾಹ ನೀಗಿಸಲು ಸಾಕಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಬೆಳವಣಿಕಿ ರೋಣ ತಾಲ್ಲೂಕಿನ ಅತ್ಯಂತ ಹಳೆಯ ಗ್ರಾಮವಾಗಿದೆ. ಪ್ರತಿ ಮನೆಗೂ ಶೌಚಾಲಯ ಹೊಂದಲು ಸಾಧ್ಯವಾಗದ ಕಾರಣ ಗ್ರಾಮ ಪಂಚಾಯಿತಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸುವಲ್ಲಿಯೂ ಕೂಡ ನಿರ್ಲಕ್ಷ್ಯ ತೋರುತ್ತಿದೆ. ಬಹಿರ್ದೆಸೆಗೆ ಬಯಲೇ ಗತಿ ಎಂಬ ಪರಿಸ್ಥಿತಿ ಗ್ರಾಮದಲ್ಲಿದೆ. ಸ್ಥಳೀಯ ಆಡಳಿತ ಮಾತ್ರ ಇದಕ್ಕೆ ಸಂಬಂಧವಿಲ್ಲ ಎಂಬುವ ರೀತಿ ವರ್ತಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದ ಹೊಸ ವಠಾರಗಳಲ್ಲಿನ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ವಿಸ್ತರಿತ ಪ್ರದೇಶಗಳಿಗೆ ಸಮರ್ಪಕ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಆಡಳಿತ ವಿಫಲವಾಗಿದೆ. ತಾಲ್ಲೂಕಿನ ಹಲವೆಡೆ ಅಂಗನವಾಡಿಗಳಿಗೆ ಮಕ್ಕಳೇ ಬಾರದಿರುವ ಕಡೆಗಳಲ್ಲಿ ಅಂಗನವಾಡಿ ತೆರೆದಿದ್ದು, ಬಡ ಜನತೆ ವಾಸವಿರುವ ಪ್ರದೇಶದಲ್ಲಿ ಅಂಗನವಾಡಿ ಸಹ ತೆರೆದಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಕನಿಷ್ಠ ಮೂಲ ಸೌಲಭ್ಯಗಳನ್ನು ಕಲ್ಪಿಸಲು ನಮ್ಮ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸಾಧ್ಯವಾಗದಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಕೂಡಲೇ ಪಂಚಾಯಿತಿ ಆಡಳಿತ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕ್ರಮ ಕೈಗೊಳ್ಳಬೇಕುರಮೇಶ ನಂದಿ ಗ್ರಾಮದ ಯುವಕ
ನರೇಗಾ ಕಾರ್ಯ ಯೋಜನೆಯಲ್ಲಿ ಗ್ರಾಮದ ರಸ್ತೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಸದ್ಯಕ್ಕೆ ನೀರು ನಿಂತಿರುವ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದುಶಿಲ್ಪಾ ಕವಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.