ADVERTISEMENT

ನರೇಗಲ್ | ಬಸ್‌ಗೆ ಜೋತುಬಿದ್ದು ಪ್ರಯಾಣ!

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2023, 5:15 IST
Last Updated 12 ಅಕ್ಟೋಬರ್ 2023, 5:15 IST
ನರೇಗಲ್‌ ಪಟ್ಟಣದಿಂದ ಜಕ್ಕಲಿ ಕಡೆಗೆ ಹೋಗುವ ಬಸ್‌ನಲ್ಲಿ ಬಾಗಿಲಲ್ಲಿ ಜೋತುಬಿದ್ದ ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು
ನರೇಗಲ್‌ ಪಟ್ಟಣದಿಂದ ಜಕ್ಕಲಿ ಕಡೆಗೆ ಹೋಗುವ ಬಸ್‌ನಲ್ಲಿ ಬಾಗಿಲಲ್ಲಿ ಜೋತುಬಿದ್ದ ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು   

- ಚಂದ್ರು ಎಂ. ರಾಥೋಡ್

ನರೇಗಲ್:‌ ಸರ್ಕಾರಿ ಬಸ್‌ಗಳು ಸರಿಯಾದ ಸಮಯಕ್ಕೆ ಬಾರದ ಕಾರಣ ನರೇಗಲ್‌ ಹೋಬಳಿಯಲ್ಲಿ ಶಾಲಾ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬಸ್‌ಗಳ ಬಾಗಿಲಲ್ಲಿ ಜೋತುಬಿದ್ದು ಅಪಾಯಕಾರಿಯಾಗಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಪರಿಸ್ಥಿತಿಗಳನ್ನು ನೋಡಿಯೂ ಸಹ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ನರೇಗಲ್‌ ಪಟ್ಟಣವು ಜಿಲ್ಲೆಯ ವಿದ್ಯಾಕಾಶಿ ಎಂದು ಪ್ರಸಿದ್ಧಿ ಪಡೆದಿದೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಪದವಿವರೆಗೆ ಕೋರ್ಸುಗಳು ಲಭ್ಯ ಇವೆ. ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭವಾದ ಇಲ್ಲಿನ ಅನ್ನದಾನೇಶ್ವರ ಮಠದ ಶಿಕ್ಷಣ ಸಂಸ್ಥೆಯ ವಿವಿಧ ಅಂಗಸಂಸ್ಥೆಗಳಿಗೆ, ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದಿನವೂ ಸಾವಿರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ಕಲಿಯಲು ಬರುತ್ತಾರೆ. ಆದರೆ ಈಚೆಗೆ ಬಸ್‌ಗಳ ಸಂಖ್ಯೆ ಕಡಿಮೆ ಆಗಿರುವ ಕಾರಣ ಜೋತು ಬಿದ್ದು ಪ್ರಯಾಣ ಮಾಡುತ್ತಿದ್ದಾರೆ.

ADVERTISEMENT

ಶಾಲಾ–ಕಾಲೇಜುಗಳಿಗೆ ತೆರಳುವ ಸಮಯಕ್ಕೆ ಬಸ್‌ ಬರುತ್ತಿಲ್ಲ. ಬೆಳಿಗ್ಗೆ ಮತ್ತು ಸಂಜೆ ಅವಧಿಯಲ್ಲಿ ಬರುವ ಯಾವುದಾದರೊಂದು ಬಸ್‌ಗೆ ವಿಪರೀತವಾಗಿ ಜನ ತುಂಬಿರುತ್ತಾರೆ. ಬಸ್‌ ನಲ್ಲಿ ಜಾಗ ಸಿಗದೆ ತರಗತಿಗಳನ್ನು ತಪ್ಪಿಸಿಕೊಂಡು ಶಿಕ್ಷಕರಿಂದ ಬೈಯಿಸಿಕೊಳ್ಳುವ ಘಟನೆಗಳು ಸಾಮಾನ್ಯವಾಗಿವೆ. ಅದರಲ್ಲೂ ಸಂಜೆ ವೇಳೆ ಬಸ್‌ ಸಂಖ್ಯೆ ಕಡಿಮೆಯಾಗಿರುವ ಕಾರಣ ವಿದ್ಯಾರ್ಥಿನಿಯರು ನಿಲ್ಲಲು ಜಾಗವಿಲ್ಲದೆ ಇದ್ದರು ಸಹ ಜೋತುಬಿದ್ದು ಮನೆಗೆ ಹೋಗುವ ಅನಿವಾರ್ಯತೆ ಉಂಟಾಗಿದೆ ಎಂದು ವಿದ್ಯಾರ್ಥಿನಿ ಬಸವಣ್ಣೆವ್ವ ಮುಧೋಳ ಹೇಳಿದರು.

ಮೊದಲು ಇದ್ದಷ್ಟೇ ಬಸ್‌ಗಳು ಈಗಲೂ ಸಂಚರಿಸುತ್ತಿವೆ. ಆದರೆ ಶಕ್ತಿ ಯೋಜನೆಯ ನಂತರ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.
ಸರ್ಫರಾಜ್‌ ಡಾಲಾಯತ್‌, ರೋಣ ಬಸ್ ಘಟಕ

ಕಾಲೇಜಿಗೆ ಹೋಗಲು ಬಸ್ ಪಾಸ್ ಮಾಡಿಸಿಕೊಂಡಿದ್ದೇನೆ. ಆದರೆ, ಬಸ್‌ ಸರಿಯಾದ ಸಮಯಕ್ಕೆ ಬರುವುದಿಲ್ಲ. ಒಂದು ವೇಳೆ ಬಂದರೂ ಹತ್ತಲು ಜಾಗವಿರುವುದಿಲ್ಲ. ಇದರಿಂದ ಅನಿವಾರ್ಯವಾಗಿ ರಶ್‌ ಇದ್ದರೂ ಜೋತು ಬಿದ್ದು ಹೋಗುತ್ತೇವೆ ಎಂದು ಪಿಯು ವಿದ್ಯಾರ್ಥಿ ಆನಂದ ಮಾದರ ಹೇಳಿದರು.

ಕೆಲವು ವಿದ್ಯಾರ್ಥಿಗಳು ರೀಲ್ಸ್‌ ಮಾಡುವ ಉದ್ದೇಶದಿಂದ ಬಸ್‌ ಬಾಗಿಲಲ್ಲಿ ಜೋತುಬಿದ್ದು ಪ್ರಯಾಣ ಮಾಡುತ್ತಿದ್ದಾರೆ. ಎಷ್ಟೇ ಎಚ್ಚರಿಕೆ ನೀಡಿದರು ನಮ್ಮ ಮಾತು ಕೇಳಲ್ಲ. ಒಂದೆರಡು ದಿನ ಪೊಲೀಸ್‌ ಸಿಬ್ಬಂದಿ ಪುಂಡ ವಿದ್ಯಾರ್ಥಿಗಳಿಗೆ ಬಿಸಿ ಮುಟ್ಟಿಸಬೇಕು ಎನ್ನುತ್ತಾರೆ ಬಸ್‌ ನಿರ್ವಾಹಕರು.

ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ಬಸ್‌ಗಳ ವ್ಯವಸ್ಥೆ ಮಾಡುವಂತೆ ಸಾರಿಗೆ ಇಲಾಖೆಯ ಗಮನಕ್ಕೆ ತರಲಾಗುವುದು.
ನಾಗರಾಜ ಗಡಾದ, ಪಿ.ಎಸ್.ಐ ನರೇಗಲ್‌

ಬಸ್‌ಗಳಿಗೆ ಬಾಗಿಲುಗಳು ಇದ್ದರೂ, ಪದೇ ಪದೇ ತೆರೆದು ಮುಚ್ಚಬೇಕು ಎನ್ನುವ ಕಾರಣಕ್ಕೆ ಬಾಗಿಲನ್ನು ಮಡಚಿ ಬಿಟ್ಟಿರುತ್ತಾರೆ. ಇದರಿಂದ ಸಲೀಸಾಗಿ ಪ್ರಯಾಣಿಕರು ಹತ್ತಿ ಇಳಿಯಲು ಅನುಕೂಲವಿದೆ. ಆದರೆ, ಜೋತುಬಿದ್ದು ಪ್ರಯಾಣಿಸುವಾಗ ಬಸ್‌ನಿಂದ ಆಯತಪ್ಪಿ ಬಿದ್ದರೆ, ನೇರವಾಗಿ ಹೊರಗೆ ಬಂದು ಬೀಳುವ ಸಾಧ್ಯತೆಗಳಿವೆ. ಈ ಕುರಿತು ಸಾರಿಗೆ ಇಲಾಖೆಯವರು ಹಾಗೂ ಪೊಲೀಸ್‌ ಇಲಾಖೆಯವರು ಅಗತ್ಯ ಕ್ರಮವನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಕರವೇ ರಾಜ್ಯ ಕಾರ್ಯದರ್ಶಿ ಹನಮಂತಪ್ಪ ಎಚ್.‌ ಅಬ್ಬಿಗೇರಿ ಆಗ್ರಹಿಸಿದರು.

ನರೇಗಲ್‌ ಪಟ್ಟಣದಿಂದ ಜಕ್ಕಲಿ ಕಡೆಗೆ ಹೋಗುವ ಬಸ್‌ನಲ್ಲಿ ಬಾಗಿಲಲ್ಲಿ ಜೋತುಬಿದ್ದ ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು
ನರೇಗಲ್‌ ಪಟ್ಟಣದಿಂದ ಜಕ್ಕಲಿ ಕಡೆಗೆ ಹೋಗುವ ಬಸ್‌ನಲ್ಲಿ ಬಾಗಿಲಲ್ಲಿ ಜೋತುಬಿದ್ದ ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.