ADVERTISEMENT

ಇಎಸ್‌ಐ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇಲ್ಲ: ಸಚಿವ ಶಿವರಾಮ್‌ ಹೆಬ್ಬಾರ

ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 13:37 IST
Last Updated 26 ಆಗಸ್ಟ್ 2020, 13:37 IST
ಗದಗ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಶಿವರಾಮ್‌ ಹೆಬ್ಬಾರ ಮಾತನಾಡಿದರು.
ಗದಗ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಶಿವರಾಮ್‌ ಹೆಬ್ಬಾರ ಮಾತನಾಡಿದರು.   

ಗದಗ: ‘ರಾಜ್ಯದಲ್ಲಿರುವ ಇಎಸ್‌ಐ ಆಸ್ಪತ್ರೆಗಳಲ್ಲಿ ಔಷಧಿಗಳಿಗೆ ಕೊರತೆ ಇಲ್ಲ. ಕಷ್ಟಕಾಲದಲ್ಲಿ ಬಡವರಿಗೆ ನೆರವಾಗುವಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಿಗಳನ್ನು ಎಲ್ಲ ಇಎಸ್‌ಐ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ’ ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ್‌ ಹೆಬ್ಬಾರ ಹೇಳಿದರು.

ಗದಗ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಮಾತ್ರ ಚಿಕಿತ್ಸೆ ನೀಡದೇ; ಬಡತನದಲ್ಲಿರುವ ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡಬೇಕು. ಕಾರ್ಮಿಕ ಚಿಕಿತ್ಸಾಲಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಇಎಸ್‌ಐ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು 150 ವೈದ್ಯರನ್ನು ನೇಮಕ ಮಾಡಲಾಗಿದೆ. ಅದರಲ್ಲಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದರು.

ADVERTISEMENT

‘ಇಎಸ್‌ಐ ಹಾಗೂ ಗದುಗಿನ ಸಿಎಸ್‌ಐ ಆಸ್ಪತ್ರೆಗಳ ನಡುವೆ ಒಪ್ಪಂದಕ್ಕೆ ಪ್ರಸ್ತಾವನೆ ಇದ್ದು, ಕ್ರಮ ವಹಿಸಲಾಗುವುದು. ನಗರದ ಮಧ್ಯೆ ಸೂಕ್ತ ಜಾಗ ನೀಡಿದರೆ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಕೋವಿಡ್‌ನಿಂದಾಗಿ ಸರ್ಕಾರ ಸಂಕಷ್ಟದ ಪರಿಸ್ಥಿತಿಯಲ್ಲಿದ್ದರೂ ಕಾರ್ಮಿಕರು ಹಾಗೂ ರೈತರ ಹಿತದೃಷ್ಟಿಯಿಂದ ರಾಜ್ಯದ ಕಬ್ಬು ಬೆಳೆಗಾರರ ₹10,900 ಕೋಟಿ ಹಣದಲ್ಲಿ ₹10,736 ಕೋಟಿಯನ್ನು ರೈತರಿಗೆ ಪಾವತಿಸಲಾಗಿದೆ. ಬಾಕಿ ಹಣವನ್ನು ಶೀಘ್ರವೇ ಪಾವತಿಸಲಾಗುವುದು’ ಎಂದು ತಿಳಿಸಿದರು.

ಇಲ್ಲಿನ ಗಾಂಧಿ ನಗರದಲ್ಲಿ ನಿರ್ಮಾಣ ಆಗಿರುವ ಕಾರ್ಮಿಕ ಕಲ್ಯಾಣ ಮಂಡಳಿಯ ಸಮುದಾಯ ಭವನದಲ್ಲಿ ಜಿಲ್ಲಾ ಕೌಶಲಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ವಲಸೆ ಕಾರ್ಮಿಕರಿಗೆ ಅನುಕೂಲ ಆಗುವಂತೆ ಜಿಲ್ಲೆಯಲ್ಲಿ ವಸತಿಗೃಹ ನಿರ್ಮಿಸಲು ಸೂಕ್ತ ನಿವೇಶನ ಗುರುತಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗೆ ಅವರು ಸೂಚಿಸಿದರು.

ಕಾರ್ಮಿಕ ಇಲಾಖೆಯ ವಿವಿಧ ವಿಭಾಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಇಲಾಖೆಯನ್ನು ಇಂದಿನ ಕಾಲಕ್ಕೆ ತಕ್ಕಂತೆ ಸುಸಜ್ಜಿತವಾಗಿ ವ್ಯವಸ್ಥೆಗೊಳಿಸಲಾಗುವುದು ಎಂದು ಹೇಳಿದರು.

ಬೆಳಗಾವಿ ವಿಭಾಗದ ಕಾರ್ಮಿಕ ಇಲಾಖೆಯ ಉಪ ಆಯುಕ್ತ ವೆಂಕಟೇಶ್ ಸಿಂದಿಹಟ್ಟಿ ಮಾತನಾಡಿ, ‘ಕೋವಿಡ್-19 ಸಂದರ್ಭದಲ್ಲಿ ವಿವಿಧ ವಲಯದ ಕಾರ್ಮಿಕರಿಗೆ ಸರ್ಕಾರ ₹5 ಸಾವಿರ ಪರಿಹಾರಧನ ನೀಡುತ್ತಿದೆ. ಜಿಲ್ಲೆಯಲ್ಲಿ ಒಟ್ಟು 25,080 ಮಂದಿ ಕಟ್ಟಡ ಕಾರ್ಮಿಕರಿದ್ದು, 23,377 ಕಾರ್ಮಿಕರ ಖಾತೆಗೆ ಪರಿಹಾರ ಹಣ ಜಮೆ ಮಾಡಲಾಗಿದೆ. ಅಗಸ ಮತ್ತು ಕ್ಷೌರಿಕರು ₹5 ಸಾವಿರ ಪರಿಹಾರಧನ ಪಡೆಯಲಿಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 3,239 ಅರ್ಜಿಗಳು ಸಲ್ಲಿಕೆ ಆಗಿವೆ. ಅದರಲ್ಲಿ 2,528 ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗಿದೆ’ ಎಂದು ತಿಳಿಸಿದರು.

ಇದೇವೇಳೆ, ವಿವಿಧ ವಲಯದ ಕಾರ್ಮಿಕರಿಗೆ ಸಚಿವರು ಚೆಕ್ ವಿತರಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ, ಶಾಸಕ ರಾಮಣ್ಣ ಲಮಾಣಿ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಸಿಇಒ ಡಾ.ಆನಂದ್ ಕೆ., ಕಾರ್ಮಿಕ ಇಲಾಖೆಯ ಅಧಿಕಾರಿ ಸುಧಾ ಗರಗ ಇದ್ದರು

‘ಹಸಿವಿನಿಂದ ಬಳಲದಂತೆ ಕ್ರಮ’

ಕೋವಿಡ್-19 ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯು ಯಾವೊಬ್ಬ ಕಾರ್ಮಿಕರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಎಲ್ಲ ವಲಯಗಳ ಕಾರ್ಮಿಕರಿಗೆ ವಸತಿ, ಆಹಾರ ಕಿಟ್, ಆರೋಗ್ಯ ಕಿಟ್ ನೀಡುವ ಮೂಲಕ ರಾಜ್ಯದ 18 ಲಕ್ಷ ಜನರಿಗೆ ₹1,140 ಕೋಟಿ ಆರ್ಥಿಕ ನೆರವು ನೀಡಲಾಗಿದೆ ಎಂದು ಶಿವರಾಮ ಹೆಬ್ಬಾರ ಹೇಳಿದರು.

ರಾಜ್ಯ ಸರ್ಕಾರ ಲಾಕ್‌ಡೌನ್ ವೇಳೆ ಕಾರ್ಮಿಕರ ಹಿತಕ್ಕಾಗಿ ಇಡೀ ದೇಶದಲ್ಲೇ ಅತಿ ಹೆಚ್ಚು ಅನುದಾನ ವ್ಯಯಿಸಿದೆ. ರಾಜ್ಯದಲ್ಲಿ 27 ಲಕ್ಷ ಸಂಘಟಿತ ಹಾಗೂ ಅಸಂಘಟಿತ ವಲಯದ 85 ಲಕ್ಷ ಕಾರ್ಮಿಕರಿದ್ದಾರೆ. ಸರ್ಕಾರದ ತಾತ್ಕಾಲಿಕ ಪರಿಹಾರದಿಂದ ಕಾರ್ಮಿಕರ ಕಷ್ಟ ಪರಿಹಾರವಾಗದಿದ್ದರೂ, ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.