ಗದಗ: ಕಪ್ಪತ್ತಗುಡ್ಡ ವನ್ಯಜೀವಿಧಾಮದ ಗಡಿಯಿಂದ ಒಂದು ಕಿ.ಮೀ. ವ್ಯಾಪ್ತಿಯೊಳಗಿರುವ ಕ್ವಾರಿಗಳು ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಗುತ್ತಿಗೆದಾರರಿಗೆ ನೋಟಿಸ್ ನೀಡಿದೆ.
ಇಲಾಖೆಯು ಒಟ್ಟು 14 ಕ್ವಾರಿಗಳ ಗುತ್ತಿಗೆದಾರರಿಗೆ ನೋಟಿಸ್ ನೀಡಿದೆ. ಅವುಗಳಲ್ಲಿ ಒಂದು ಮಣ್ಣು, ಮತ್ತೆರಡು ಮರಳು ಕ್ವಾರಿಗಳಾಗಿದ್ದು, ಉಳಿದ 11 ಕಲ್ಲು ಕ್ವಾರಿಗಳಿವೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ನಿರ್ದೇಶನದಂತೆ ಗಣಿ ಇಲಾಖೆ ಕ್ವಾರಿಗಳನ್ನು ನಿಲ್ಲಿಸುವಂತೆ ನೋಟಿಸ್ ನೀಡಿದೆ.
‘ಆಗಸ್ಟ್ 31ರಂದು 14 ಕ್ವಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದೆವು. ಅದರಲ್ಲಿ ಏಳು ಮಂದಿ ಗುತ್ತಿಗೆದಾರರು ನೋಟಿಸ್‌ಗೆ ಪ್ರತಿಕ್ರಿಯಿಸಿದ್ದಾರೆ. ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಿಸುವುದಕ್ಕೂ ಮುನ್ನವೇ ಅನುಮತಿ ಪಡೆದು ಕ್ವಾರಿ ಆರಂಭಿಸಿದ್ದೇವೆ. ಅರಣ್ಯ ಮತ್ತು ಕಂದಾಯ ಇಲಾಖೆಯವರು ಎನ್‌ಒಸಿ ಕೊಟ್ಟಿದ್ದಾರೆ. ಪರಿಸರ ಇಲಾಖೆಯವರು ಅನುಮತಿ ನೀಡಿದ್ದಾರೆ. ಕ್ವಾರಿ ಆರಂಭಿಸಲು ದೊಡ್ಡ ಮೊತ್ತ ವಿನಿಯೋಗಿಸಿದ್ದೇವೆ. ಈಗ ದಿಢೀರ್ ಎಂದು ಕ್ವಾರಿ ಬಂದ್ ಮಾಡುವಂತೆ ಸೂಚಿಸಿದರೆ ಕಷ್ಟವಾಗುತ್ತದೆ. ಸ್ವಲ್ಪ ಸಮಯಾವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ’ ಎಂದು ಗದಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರಾಜೇಶ್ ತಿಳಿಸಿದರು.
‘ಗುತ್ತಿಗೆದಾರರು ಕೇಳುವಂತೆ 90 ದಿನಗಳ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಈಗಿರುವ ದಾಸ್ತಾನನ್ನು 15 ದಿನದೊಳಗೆ ಖಾಲಿ ಮಾಡಿಕೊಂಡು, ಕ್ವಾರಿ ಸ್ಥಗಿತಗೊಳಿಸುವಂತೆ ಮತ್ತೊಂದು ನೋಟಿಸ್ ನೀಡಲಾಗುವುದು. ಈ ವಿಚಾರವನ್ನು ಈಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.