
ಗದಗ: ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಕುಟುಂಬಗಳ ಜಾಬ್‌ಕಾರ್ಡ್‌ಗಳನ್ನು ಇ-ಕೆವೈಸಿ ಮೂಲಕ ದೃಢೀಕರಿಸಲಾಗುತ್ತಿದ್ದು, ಎಲ್ಲ ನರೇಗಾ ಕೂಲಿ ಕಾರ್ಮಿಕರು ಈ ಅಭಿಯಾನದಲ್ಲಿ ಭಾಗವಹಿಸಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಲ್ಲಯ್ಯ ಕೊರವನವರ ಮನವಿ ಮಾಡಿದರು.
ತಾಲ್ಲೂಕಿನ ಬಿಂಕದಕಟ್ಟಿ ಗ್ರಾಮ ಪಂಚಾಯಿತಿಗೆ ಬುಧವಾರ ಭೇಟಿ ನೀಡಿ ಇ-ಕೆವೈಸಿ ಪ್ರಗತಿ ಪರಿಶೀಲನೆ ಮಾಡಿ ಅವರು ಮಾತನಾಡಿದರು.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಆದೇಶ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೋಂದಾಯಿತ ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್ ಅನ್ನು ಇ-ಕೆವೈಸಿ ಮೂಲಕ ಮೌಲ್ಯೀಕರಿಸುತ್ತಿದೆ. ನರೇಗಾ ಯೋಜನೆಯಡಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ್ ಅಭಿಯಾನದ ಮಾದರಿಯಲ್ಲಿ ತುರ್ತಾಗಿ ಇ-ಕೆವೈಸಿ ಮೂಲಕ ಪೂರ್ಣಗೊಳಿಸಲು ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ ಎಂದರು.
ಮಹಾತ್ಮಗಾಂಧಿ ನರೇಗಾ ಯೋಜನೆಯ ಹೆಚ್ಚು ಪಾರದರ್ಶಕ ಅನುಷ್ಠಾನಕ್ಕೆ ಮತ್ತೊಂದು ಹೆಜ್ಜೆ ಇ-ಕೆವೈಸಿ ಆಗಿದ್ದು, ನರೇಗಾ ಕೂಲಿಕಾರರು, ಕಾಯಕ ಬಂಧುಗಳು ತಮ್ಮ ಜಾಬ್ ಕಾರ್ಡ್‌ಗಳಿಗೆ ಇ-ಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಮಾಹಿತಿಗಾಗಿ ಆಯಾ ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿ, ಡಿಇಒ, ಬಿಎಫ್, ಜಿಕೆಎಂ ಸೇರಿದಂತೆ ನರೇಗಾ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಘವೇಂದ್ರ ಹುಲ್ಲೋಜಿ, ಕಾಶೀಂ ದುಂದೂರ, ಬಿಎಫ್‌ಟಿ ದಾವಲಸಾಬ್ ಚಲ್ಲಮರದ, ಭೀಮಶಿ ಆರಟ್ಟಿ ಇದ್ದರು.

ತರಬೇತಿ ಪಡೆದ ಸಿಬ್ಬಂದಿ ಜಾಬ್ ಕಾರ್ಡ್‌ಗಳಿಗೆ ಇ-ಕೆವೈಸಿ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದು ಕೂಲಿಕಾರ್ಮಿಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಇ-ಕೆವೈಸಿ ಮಾಡಿಕೊಳ್ಳದ ಜಾಬ್‌ಕಾರ್ಡ್‌ಗಳು ಮುಂದಿನ ದಿನಗಳಲ್ಲಿ ನಿಷ್ಕ್ರಿಯವಾಗುತ್ತವೆಮಲ್ಲಯ್ಯ ಕೊರವನವರ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.