ADVERTISEMENT

ನರೇಗಾ ಯೋಜನೆ ಮರುಸ್ಥಾಪನೆವರೆಗೆ ಹೋರಾಟ: ಎಚ್.ಕೆ. ಪಾಟೀಲ ಕಿಡಿ

ವಿಬಿ ಜಿ ರಾಮ್‌ ಜಿ ಯೋಜನೆ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕಿಡಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 4:20 IST
Last Updated 16 ಜನವರಿ 2026, 4:20 IST
ಗದಗ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಸಚಿವ ಎಚ್‌.ಕೆ. ಪಾಟೀಲ ಮಾತನಾಡಿದರು 
ಗದಗ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಸಚಿವ ಎಚ್‌.ಕೆ. ಪಾಟೀಲ ಮಾತನಾಡಿದರು    

ಪ್ರಜಾವಾಣಿ ವಾರ್ತೆ

ಗದಗ: ‘ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆ ರದ್ದು ಮಾಡಿ, ಗುತ್ತಿಗೆದಾರರ ಅಡಿಯಾಳಾಗಿ ಕೆಲಸ ಮಾಡುವ ವಿಬಿ ಜಿ ರಾಮ್‌ ಜಿ ಯೋಜನೆ ಮೂಲಕ ಬಡವರ ಬದುಕಿಗೆ ಬಹುದೊಡ್ಡ ಹೊಡೆತ ನೀಡಲಿದೆ. ಕೇಂದ್ರ ಸರ್ಕಾರ ಕೂಡಲೇ ಈ ಯೋಜನೆ ಕೈಬಿಟ್ಟು ನರೇಗಾ ಯೋಜನೆ ಮರುಸ್ಥಾಪಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಆಗ್ರಹಿಸಿದರು.

‘ಕರ್ನಾಟಕ ಗ್ರಾಮ ಸ್ವರಾಜ್ಯ ಕಾನೂನಿನ ಮೂಲಕ ನರೇಗಾದಲ್ಲಿ ವಿಕೇಂದ್ರೀಕರಣಕ್ಕೆ ಒತ್ತು ನೀಡಲಾಗಿತ್ತು. ನರೇಗಾದಡಿ ಉದ್ಯೋಗ ಸಿಗದಿದ್ದರೆ ನಿರುದ್ಯೋಗ ಭತ್ಯೆ ಕೊಡಬೇಕಿತ್ತು. ವೃದ್ಧರಿಗೆ, ಮಹಿಳೆಯರಿಗೆ ಕೆಲಸದಲ್ಲೂ ರಿಯಾಯಿತಿ ಇತ್ತು. ಆದರೆ, ವಿಬಿ ಜಿ ರಾಮ್‌ ಜಿ ಅಡಿ ಯಾರಿಗೂ 100 ದಿನ ಕೆಲಸ ಕೊಡಲಾಗುವುದಿಲ್ಲ. ನಿರುದ್ಯೋಗ ಭತ್ಯೆ ಕೊಡಬೇಕು ಎಂಬ ನಿರ್ಣಯವನ್ನು ಈ ಯೋಜನೆ ಮೂಲಕ ಕಿತ್ತು ಎಸೆದಿದ್ದಾರೆ’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

ADVERTISEMENT

‘ಈ ಹೊಸ ವ್ಯವಸ್ಥೆಯಲ್ಲಿ ವಿಕಸಿಕ ಭಾರತ ಯೋಜನೆಯಡಿ ನಡೆಯುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ನರೇಗಾ ಕಾರ್ಮಿಕರನ್ನು ಬಳಸಿಕೊಳ್ಳುವ ಮೂಲಕ ಗುತ್ತಿಗೆದಾರರ ಕೈಗೆ ಶ್ರಮಿಕರನ್ನು ಒತ್ತೆ ಇಡಲಾಗುತ್ತಿದೆ. ಇದು ಕರ್ನಾಟಕ ಗ್ರಾಮ ಸ್ವರಾಜ್ಯ ಕಾನೂನಿನ ಅಡಿ ನಡೆದಿದ್ದ ವಿಕೇಂದ್ರೀಕರಣ ಪ್ರಕ್ರಿಯೆಗೆ ತಣ್ಣೀರು ಎರಚುವ ಕೆಲಸ ಮಾಡಿದೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮನರೇಗಾ ಯೋಜನೆ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೋನಿಯಾ ಗಾಂಧಿ ನೇತೃತ್ವದಲ್ಲಿ ನರೇಗಾ ಬಚಾವೋ ಅಭಿಯಾನ ನಡೆಸುತ್ತಿದ್ದು, ಕಾನೂನು ಹೋರಾಟ ಮತ್ತು ಜನತಾ ನ್ಯಾಯಾಲಯದಲ್ಲೂ ಈ ಬಗ್ಗೆ ಅಭಿಪ್ರಾಯ ಮಂಡಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ವಿಶೇಷ ಅಧಿವೇಶನ ನಡೆಯಲಿದ್ದು, ಜಂಟಿ ಅಧಿವೇಶನದ ಮೂಲಕ ಚರ್ಚೆ ನಡೆಸಿ ಕೇಂದ್ರಕ್ಕೆ ಹಕ್ಕೊತ್ತಾಯ ನಿರ್ಣಯ ಮಂಡಿಸಲಾಗುತ್ತಿದೆ. ನರೇಗಾ ಮರುಸ್ಥಾಪನೆ ಮಾಡುವವರೆಗೆ ಹೋರಾಟ ಮುಂದುವರೆಸುತ್ತೇವೆ’ ಎಂದು ಹೇಳಿದರು.

ಶಾಸಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್. ಪಾಟೀಲ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ, ಮಾಜಿ ಸಚಿವ ಬಿ.ಆರ್.ಯಾವಗಲ್, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ನೀಲಮ್ಮ ಬೋಳನವರ ಇದ್ದರು.

Cut-off box - ಎರಡನೇ ಬಾರಿ ಗಾಂಧೀಜಿ ಹತ್ಯೆ 1948ರಲ್ಲಿ ನಾಥೂರಾಮ್ ಗೋಡ್ಸೆ ಗಾಂಧೀಜಿಯವರನ್ನು ಹತ್ಯೆ ಮಾಡಿದರೆ; ಈಗ ನರೇಂದ್ರ ಮೋದಿಯವರು ಗಾಂಧೀಜಿಯವರ ಹೆಸರಿನ ನರೇಗಾ ಯೋಜನೆ ರದ್ದುಗೊಳಿಸಿ ವಿಬಿ ಜಿ ರಾಮ್ ‌ಜಿ ಜಾರಿ ಮಾಡುವ ಮೂಲಕ ಗಾಂಧೀಜಿಯವರನ್ನು ಎರಡನೇ ಬಾರಿ ಹತ್ಯೆ ಮಾಡಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ಆಕ್ರೋಶ ವ್ಯಕ್ತಪಡಿಸಿದರು.

ರಾಮ’ನ ಹೆಸರಲ್ಲಿ ರಾಜಕೀಯ

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ತೆಗೆದು ವಿಬಿ ಜಿ-ರಾಮ್-ಜಿ ಅಂತ ಇಟ್ಟಿದ್ದೇಕೆ? ಅದನ್ನು ವಿಬಿ ಗ್ರಾಮ್‌ ಜಿ ಅಂತ ಕರೆಯಬಹುದಿತ್ತು ಎಂದು ಸಚಿವ ಎಚ್‌.ಕೆ. ಪಾಟೀಲ ಹೇಳಿದರು. ಆದರೆ ಬಿಜೆಪಿ ರಾಮನ ಹೆಸರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಇದರಲ್ಲಿ ‘ಜಿ-ರಾಮ್’ ಎಂದರೆ ‘ಗೋಡ್ಸೆ ರಾಮ’ನೋ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಲಿ. ಮಹಾತ್ಮ ಗಾಂಧಿಯನ್ನು ಇಡೀ ವಿಶ್ವವೇ ಗೌರವಿಸುತ್ತಿರುವಾಗ ಬಿಜೆಪಿ ಸರ್ಕಾರ ಮಾತ್ರ ಅವರ ಹೆಸರನ್ನೇ ಕಿತ್ತೊಗೆಯುತ್ತಿದೆ. ಇಂತಹ ಕುಕೃತ್ಯಕ್ಕಿಳಿದ ಬಿಜೆಪಿಗೆ ಇಡೀ ದೇಶದಲ್ಲೇ ಜನ ಬರುವ ದಿನಗಳಲ್ಲಿ ಪಾಠ ಕಲಿಸುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.