ADVERTISEMENT

ಕೆ.ಜಿಗೆ ₹40 ದಾಟಿದ ಈರುಳ್ಳಿ ಬೆಲೆ

ಗ್ರಾಹಕರ ಕಣ್ಣಲ್ಲಿ ಕಣ್ಣೀರು; ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆ ಬರೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 9:45 IST
Last Updated 29 ಆಗಸ್ಟ್ 2019, 9:45 IST
ಗದಗ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಸುತ್ತಿರುವ ಗ್ರಾಹಕರು
ಗದಗ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಸುತ್ತಿರುವ ಗ್ರಾಹಕರು   

ಗದಗ: ಶ್ರಾವಣ ಮಾಸದ ನಂತರ ಈರುಳ್ಳಿ ಸೇರಿದಂತೆ ತರಕಾರಿ ಬೆಲೆ ಇಳಿಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ದಿನನಿತ್ಯದ ಅಡುಗೆಗೆ ಅಗತ್ಯ ಸರಕಾದ ಈರುಳ್ಳಿ ಬೆಲೆ ಎರಡು ವಾರಗಳಿಂದ ಗಗನಮುಖಿಯಾಗಿದೆ. ಸದ್ಯ ಈರುಳ್ಳಿ ಕೆ.ಜಿಗೆ ₹35ಕ್ಕೆ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ ದೊಡ್ಡ ಗಾತ್ರದ ಈರುಳ್ಳಿಗೆ ಕೆ.ಜಿಗೆ ₹40 ದಾಟಿದ್ದು, ಜನಸಾಮಾನ್ಯರ ಕಣ್ಣಲ್ಲಿ ಕಣ್ಣೀರು ತರಿಸಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಅತ್ಯಂತ ಕಳಪೆ ದರ್ಜೆ ಈರುಳ್ಳಿಯನ್ನೂ ಸಹ ಕೆ.ಜಿಗೆ ₹20ರಿಂದ ₹25ರ ತನಕ ಮಾರಾಟ ಮಾಡಲಾಗುತ್ತಿದೆ. ನಿಂಬೆ ಹಣ್ಣಿನ ಗಾತ್ರದ, ಸಿಪ್ಪೆ ಕೊಳೆತಿರುವ ಈರುಳ್ಳಿ ಗಡ್ಡೆಗಳನ್ನು ಸಹ ಕೆ.ಜಿಗೆ ₹20ರಂತೆ ಮಾರಲಾಗುತ್ತಿದೆ.

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ನೂರಾರು ಎಕರೆ ಪ್ರದೇಶದ ಈರುಳ್ಳಿ ಬೆಳೆ ಜಮೀನಿನಲ್ಲೇ ಕೊಳೆತು ಹೋಗಿದೆ. ಹೀಗಾಗಿ ಹೊಸ ಈರುಳ್ಳಿ ಮಾರುಕಟ್ಟೆಗೆ ಆವಕವಾಗುತ್ತಿಲ್ಲ. ಗದಗ ಮಾರುಕಟ್ಟೆಗೆ ಮುಖ್ಯವಾಗಿ ಪುಣೆ ಮಾರುಕಟ್ಟೆಯಿಂದ ಈರುಳ್ಳಿ ಆವಕವಾಗುತ್ತದೆ. ಸ್ಥಳೀಯ ಈರುಳ್ಳಿ ಗಡ್ಡೆಗಳು ಗಾತ್ರದಲ್ಲಿ ಸಣ್ಣವು. ಆದರೆ, ಪುಣೆ ಗಡ್ಡೆ ದೊಡ್ಡವು. ಬೇಗ ಕೊಳೆತು ಹೋಗುವುದಿಲ್ಲ. ಇಂತಹ ಒಣಗಿದ ಗಡ್ಡೆಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

ADVERTISEMENT

ಕಳೆದೊಂದು ತಿಂಗಳಿಂದ ಪುಣೆಯಿಂದ ಜಿಲ್ಲೆಗೆ ಈರುಳ್ಳಿ ಆವಕ ಗಣನೀಯವಾಗಿ ತಗ್ಗಿದೆ. ಹೀಗಾಗಿ ಬೆಲೆಯಲ್ಲಿ ದಿಢೀರನೆ ಏರಿಕೆಯಾಗಿದೆ. ಆಗಸ್ಟ್‌ ಆರಂಭದಲ್ಲಿ ಈರುಳ್ಳಿಗೆ ಕೆ.ಜಿಗೆ ಸರಾಸರಿ ₹15 ಇತ್ತು. ಅದಕ್ಕೆ ಹೋಲಿಸಿದರೆ ಈಗ ಬೆಲೆ ಮೂರು ಪಟ್ಟು ಹೆಚ್ಚಿದೆ. ಪುಣೆ ಹೊರತುಪಡಿಸಿದರೆ ಗದಗ ಮಾರುಕಟ್ಟೆಗೆ ವಿಜಯಪುರದಿಂದ ಈರುಳ್ಳಿ ಆವಕವಾಗುತ್ತದೆ. ಮಳೆ ಮತ್ತು ಪ್ರವಾಹದಿಂದ ಅಲ್ಲಿಂದಲೂ ಸರಕು ಬರುವುದು ಕಡಿಮೆಯಾಗಿದೆ. ಜಿಲ್ಲೆಯಲ್ಲೂ ಅತಿವೃಷ್ಟಿಯಿಂದ ನೂರಾರು ಎಕರೆ ಪ್ರದೇಶದ ಈರುಳ್ಳಿ ಬೆಳೆ ನಾಶವಾಗಿದೆ. ಹೀಗಾಗಿ ಸ್ಥಳೀಯವಾಗಿಯೂ ಆವಕ ತಗ್ಗಿದೆ.

ಜಿಲ್ಲೆಯಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಈರುಳ್ಳಿ ಹಂಗಾಮು ಪ್ರಾರಂಭವಾಗುತ್ತದೆ. ನೀರಾವರಿ ಆಧಾರಿತ ಜಮೀನಿನಲ್ಲಿ ಬೆಳೆದ ಈರುಳ್ಳಿ ಅದಕ್ಕೂ ಮೊದಲು ಮಾರುಕಟ್ಟೆಗೆ ಬರುತ್ತದೆ. ಆದರೆ, ಈ ಬಾರಿ ತಡವಾಗಿ ಬಿತ್ತನೆ ಆಗಿದ್ದರಿಂದ ಹೊಸ ಈರುಳ್ಳಿ ಮಾರುಕಟ್ಟೆಗೆ ಬರಲು ಇನ್ನೂ ಮೂರು ತಿಂಗಳು ತಡವಾಗುತ್ತದೆ. ಈರುಳ್ಳಿ ದಾಸ್ತಾನು ಕಡಿಮೆ ಇರುವುದರಿಂದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಸಗಟು ವ್ಯಾಪಾರಿಗಳು.

ಇಳಿಯದ ತರಕಾರಿ ಬೆಲೆ: ಪ್ರವಾಹ ಮತ್ತು ಮಳೆಹಾನಿಯಿಂದ ಸಾಕಷ್ಟು ಕಡೆ ತರಕಾರಿ ಬೆಳೆ ಜಮೀನಿನಲ್ಲೇ ಕೊಳೆತು ಹೋಗಿವೆ. ಇದರಿಂದ ಸ್ಥಳೀಯವಾಗಿ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣ ಗಣನೀಯವಾಗಿ ಕುಸಿದಿದೆ. ಹಿರೇಕಾಯಿ, ಬೆಂಡೆಕಾಯಿ, ಚವಳಿಕಾಯಿ, ಗಜ್ಜರಿ, ಎಲೆಕೋಸು, ಮೂಲಂಗಿ, ಹಸಿಮೆಣಸಿನಕಾಯಿ, ಬದನೆ, ಬೀನ್ಸ್‌ ಸೇರಿದಂತೆ ಬಹುತೇಕ ಎಲ್ಲ ತರಕಾರಿಗಳ ಬೆಲೆಯಲ್ಲಿ ಕಳೆದ ಒಂದು ವಾರದಿಂದ ತುಸು ಏರಿಕೆಯಾಗಿದೆ. ಸದ್ಯ ಎಲ್ಲ ತರಕಾರಿಗಳು ಕೆ.ಜಿಗೆ ಸರಾಸರಿ ₹60ರಿಂದ ₹70ರವರೆಗೆ ಮಾರಾಟವಾಗುತ್ತಿದೆ.

‘ಶ್ರಾವಣ ಮಾಸಕ್ಕೂ ಬೆಲೆ ಏರಿಕೆಗೂ ಸಂಬಂಧವೇ ಇಲ್ಲ, ಮಾರುಕಟ್ಟೆಗೆ ಮಾಲೇ ಬರುತ್ತಿಲ್ಲ’ ಎನ್ನುತ್ತಾರೆ ನಗರದ ತರಕಾರಿ ವ್ಯಾಪಾರಸ್ಥರು.

ಪಟ್ಟಿ
ತರಕಾರಿ ಧಾರಣೆ– ವಾರದ ಹಿಂದೆ ಈಗ (₹ ಗಳಲ್ಲಿ)
ಟೊಮೊಟೊ 20 - 10
ಈರುಳ್ಳಿ 20- 40
ಕ್ಯಾರೆಟ್‌ 70–60
ಮೆಣಸಿನಕಾಯಿ60- 60
ಬೆಂಡೆಕಾಯಿ 40- 40
ಬೀನ್ಸ್‌ 60 -40
ಕ್ಯಾಬೇಜ್‌ 40- 30
ಬದನೆಕಾಯಿ 40- 40
ಆಲೂಗಡ್ಡೆ 20- 20
ಹಿರೇಕಾಯಿ 40- 40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.