ADVERTISEMENT

ಸೇವಾ ತಂಡದ ಸದಸ್ಯರ ಬದ್ಧತೆ ದೇಶಕ್ಕೆ ಮಾದರಿ

ಅಂಗಾಂಗ ದಾನಿಗಳಿಗೆ ಅಭಿನಂದನೆ, ಕಿಡ್ನಿದಾನಿಗಳಿಗೆ ಸನ್ಮಾನ: ಸಚಿವ ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 7:58 IST
Last Updated 16 ಆಗಸ್ಟ್ 2025, 7:58 IST
ಸಚಿವ ಎಚ್‌.ಕೆ.ಪಾಟೀಲ
ಸಚಿವ ಎಚ್‌.ಕೆ.ಪಾಟೀಲ   

ಗದಗ: ‘ರಾಜಕೀಯ ಕಾರ್ಯಕರ್ತರು ರಾಜಕಾರಣದ ಜತೆಗೆ ಸೇವಾ ಮನೋಭಾವ ಬೆಳೆಸಿಕೊಂಡರೆ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯ’ ಎಂದು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಕೆ.ಎಚ್.ಪಾಟೀಲ ಸೇವಾ ತಂಡದಿಂದ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿ ನೋಂದಾಯಿಸಿದ 1,440 ದಾನಿಗಳಿಗಾಗಿ ಶುಕ್ರವಾರ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ರಾಜಕೀಯ ಕಾರ್ಯಕರ್ತರು ಕೇವಲ ರಾಜಕೀಯ ಮಾಡುವುದಷ್ಟೇ ನಮ್ಮ ಕೆಲಸ ಎನ್ನುವ ಮನಸ್ಥಿತಿ ದೇಶದ ಅನೇಕರಲ್ಲಿದೆ. ಆದರೆ, ಗದಗ ಮತಕ್ಷೇತ್ರದ ರಾಜಕೀಯ ಕಾರ್ಯಕರ್ತರು ಚುನಾವಣಾ ಸಮಯ ಹೊರತುಪಡಿಸಿ ಸೇವಾ ಮನೋಭಾವದಲ್ಲಿ ತೊಡಗಿ ದೇಶಕ್ಕೆ ಮಾದರಿಯಾಗಿದ್ದಾರೆ’ ಎಂದರು.

ADVERTISEMENT

‘ಪಕ್ಷ, ಜಾತಿ, ಧರ್ಮ ಮೀರಿ ಸೇವಾ ತಂಡ ಕೆಲಸ ಮಾಡುತ್ತಿದೆ. ಸೇವಾ ತಂಡಕ್ಕೆ ದೇವರ ದಯೆ, ಹಿರಿಯ ಆಶೀರ್ವಾದ ಇದೆ. ಕೊರೊನಾ ಸಮಯದಲ್ಲೂ ನಿರಂತರ ಸೇವೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ರೋಗಿಗಳಿಗೆ ಧೈರ್ಯ, ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗಿತ್ತು’ ಎಂದು ಹೇಳಿದರು.

‘2022ರಲ್ಲಿ ಜನರಸೇವೆಗಾಗಿ 22 ಕೆಲಸಗಳನ್ನು ಮಾಡಬೇಕು ಎಂಬ ಉದ್ದೇಶದೊಂದಿಗೆ ವೈದ್ಯಕೀಯ ತಪಾಸಣೆ, ಕಣ್ಣಿನ ಶಸ್ತ್ರಚಿಕಿತ್ಸೆ, ಕೈ-ಕಾಲು ಜೋಡಣೆ ಸೇರಿದಂತೆ ಹಲವು ಯೋಜನೆ ರೂಪಿಸಲಾಯಿತು. 2022-2023ರ ಅವಧಿಯಲ್ಲಿ ರಾಜಕೀಯೆತರವಾಗಿ 80 ಸಾವಿರ ಜನರನ್ನು ಸೇವಾ ತಂಡದ ಕಾರ್ಯಕರ್ತರು ಸಂಪರ್ಕಿಸಿದ್ದಾರೆ. ರಾಜಕೀಯ ಕಾರ್ಯಕರ್ತರು ಅರ್ಧ ರಾಜಕಾರಣ, ಅರ್ಧ ಸೇವೆ ಮಾಡಿದರೇ ಊರು ಶಾಂತಿಯ ನೆಲೆಬೀಡು ಆಗುತ್ತದೆ. ಇದೇ ಸೇವಾ ತಂಡದ ಮೂಲ ಉದ್ದೇಶವಾಗಿದೆ’ ಎಂದರು.

ಮಾಜಿ ಶಾಸಕ ಡಿ. ಆರ್ ಪಾಟೀಲ, ಕಾಂಗ್ರೆಸ್ ಮುಖಂಡ ಹಿಂಡಸಗೇರಿ, ಹಾವೇರಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಕೋಟ್ರೇಶಪ್ಪ ಬಣೆಗಣ್ಣಿ, ಡಾ. ಪ್ಯಾರಾಲಿ ನೂರಾನಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ಅಶೋಕ ಮಂದಾಲಿ, ಸಿದ್ದಲಿಂಗೇಶ ಪಾಟೀಲ, ಹಿರಿಯ ಮುಖಂಡರಾದ ವಾಸಣ್ಣ ಕುರಡಗಿ, ಬಸವರಾಜ ಕಡೆಮನಿ, ಪ್ರಭು ಬುರಬುರೆ, ಜಿ.ಎಸ್.ಗಡ್ಡದೇವರಮಠ, ವಿದ್ಯಾಧರ ದೊಡ್ಡಮನಿ, ಅನಿಲಕುಮಾರ ಸಿದ್ದಮ್ಮನಹಳ್ಳಿ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.