ಲಕ್ಷ್ಮೇಶ್ವರ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಯೋಜನೆಯ ತಾಲ್ಲೂಕು ಸಮಿತಿ ಸದಸ್ಯ ಶಿವರಾಜಗೌಡ ಪಾಟೀಲ ಹಾಗೂ ಸಾರಿಗೆ ಘಟಕದ ವ್ಯವಸ್ಥಾಪಕಿ ಸವಿತಾ ಆದಿ ನಡುವೆ ಮಾತಿನ ಚಕಮಕಿ ನಡೆಯಿತು.
‘ಲಕ್ಷ್ಮೇಶ್ವರದ ಸಾರಿಗೆ ಘಟಕದಲ್ಲಿ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ’ ಎಂದು ಶಿವರಾಜಗೌಡ ಆರೋಪಿಸಿದಾಗ, ‘ನಾನು ಯಾವುದೇ ಸಿಬ್ಬಂದಿಗೆ ಕಿರುಕುಳ ನೀಡುತ್ತಿಲ್ಲ. ಯಾರಿಂದಲೂ ಹಣ ಪಡೆಯದೆ ನಿಯತ್ತಿನಿಂದ ನೌಕರಿ ಮಾಡುತ್ತಿದ್ದೇನೆ’ ಎಂದು ವ್ಯವಸ್ಥಾಪಕಿ ಸವಿತಾ ಆದಿ ಏರುಧ್ವನಿಯಲ್ಲಿ ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ.ಅಸೂಟಿ ಅವರು, ಸಾರಿಗೆ ಘಟಕದ ವ್ಯವಸ್ಥಾಪಕಿ ಸವಿತಾ ಅವರಿಗೆ ನೋಟಿಸ್ ನೀಡುವಂತೆ ಸಾರಿಗೆ ಇಲಾಖೆ ನಿಯಂತ್ರಣಾಧಿಕಾರಿ ಡಿ.ದೇವರಾಜ ಅವರಿಗೆ ಸೂಚಿಸಿದರು.
ನಂತರ ನಡೆದ ಚರ್ಚೆಯಲ್ಲಿ ಕಳೆದ 11 ತಿಂಗಳಿಂದ ಅನ್ನಭಾಗ್ಯ ಯೋಜನೆ ಹಣ ಜಮೆಯಾಗಿಲ್ಲ’ ಎಂದು ಶಿಗ್ಲಿ ನಿವಾಸಿ ಜಗದೀಶ ನವಲೆ ದೂರಿದರು.
ಬಿ.ಬಿ.ಅಸೂಟಿ ಮಾತನಾಡಿ ‘ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಶೇ.98.02ರಷ್ಟು ಅರ್ಹರಿಗೆ ತಲುಪಿವೆ. ಜಿಲ್ಲೆಯ ಏಳೂ ತಾಲ್ಲೂಕಿನ ಪಂಚ ಗ್ಯಾರಂಟಿಗಳ ಅಧ್ಯಕ್ಷರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಯೋಜನೆಯಿಂದ ವಂಚಿತರಾದವರನ್ನು ಭೇಟಿ ಮಾಡಿ ಅವರಿಗೂ ಯೋಜನೆ ತಲುಪಿಸುವ ಕೆಲಸ ನಡೆದಿದೆ’ ಎಂದು ತಿಳಿಸಿದರು.
ಅನ್ನಭಾಗ್ಯದ ಅಕ್ಕಿ ಕಾಳ ಸಂತೆಯಲ್ಲಿ ಎಗ್ಗಿಲ್ಲದೆ ಮಾರಾಟ ಆಗುತ್ತಿದೆ. ಈ ಕುರಿತು ಎಷ್ಟು ಪ್ರಕರಣ ದಾಖಲಿಸಿಕೊಂಡಿದ್ದೀರಿ ಎಂದು ಅಧಿಕಾರಿಯನ್ನು ಪ್ರಶ್ನಿಸಿದ ಅವರು ಅಕ್ಕಿ ಮಾರಾಟ ಮಾಡುವ ಪಡಿತರ ಕಾರ್ಡ್‍ಗಳನ್ನು ರದ್ದುಪಡಿಸಿ. ಇನ್ನು ಕೆಲ ಪಡಿತರ ಅಂಗಡಿಕಾರರೂ ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ ಮಾಡುವ ಬಗ್ಗೆ ಗುಮಾನಿ ಇದ್ದು ಈ ಕುರಿತು ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿ, ‘ಐದು ಯೋಜನೆಗಳು ಶೇ 98ರಷ್ಟು ಜನರಿಗೆ ತಲುಪುವಂತೆ ನಮ್ಮ ಸಮಿತಿ ಸದಸ್ಯರು ಮತ್ತು ಕೆಡಿಪಿ ಸದಸ್ಯರು ಮಾಡಿದ್ದೇವೆ. ಇನ್ನೂ ಯೋಜನೆಗಳಿಂದ ವಂಚಿತರಾದವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಪರಿಹರಿಸಿ ಅವರಿಗೂ ಯೋಜನೆ ಲಾಭ ಮುಟ್ಟಿಸುತ್ತೇವೆ’ ಎಂದು ತಿಳಿಸಿದರು.
‘ಲಕ್ಷ್ಮೇಶ್ವರದ ಬಸ್ ನಿಲ್ದಾಣದಲ್ಲಿ ಶೌಚಾಲಯದ ವ್ಯವಸ್ಥೆ ಸರಿಯಿಲ್ಲ. ಶಾಲಾ ಕಾಲೇಜು ಮಕ್ಕಳಿಗೆ ತೊಂದರೆ ಆಗದಂತೆ ಬಸ್ ಓಡಿಸಲು ಕ್ರಮಕೈಗೊಳ್ಳಬೇಕು’ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ‘ಪಂಚ ಗ್ಯಾರಂಟಿ ಯೋಜನೆಗಳ ಐದೂ ಇಲಾಖೆಗಳ ಅಧಿಕಾರಿಗಳು ಮುಂದಿನ ದಿನಗಳನ್ನು ನಡೆಯುವ ಸಮಿತಿ ಸಭೆಯಲ್ಲಿ ಪ್ರಗತಿ ವರದಿ ಮಂಡಿಸಬೇಕು’ ಎಂದರು.
ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ದೀಪಕ ಲಮಾಣಿ, ಸದಸ್ಯರಾದ ರಾಮಣ್ಣ ಲಮಾಣಿ, ಗೀತಾ ಬೀರಣ್ಣವರ, ಕಾರ್ತಿಕ ದೊಡ್ಡಮನಿ, ಪ್ರಕಾಶ ಹುಲಕೋಟಿ, ವಿಜಯ ಹಳ್ಳಿ, ಲಕ್ಷ್ಮೇಶ್ವರ ಪುರಸಭೆ ಅಶ್ರಯ ಸಮಿತಿ ಸದಸ್ಯ ತಿಪ್ಪಣ್ಣ ಸಂಶಿ, ವಿಜಯಕುಮಾರ ಹಳ್ಳಿ, ಸುಶೀಲವ್ವ ಬಡಿಗೇರ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.