
ಗದಗ: ‘ಪಂಚಾಯತ್ ಸಂಸ್ಥೆಗಳು ಸಂವಿಧಾನಬದ್ಧ ಸ್ಥಾನಮಾನ ಹೊಂದಿದ್ದರೂ ಪಾರದರ್ಶಕತೆ ಮತ್ತು ಪರಿಣಾಮಕಾರಿ ಆಡಳಿತದ ಸವಾಲುಗಳು ಇನ್ನೂ ಮುಂದುವರಿದಿವೆ’ ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ ಹೇಳಿದರು.
ಅಖಿಲ ಭಾರತ ಪಂಚಾಯತ್ ಪರಿಷತ್ ವತಿಯಿಂದ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಹಾಗೂ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 18ನೇ ರಾಷ್ಟ್ರೀಯ ಪಂಚಾಯತ್ ಪರಿಷತ್ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ಪಂಚಾಯತ್ ಆಡಳಿತದಲ್ಲಿ ಅಧಿಕಾರವು ಜನರಿಂದಲೇ, ಜನರ ಹಿತಕ್ಕಾಗಿ ಕಾರ್ಯನಿರ್ವಹಿಸುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿ, ‘ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು, ಅನುಷ್ಠಾನಗೊಳಿಸುವುದು ಹಾಗೂ ಮೇಲ್ವಿಚಾರಣೆ ಮಾಡುವ ನೈಜ ಅಧಿಕಾರ ತಳಮಟ್ಟದ ಸಂಸ್ಥೆಗಳ ಕೈಯಲ್ಲಿರಬೇಕು ಎಂಬುದು ಪ್ರಜಾಸತ್ತಾತ್ಮಕ ಆಡಳಿತದ ಮೂಲ ತತ್ವವಾಗಿದೆ’ ಎಂದು ಹೇಳಿದರು.
‘ವಿಕೇಂದ್ರೀಕರಣವು ಪ್ರಜಾಪ್ರಭುತ್ವವನ್ನು ಬಲಪಡಿಸುವುದರೊಂದಿಗೆ ಹೊಣೆಗಾರಿಕೆ ಮತ್ತು ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ಭಾರತದಲ್ಲಿ ವಿಕೇಂದ್ರೀಕರಣದ ಹೋರಾಟವು ಜನಸಾಮಾನ್ಯರ ನೇರ ಭಾಗವಹಿಸುವಿಕೆಯ ಬೇಡಿಕೆಯಿಂದಲೇ ದೊರಕಿದೆ’ ಎಂದರು.
ಅಖಿಲ ಭಾರತ ಪಂಚಾಯತ್ ಪರಿಷತ್‌ನ ಕಾರ್ಯಾಧ್ಯಕ್ಷ ಡಾ. ಅಶೋಕ್ ಚೌಹಾಣ್ ಮಾತನಾಡಿ, ‘ಪಂಚಾಯತ್ ಸಂಸ್ಥೆಗಳು ಗ್ರಾಮೀಣ ಆಡಳಿತದ ಕೇಂದ್ರೀಯ ಕಂಬಗಳಾಗಿವೆ. ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಪಂಚಾಯತ್ ವ್ಯವಸ್ಥೆ ಸೂಕ್ತ ವೇದಿಕೆಯಾಗಿದೆ’ ಎಂದು ಹೇಳಿದರು.
‘ಪಂಚಾಯತ್‌ಗಳ ಪರಿಣಾಮಕಾರಿ ಕಾರ್ಯಾಚರಣೆಗೆ ಸಂಪನ್ಮೂಲ, ಸಾಮರ್ಥ್ಯವರ್ಧನೆ ಮತ್ತು ಸ್ಪಷ್ಟ ಹೊಣೆಗಾರಿಕೆ ಚೌಕಟ್ಟು ಅಗತ್ಯವಿದೆ’ ಎಂದರು.
ಸಮ್ಮೇಳನದ ಚರ್ಚೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಧೀರಜ್ ಕುನ್ಹಾ, ಜಯಂತ್ ಪಟೇಲ್, ಗವೀಂದ್ರ ಸಿಂಗ್, ಜಲೀಲ್, ಧ್ಯಾನಪಾಲ್ ಸಿಂಗ್, ಪ್ರಮೋದ್ ಜೈನ್, ರಾಹುಲ್ ಚೌಧರಿ ಹಾಗೂ ಮದನ್ ಮೋಹನ್ ಗುಪ್ತಾ ಸಲಹೆಗಳನ್ನು ಹಂಚಿಕೊಂಡರು.
ಸಮಾರೋಪ ಸಮಾರಂಭದಲ್ಲಿ ಪ್ರಮೋದ್ ಹೆಗಡೆ, ವಿ.ಎಸ್.ಪಾಟೀಲ, ಸತೀಶ್ ಕೆ.ಎಸ್., ಕೆ.ನವೀನ್, ಮಮತಾ ಎಂ., ನೀಲಕಂಠಪ್ಪ ಎಂ. ಭಾಗವಹಿಸಿದ್ದರು.
‘ಸಮ್ಮೇಳನದಲ್ಲಿ ಮಂಡಿಸಲಾದ ಎಲ್ಲಾ ಉಪನ್ಯಾಸಗಳು ಮತ್ತು ಅಂಗೀಕರಿಸಲಾದ ನಿರ್ಣಯಗಳು 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳ ಆಶಯವನ್ನು ಬಲಪಡಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮಾರ್ಗದರ್ಶಿಯಾಗಲಿವೆ’ ಎಂದು ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಕಾರ್ಯಕರ್ತ ಅಧ್ಯಕ್ಷ ವಿ.ವೈ. ಘೋರ್ಪಡೆ ಹೇಳಿದರು. ‘ಸಮ್ಮೇಳನದ ನಿರ್ಣಯಗಳನ್ನು ಸಮಗ್ರವಾಗಿ ಸಂಗ್ರಹಿಸಿ ವಿಶ್ಲೇಷಿಸಿ ವಿಕೇಂದ್ರೀಕರಣ ಮತ್ತು ತಳಮಟ್ಟದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಾಯೋಗಿಕ ಚೌಕಟ್ಟು ರೂಪಿಸಲಾಗುವುದು’ ಎಂದು ತಿಳಿಸಿದರು.
ವಿಕೇಂದ್ರೀಕರಣದ ಆದರ್ಶ ಮತ್ತು ಅದರ ಅನುಷ್ಟಾನದ ನಡುವೆ ಇನ್ನೂ ಅಂತರವಿದೆ. ತಳಮಟ್ಟದ ಸಂಸ್ಥೆಗಳನ್ನು ಸಬಲಗೊಳಿಸುವುದರಿಂದ ಮಾತ್ರ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣ ಸಾಧ್ಯ –ಪ್ರೊ. ಸುರೇಶ್ ವಿ.ನಾಡಗೌಡರ ಪ್ರಭಾರ ಕುಲಪತಿ ಗ್ರಾಮೀಣಾಭಿವೃದ್ಧಿ ವಿವಿ
ಸ್ವಾತಂತ್ರ್ಯಾ ನಂತರ ರಾಜಕೀಯ ಸ್ವಾತಂತ್ರ್ಯ ದೊರೆತರೂ ಆಡಳಿತಾತ್ಮಕ ಮತ್ತು ಹಣಕಾಸು ಅಧಿಕಾರಗಳ ನೈಜ ವಿಕೇಂದ್ರೀಕರಣ ಇನ್ನೂ ಸವಾಲಾಗಿ ಉಳಿದಿದೆ. ನಿಜವಾದ ವಿಕೇಂದ್ರೀಕರಣಕ್ಕಾಗಿ ಅಧಿಕಾರ ಕಾರ್ಯ ಹಾಗೂ ಹಣಕಾಸಿನ ಸಂಪೂರ್ಣ ಹಸ್ತಾಂತರದ ಅಗತ್ಯವಿದೆ–ಡಾ. ಎ.ಅಣ್ಣಾಮಲೈ ನಿರ್ದೇಶಕ ರಾಷ್ಟ್ರೀಯ ಗಾಂಧಿ ಮ್ಯೂಸಿಯಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.