ADVERTISEMENT

ಕಾಂಗ್ರೆಸ್ ನಿಷ್ಕ್ರಿಯ ಆಡಳಿತಕ್ಕೆ ಬೇಸತ್ತ ಜನ: ಸಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 15:37 IST
Last Updated 26 ಏಪ್ರಿಲ್ 2024, 15:37 IST
ಸಿ.ಸಿ.ಪಾಟೀಲ
ಸಿ.ಸಿ.ಪಾಟೀಲ   

ನರಗುಂದ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ರಹಿತ ನಿಷ್ಕ್ರಿಯ ಆಡಳಿತದಿಂದ ರಾಜ್ಯದ ಮತದಾರರು, ಸ್ವತಃ ಕಾಂಗ್ರೆಸ್ ನಾಯಕರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಮತದಾರರು ಮತ್ತೇ ಬಿಜೆಪಿ ಆಡಳಿತ ಬಯಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಗೆಲುವು ನಿಶ್ಚಿತ’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಗೆ ಹೇಳಿಕೊಳ್ಳಲು ಯಾವುದೇ ಯೋಜನೆಗಳಿಲ್ಲ. ಜಾತಿಯನ್ನಾಧರಿಸಿ ಮತ ಕೇಳುವ ಹಂತಕ್ಕೆ ತಲುಪಿದ್ದಾರೆ. ಆದರೆ ಮತದಾರ ಮೋದಿಯವರ ಅಭಿವೃದ್ಧಿ ನಂಬಿ ಮತ ಹಾಕುತ್ತಾರೆಂಬ ನಂಬಿಕೆ ಇದೆ’ ಎಂದರು.

‘ನರಗುಂದ ಮತಕ್ಷೇತ್ರದ ಕಾಂಗ್ರೆಸ್‌ನಲ್ಲಿ ಮೂರು ಗುಂಪುಗಳಿವೆ. ಪರಸ್ಪರರಲ್ಲಿ ಹೊಂದಾಣಿಕೆ ಇಲ್ಲ. ಇದು ಕಾಂಗ್ರೆಸ್ ಅಭ್ಯರ್ಥಿಗೆ ತಲೆನೋವಾಗಿ ಪರಿಣಮಿಸಿದೆ. ಗದ್ದಿಗೌಡರ ಸರಳತೆಯೇ ಅವರನ್ನು ಮತ್ತೆ ಲೋಕಸಭೆಗೆ ಕಳಿಸಲಿದೆ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ 25 ಸ್ಥಾನಗಳಲ್ಲಿ ವಿಜಯ ಸಾಧಿಸಲಿದೆ. ಇತ್ತೀಚಿನ ಸಮೀಕ್ಷೆ ಪ್ರಕಾರ ದೇಶದಲ್ಲಿ ಬಿಜೆಪಿ ಮೈತ್ರಿಕೂಟ 400 ಗಡಿ ದಾಟಲಿದೆ. ಈಗಾಗಲೇ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡ್ಡರ ಪರ ನರಗುಂದ, ಹೊಳೆಆಲೂರ ಮತ್ತು ಲಕ್ಕುಂಡಿ ಮಂಡಲಗಳಲ್ಲಿ ಒಂದು ಸುತ್ತಿನ ಚುನಾವಣಾ ಪ್ರಚಾರ ಪೂರ್ಣಗೊಳಿಸಲಾಗಿದೆ’ ಎಂದರು.

‘ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಬಹಿರಂಗ ಸಭೆ ನಡೆಸಲಾಗುತ್ತಿದೆ. ಪ್ರಧಾನಿ ಮೋದಿಯವರ ದಕ್ಷ, ಅಭಿವೃದ್ಧಿ ಪರ ಆಡಳಿತಕ್ಕೆ ದೇಶದೆಲ್ಲೆಡೆ ವ್ಯಾಪಕವಾದ ಬೆಂಬಲ ವ್ಯಕ್ತವಾಗುತ್ತಿದೆ’ ಎಂದು ಹೇಳಿದರು.

‘ಲೋಕಸಭಾ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಇಬ್ಭಾಗಗೊಂಡು ಪತನಗೊಳ್ಳಲಿದೆ. ಮಧ್ಯಂತರ ಚುನಾವಣೆ ಬಂದರೂ ಆಶ್ಚರ್ಯವಿಲ್ಲ. ಲೋಕಸಭಾ ಚುನಾವಣಾ ವೈಫಲ್ಯ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಸಂಗ ಬಂದರೂ ಬರಬಹುದು’ ಎಂದರು.

ಸುದ್ಧಿಗೋಷ್ಠಿಯಲ್ಲಿ ಬಿ.ಬಿ.ಐನಾಪೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.