ADVERTISEMENT

‘ಸೈನಿಕ, ರೈತರಿಂದ ಜನರ ಜೀವನ ಪಾವನ’

​ಪ್ರಜಾವಾಣಿ ವಾರ್ತೆ
Published 8 ಮೇ 2025, 14:34 IST
Last Updated 8 ಮೇ 2025, 14:34 IST
ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಚರಮೂರ್ತೇಶ್ವರ ಮಠದ ಶಿವಾನಂದ ದೇವರ ಪಟ್ಟಾಧಿಕಾರದ ಮಹೋತ್ಸವ ಅಂಗವಾಗಿ ನಡೆದ ಅಸಿ, ಕೃಷಿ, ಋಷಿ ಚಿಂತನ ಗೋಷ್ಠಿಯನ್ನು ಮಹೇಶಗೌಡ ಪಾಟೀಲ ಉದ್ಘಾಟಿಸಿದರು
ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಚರಮೂರ್ತೇಶ್ವರ ಮಠದ ಶಿವಾನಂದ ದೇವರ ಪಟ್ಟಾಧಿಕಾರದ ಮಹೋತ್ಸವ ಅಂಗವಾಗಿ ನಡೆದ ಅಸಿ, ಕೃಷಿ, ಋಷಿ ಚಿಂತನ ಗೋಷ್ಠಿಯನ್ನು ಮಹೇಶಗೌಡ ಪಾಟೀಲ ಉದ್ಘಾಟಿಸಿದರು   

ನರಗುಂದ: ‘ದೇಶದ ಜನರು ನಿರ್ಭಯದಿಂದ ಜೀವನ ನಡೆಸಲು ಸೈನಿಕರು ಹಾಗೂ ದೇಶದ ಬೆನ್ನೆಲುಬು ಆದ ರೈತರು ಪ್ರಮುಖ ಕಾರಣ ದೇಶದ ಸೈನಿಕರು ಮತ್ತು ರೈತರಿಂದ ಜನರ ಜೀವನ ಪಾವನವಾಗಿದೆ’ ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀ ಹೇಳಿದರು.

ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಬುಧವಾರ ರಾತ್ರಿ ಚರಮೂರ್ತೇಶ್ವರ ಮಠದ ಶಿವಾನಂದ ದೇವರ ಪಟ್ಟಾಧಿಕಾರದ ಮಹೋತ್ಸವದ ಅಂಗವಾಗಿ ನಡೆದ ಅಸಿ, ಕೃಷಿ, ಋಷಿ ಚಿಂತನ ಗೋಷ್ಠಿಯಲ್ಲಿ ಮಾತನಾಡಿದರು.

‘ನೆರೆ ರಾಷ್ಟ್ರಗಳು ದೇಶದ ಹಿತವನ್ನು ಬಯಸುತ್ತಿಲ್ಲ. ಇದರಿಂದ ಸೇನಾಪಡೆ ನಮ್ಮ ರಕ್ಷಣೆಗೆ ನಿಂತಿದೆ. ಅದೇರೀತಿ ರೈತರ ಜೀವನ ಪ್ರಕೃತಿ ವೈಪರೀತ್ಯದಿಂದ ಹಾಳಾಗುತ್ತಿದೆ. ಬೆಳೆಗಳಿಗೆ ಗೌರವ ಸಿಗುತ್ತಿಲ್ಲ. ಸರ್ಕಾರ, ಸಂಘ ಸಂಸ್ಥೆಗಳು ರೈತರ ಹಾಗೂ ಸೈನಿಕರ ಕುಟುಂಬಕ್ಕೆ ಆಸರೆಯಾಗಬೇಕು’ ಎಂದರು.

ADVERTISEMENT

ಗದಗನ ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ‘ರೈತರ ಕಷ್ಟಗಳಿಗೆ ಎಲ್ಲರೂ ಸ್ಪಂದಿಸಬೇಕಿದೆ. ರೈತರ ಕುಟುಂಬಕ್ಕೆ ಅಗತ್ಯವಿರುವ ಸೌಲಭ್ಯ ನೀಡಬೇಕು. ದೇಶದ ಸೈನಿಕರಿಗೆ ಎಲ್ಲರೂ ಗೌರವ ಸಲ್ಲಿಸಬೇಕು’ ಎಂದರು.

ಅವರಾದಿಯ ಫಲಹಾರೇಶ್ವರ ಸ್ವಾಮೀಜಿ ಮಾತನಾಡಿ, ಅಸಿ, ಕೃಷಿ, ಋಷಿಯ ಮಹತ್ವ ವಿವರಿಸಿ ದೇಶದ ಪ್ರಗತಿಯಲ್ಲಿ ಮೂರು ಜನರ ಪಾತ್ರ ಮುಖ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಹೇಶಗೌಡ ಪಾಟೀಲ ಮಾತನಾಡಿದರು. ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮೀಜಿ, ನಾಗನೂರ ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಶಿವಕುಮಾರ ಶಿವಾಚಾರ್ಯರು ಹಾಗೂ ಗ್ರಾಮದ ಮುಖಂಡರು ಇದ್ದರು.
ಆರ್.ಬಿ. ಚಿನಿವಾಲರ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.