ADVERTISEMENT

ಲಕ್ಕುಂಡಿ: ಪಿಕೆಪಿಎಸ್‌ನಿಂದ ಗೊಬ್ಬರ ಮಾರಾಟ ಶೀಘ್ರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 6:40 IST
Last Updated 8 ಅಕ್ಟೋಬರ್ 2025, 6:40 IST
ಲಕ್ಕುಂಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಯಿತು
ಲಕ್ಕುಂಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಯಿತು   

ಲಕ್ಕುಂಡಿ: ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ. 2ರಿಂದ ಮುಂದಿನ ವರ್ಷದಿಂದ ರಾಸಾಯನಿಕ, ಸಾವಯವ ಗೊಬ್ಬರವನ್ನು ಸಹ ಮಾರಾಟ ಮಾಡಲು ಯೋಜಿಸಿದ್ದು, ಸಂಘದ ಸದಸ್ಯರು, ರೈತರು ಪ್ರೋತ್ಸಾಹ ನೀಡಬೇಕು’ ಎಂದು ಸಂಘದ ಅಧ್ಯಕ್ಷ ರುದ್ರಪ್ಪ ಮುಸ್ಕಿನಭಾವಿ ಹೇಳಿದರು.

ಇಲ್ಲಿನ ಸಹಕಾರ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹಿಂಗಾರು ಹಂಗಾಮಿನ ಕಡಲೆ ಮತ್ತು ಜೋಳದ ಬೀಜ ವಿತರಿಸಿ ಮಾತನಾಡಿದರು.

‘ಸಂಘವು ರೈತೋಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದು, ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನನಲ್ಲಿ ಕೃಷಿ ಇಲಾಖೆಯ ಸಹಕಾರದೊಂದಿಗೆ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಬೆಂಬಲ ಬೆಲೆಯಡಿ ಕಡಲೆ ಖರೀದಿ ಕೇಂದ್ರವನ್ನೂ ತೆರೆಯಲಾಗುತ್ತಿದೆ’ ಎಂದರು.

ADVERTISEMENT

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಬಿ. ಬೆಣಕಲ್ಲ ಮಾತನಾಡಿ, ‘ಹಿಂಗಾರು ಹಂಗಾಮಿನಲ್ಲಿ ಕಡಲೆ ಮತ್ತು ಜೋಳದ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಜಮೀನಿನ ಪಹಣಿಪತ್ರ, ಆಧಾರ್‌ ಕಾರ್ಡ್‌, ಎಫ್ಐಡಿ ಸಂಖ್ಯೆ ಹಾಗೂ ಎಸ್‌ಸಿ–ಎಸ್‌ಟಿ ಸಮಾಜದ ರೈತರು ಈ ದಾಖಲೆಗಳ ಜತೆಗೆ ಜಾತಿ ಪ್ರಮಾಣಪತ್ರ ನೀಡಿ ಬೀಜ ಖರೀದಿಸಬೇಕು’ ಎಂದು ಹೇಳಿದರು.

‘ಸಾಮಾನ್ಯ ರೈತರಿಗೆ 20 ಕೆ.ಜಿ. ಕಡಲೆ ಬೀಜದ ಪ್ಯಾಕೆಟ್‌ಗೆ ₹1,160, ಜೋಳದ ಪ್ಯಾಕೆಟ್‌ಗೆ ₹120 ಹಾಗೂ ಎಸ್.ಸಿ–ಎಸ್.ಟಿ ಸಮಾಜದ ರೈತರಿಗೆ ಕಡಲೆಬೀಜ ₹910, ಜೋಳ ₹90 ಕ್ಕೆ ಕೊಡಲಾಗುತ್ತಿದೆ’ ಎಂದು ತಿಳಿಸಿದರು.

ಬೆಟಗೇರಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಮೇಶ ಜಟ್ಟಿ ಅವರು, ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸಿಗುವ ಬೀಜ, ಗೊಬ್ಬರ, ಕೃಷಿ ಪರಿಕರಗಳ ಕುರಿತು ವಿವರಿಸಿದರು.

ಸಂಘದ ನಿರ್ದೇಶಕರಾದ ಮಲ್ಲನಗೌಡ ಪಾಟೀಲ, ರಾಚಪ್ಪ ನಾಲ್ವಾಡದ ಕಲ್ಲಪ್ಪ ಬೆಟಗೇರಿ, ಗವಿಶಿದ್ದಪ್ಪ ರೇವಡಿ, ಶಂಕ್ರಪ್ಪ ಕುಂಬಾರ, ಅಂದಾನಯ್ಯ ಪತ್ರಿಮಠ, ಫಕ್ಕೀರಯ್ಯ ಪತ್ರಿಮಠ, ನೀಲವ್ವ ರವದಿ, ಅನ್ನಪೂರ್ಣವ್ವ ಹಡಗಲಿ, ಸಕ್ರಪ್ಪ ರಾಮತಾಳ ಇದ್ದರು. 

ರೈತರ ಅಭಿವೃದ್ದಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಕೃಷಿಕರು ಅವುಗಳ ಸದುಪಯೋಗ ಪಡೆಯಬೇಕು.
ರುದ್ರಪ್ಪ ಮುಸ್ಕಿನಭಾವಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.