ADVERTISEMENT

ಗ್ರಾಮೀಣ ಆರ್ಥಿಕತೆಗೆ ವೃದ್ಧಿಗೆ ಯೋಜನೆ: ಗದಗ ಡಿಸಿ

ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮದ (ಆರ್‌ಪಿಆರ್‌ಪಿ) ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 5:15 IST
Last Updated 2 ಡಿಸೆಂಬರ್ 2025, 5:15 IST
ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಆರ್‌ಪಿಆರ್‌ಪಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಮಾತನಾಡಿದರು
ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಆರ್‌ಪಿಆರ್‌ಪಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಮಾತನಾಡಿದರು   

ಗದಗ: ‘ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಕೇಂದ್ರ ಸರ್ಕಾರವು 2025-26ನೇ ಸಾಲಿನ ಸಾಮಾನ್ಯ ಬಜೆಟ್‌ನಲ್ಲಿ ಆರ್‌ಪಿಆರ್‌ಪಿ (ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ) ಯೋಜನೆ ಘೋಷಿಸಿದ್ದು, ಇದು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವಕಾಶ ಹೆಚ್ಚಿಸುವುದು, ಕೃಷಿ ಉತ್ಪಾದಕತೆ ವೃದ್ಧಿಸುವುದು ಹಾಗೂ ಸಮಗ್ರ ಅಭಿವೃದ್ಧಿಯ ಉದ್ದೇಶ ಹೊಂದಿದೆ’ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಆರ್‌ಪಿಆರ್‌ಪಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಈ ಯೋಜನೆಯಡಿ ಗ್ರಾಮೀಣ ಬದುಕಿನ ಗುಣಮಟ್ಟ ಹೆಚ್ಚಿಸುವ ಆದ್ಯತೆಯ ಯೋಜನೆಗಳನ್ನು ಜಾರಿಗೆ ತರಲಾಗುವುದು. ಉದ್ಯೋಗ ಸೃಷ್ಟಿ, ಉದ್ಯಮಾಭಿವೃದ್ಧಿ, ಕೌಶಲಾಭಿವೃದ್ಧಿ ಮತ್ತು ಮೂಲಸೌಕರ್ಯ ವೃದ್ಧಿ ಜತೆಗೆ ವಿಶೇಷವಾಗಿ ಗ್ರಾಮೀಣ ಮಹಿಳೆಯರು, ಯುವಕರು ಹಾಗೂ ಸಣ್ಣ ರೈತರ ಸಬಲೀಕರಣ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ’ ಎಂದರು.

ADVERTISEMENT

ಏಷ್ಯನ್‌ ಡೆವಲಪ್‌ಮೆಂಟ್ ಬ್ಯಾಂಕ್‌ನ ಅಧಿಕಾರಿ ರಾಘವೇಂದ್ರ ಮಾತನಾಡಿ, ‘ವಿವಿಧ ಇಲಾಖೆಗಳ ಅಧಿಕಾರಿಗಳು ನೀಡಿದ ಮಾಹಿತಿ ಗಮನಿಸಿ ಆರ್‌ಪಿಆರ್‌ಪಿ ಯೋಜನೆಯನ್ನು ಗದಗ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ. ಆರ್‌ಪಿಆರ್‌ಪಿ ಯೋಜನೆಗೆ ಸಂಬಂಧಿಸಿದಂತೆ ಡಿಸೆಂಬರ್ 7ರೊಳಗಾಗಿ ವರದಿ ನೀಡಬೇಕಿದೆ. ಅಲ್ಲದೇ 2026ರ ಮಾರ್ಚ್‌ ಅಂತ್ಯದವರೆಗೆ ರಾಜ್ಯದ ಎಲ್ಲ ಜಿಲ್ಲೆಗಳ ಸಮಗ್ರ ಅಧ್ಯಯನ ನಡೆಸಲಾಗುವುದು. ಈ ನಿಟ್ಟಿನಲ್ಲಿ ಇಲಾಖಾಧಿಕಾರಿಗಳು ಸೂಕ್ತ ಸಹಕಾರ ನೀಡಬೇಕು’ ಎಂದು ಕೋರಿದರು.

ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಲೀಡ್ ಬ್ಯಾಂಕ್, ಪ್ರವಾಸೋದ್ಯಮ, ಶಿಕ್ಷಣ , ಪಂಚಾಯತ್ ರಾಜ್, ಎನ್‌ಆರ್‌ಎಲ್‌ಎಂ, ಆಹಾರ, ಪಶುಸಂಗೋಪನಾ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಸಂಬಂಧಿಸಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಮತ್ತು ಯೋಜನೆಗಳ ರೂಪರೇಷೆ ಸಿದ್ಧಪಡಿಸುವ ಕುರಿತಂತೆ ತಮ್ಮದೇ ಅಭಿಪ್ರಾಯ ಹಾಗೂ ವರದಿಗಳನ್ನು ಸಭೆಯ ಗಮನಕ್ಕೆ ತಂದರು.

ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಅಧಿಕಾರಿಗಳಾದ ಅಲೋಕ್‌ ಕುಮಾರ್ ಹಾಗೂ ತನುಶ್ರೀ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಎ.ಎ.ಕಂಬಾಳಿಮಠ, ಎಂ.ವಿ.ಚಳಗೇರಿ, ಚೇತನಾ ಪಾಟೀಲ, ಡಾ.ಬಸವರಾಜ ಬೊಮ್ಮನಹಳ್ಳಿ, ಡಾ.ಎಸ್.ಎಸ್.ನೀಲಗುಂದ, ಆರ್.ಎಸ್.ಬುರಡಿ, ಜಿ.ಎಂ. ಮುಂದಿನಮನಿ, ಕೊಟ್ರೇಶ ವಿಭೂತಿ, ಪದ್ಮಾವತಿ ಜಿ., ಶರಣು ಗೋಗೇರಿ, ರುದ್ರಣ್ಣಗೌಡ ಜಿ.ಜೆ., ಡಾ. ಎಚ್.ಬಿ.ಹುಲಗಣ್ಣವರ, ಬಸವರಾಜ ಮಲ್ಲೂರ, ಡಾ.ಬಸವರಾಜ ಬಳ್ಳಾರಿ, ಡಾ.ನಂದಾ ಹಣಬರಟ್ಟಿ, ಬಸನಗೌಡ ಕೊಟೂರ, ರಾಜಾರಾಮ ಪವಾರ, ಎಂ.ಎಂ.ತುಂಬರಮಟ್ಟಿ, ಅಮಿತ ಬಿದರಿ, ಶ್ರೀಶೈಲ ಸೊಮನಕಟ್ಟಿ, ಶಿವಕುಮಾರ ಕುರಿಯುವರ, ಸಿದ್ಧಲಿಂಗ ಮಸನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.