ADVERTISEMENT

ರಾಜ್ಯ ಸರ್ಕಾರದಿಂದ ಜನರಿಗೆ ರಸ್ತೆ ಗುಂಡಿ ಭಾಗ್ಯ: ಪಿ.ರಾಜೀವ್‌ ವ್ಯಂಗ್ಯ

ಬಿಜೆಪಿ ಗದಗ ಜಿಲ್ಲಾ ಘಟಕದಿಂದ ಪ್ರತಿಭಟನೆ: ರಾಜ್ಯ ಸರ್ಕಾರದ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 2:12 IST
Last Updated 25 ಸೆಪ್ಟೆಂಬರ್ 2025, 2:12 IST
ರಸ್ತೆ ಗುಂಡಿಗಳ ಗಂಡಾಂತರ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ನೇತೃತ್ವದಲ್ಲಿ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಿದರು.
ರಸ್ತೆ ಗುಂಡಿಗಳ ಗಂಡಾಂತರ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ನೇತೃತ್ವದಲ್ಲಿ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಿದರು.   

ಗದಗ: ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ನಂತರ ಜನರಿಗೆ ಬೆಲೆ ಏರಿಕೆಯ ಗ್ಯಾರಂಟಿ ಕೊಟ್ಟಿದೆ. ಅದರ ಜತೆಗೆ ರಾಜ್ಯದ ಜನರಿಗೆ ಉಚಿತವಾಗಿ ಗುಂಡಿ ಭಾಗ್ಯ ಕರುಣಿಸಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ವ್ಯಂಗ್ಯವಾಡಿದರು.

ರಸ್ತೆ ಗುಂಡಿಗಳ ಗಂಡಾಂತರ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ನೇತೃತ್ವದಲ್ಲಿ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಿದರು.

ಈ ವೇಳೆ ರಸ್ತೆಯಲ್ಲೇ ಸಸಿ ನೆಟ್ಟು, ಕಾಯಿ ಒಡೆದು, ಕೆಸರು ತುಂಬಿದ ಗುಂಡಿಗೆ ಹೂಮಾಲೆ ಹಾಕಿ ಪೂಜೆ ಸಲ್ಲಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ADVERTISEMENT

‘ಬೆಲೆ ಏರಿಕೆ ಮಾಡಿ ಹಣ ಲೂಟಿ ಮಾಡುವ ಕಾಂಗ್ರೆಸ್ ಸರ್ಕಾರ ಆ ಹಣವನ್ನು ಯಾವುದಕ್ಕೆ ಬಳಸುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ರಾಜ್ಯದಾದ್ಯಂತ ಒಂದೇ ಒಂದು ರಸ್ತೆ ಉದ್ಘಾಟನೆ ಮಾಡಲು ಇವರಿಂದ ಸಾಧ್ಯವಾಗಿಲ್ಲ. ಬಹಳಷ್ಟು ಅಪಘಾತಗಳು ಆಗಲು ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಸ್ತೆ ಗುಂಡಿಗಳಿಂದ ಬಹಳಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರುಡಗಿ, ಮುಖಂಡರಾದ ಅನಿಲ್ ಅಬ್ಬಿಗೇರಿ, ಎಂ.ಎಸ್. ಕರೀಗೌಡ್ರ, ಸಂತೋಷ ಅಕ್ಕಿ, ಎಂ.ಎಂ.ಹಿರೇಮಠ, ಲಿಂಗರಾಜ ಪಾಟೀಲ, ಸುರೇಶ ಮರಳಪ್ಪನವರ, ಶಂಕರ ಕಾಕಿ, ಆರ್.ಕೆ.ಚವಾಣ್, ಬೂದಪ್ಪ ಹಳ್ಳಿ, ಶಶಿಧರ ದಿಂಡೂರು, ರಾಘವೇಂದ್ರ ಯಳವತ್ತಿ ಸೇರಿದಂತೆ ಹಲವರು ಇದ್ದರು.

ಅಭಿವೃದ್ಧಿಗಿಂತ ರಾಜಕಾರಣವೇ ಮುಖ್ಯ

‘ಜಾತಿ ಜನಗಣತಿ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಆದರೂ ರಾಜ್ಯ ಸರ್ಕಾರ ಆ ಕೆಲಸಕ್ಕೆ ಮುಂದಾಗಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಕಿಡಿಕಾರಿದರು. ‘ಜಾತಿ ಜನಗಣತಿ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ನ್ಯಾಯಾಲಯಕ್ಕೆ ವರದಿ ಕೊಟ್ಟಿದ್ದಾರೆ. ಹಾಗಾದರೆ ಜಾತಿ ಕಾಲಂ ಯಾಕೆ ಹಾಕಲಾಗಿದೆ? ಇಲ್ಲದಿರೋ ಜಾತಿಗಳನ್ನು ಯಾಕೆ ಸೃಷ್ಟಿ ಮಾಡಲಾಗಿದೆ? ಸಮಾಜ ಒಡೆಯುವಂತಹ ಕೆಲಸವನ್ನು ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಮಾಡುತ್ತ ಬಂದಿದೆ. ಇವರಿಗೆ ರಾಜ್ಯದ ಅಭಿವೃದ್ಧಿ ಹಾಗೂ ಭವಿಷ್ಯಕ್ಕಿಂತ ರಾಜಕಾರಣವೇ ಮುಖ್ಯವಾಗಿದೆ’ ಎಂದು ಆರೋಪ ಮಾಡಿದರು.

ಮೂಲಸೌಕರ್ಯ ಕೊರತೆ ಕಾರಣಕ್ಕೆ ಕೆಲವು ಕೈಗಾರಿಕೆಗಳು ರಾಜ್ಯವನ್ನು ತೊರೆದಿವೆ. ಜಗತ್ತಿನಲ್ಲಿ ಬೇರೆಲ್ಲೂ ಈ ಉದಾಹರಣೆ ಸಿಗುವುದಿಲ್ಲ. ಅಂತಹ ಅಪಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಬಂದಿದೆ
–ಪಿ.ರಾಜೀವ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.