ADVERTISEMENT

ಗೋಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿ ಶತಸಿದ್ಧ

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 16:24 IST
Last Updated 20 ನವೆಂಬರ್ 2020, 16:24 IST

ಗದಗ: ‘ರಾಜ್ಯದಲ್ಲೂ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಗೊಳಿಸುವುದು ಶತಸಿದ್ಧ’ ಎಂದು ಸಚಿವ ಪ್ರಭು ಚವ್ಹಾಣ ಹೇಳಿದರು.

ಗದಗ ನಗರದಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಹಲವು ರಾಜ್ಯಗಳು ಗೋಹತ್ಯೆ ನಿಷೇಧ ಅನುಷ್ಠಾನಕ್ಕೆ ತಂದಿದ್ದು ಕರ್ನಾಟಕದಲ್ಲಿಯೂ ಸಮರ್ಪಕವಾಗಿ ಕಾರ್ಯಗತಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಕಾಯ್ದೆ ಜಾರಿಯಲ್ಲಿರುವ ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯಗಳಿಗೆ ತೆರಳಿ ಅಧ್ಯಯನ ಮಾಡಿ, ಜಾರಿಗೆ ತರಲಾಗುವುದು’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಪ್ರಾಣಿ ಹಿಂಸೆ ತಡೆಯುವ ಕಾನೂನುಗಳನ್ನು ಬಿಗಿಗೊಳಿಸಲು ಕ್ರಮವಹಿಸಿ, ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ಪ್ರಾಣಿಕಲ್ಯಾಣ ಮಂಡಳಿಯನ್ನು ಸ್ಥಾಪನೆ ಮಾಡಲಾಗಿದೆ’ ಎಂದು ಹೇಳಿದರು.

‘ಅನಾರೋಗ್ಯಕ್ಕೀಡಾಗುವ ಜಾನುವಾರುಗಳ ಚಿಕಿತ್ಸೆಗೆ ತಕ್ಷಣ ವೈದ್ಯಕೀಯ ಸೇವೆ ಸಿಗುವಂತಾಗಲು ಪಶು ಸಂಜೀವಿನಿ ಆಂಬುಲೆನ್ಸ್‌ ಸೇವೆಯನ್ನು ರಾಜ್ಯದ 30 ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಶೀಘ್ರದಲ್ಲೇ ₹10 ಕೋಟಿ ವೆಚ್ಚದಲ್ಲಿ ಪಶುಪಾಲನಾ ಭವನ ನಿರ್ಮಾಣವಾಗಲಿದೆ. ಜೊತೆಗೆ ಕುರಿ ಮತ್ತು ಕೋಳಿ ಮಾಂಸದ ಸಂಚಾರ ಮಾರಾಟ ಮಳಿಗೆ ಆರಂಭಿಸಲಾಗುವುದು’ ಎಂದು ಹೇಳಿದರು.

‘ರಾಜ್ಯದಲ್ಲಿ ಸಂಪುಟ ಪುನರ್‌ ರಚನೆ ಇಲ್ಲ. ಬದಲಾಗಿ ವಿಸ್ತರಣೆ ಮಾತ್ರ. 30 ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ತಾಲ್ಲೂಕು ಪಂಚಾಯಿತಿ ಸದಸ್ಯನಿಂದ ಸಚಿವನಾಗುವ ಅವಕಾಶವನ್ನು ಪಕ್ಷ ನೀಡಿದೆ. ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧನಿದ್ದೇನೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಅಸಾಧ್ಯ. ಉಳಿದ ಅವಧಿಗಷ್ಟೇ ಅಲ್ಲ, ಮುಂದಿನ ಚುನಾವಣೆಯಲ್ಲೂ ಅವರೇ ಸಿಎಂ ಅಭ್ಯರ್ಥಿ ಆಗಲಿದ್ದಾರೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ, ಮಾಧವ ಗಣಾಚಾರಿ, ಇರ್ಷಾದ್‌ ಮಾನ್ವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.