ಗದಗ: ‘ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ ಡಿಜೆ ಬಳಸುವ ಬದಲು ಅದೇ ಹಣವನ್ನು ನಗರದ ಹಸಿರೀಕರಣಕ್ಕೆ ಬಳಸುವ ಉದ್ದೇಶದಿಂದ ಗಣೇಶ ವಿಸರ್ಜನೆ ಮಾರ್ಗದುದ್ದಕ್ಕೂ 4ರಿಂದ 5 ಸಾವಿರ ಸಸಿಗಳನ್ನು ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ’ ಎಂದು ಕೃತಪುರ ಸೇವಾ ಸಮಿತಿ ಅಧ್ಯಕ್ಷ ಜಗದೀಶ ಪೂಜಾರ ಹೇಳಿದರು.
‘ಸಾಮಾಜಿಕ ಕಾರ್ಯಚಟುವಟಿಕೆ ನಡೆಸುವ ಉದ್ದೇಶದಿಂದ ಸ್ಥಾಪನೆ ಮಾಡಿರುವ ಕೃತಪುರ ಸೇವಾ ಸಮಿತಿಯ ಸಂಘದಿಂದ ಈ ಬಾರಿ ಎರಡನೇ ವರ್ಷದ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಸಮಿತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಎರಡು ವರ್ಷಗಳಿಂದ ಆ.14ರ ಮಧ್ಯರಾತ್ರಿ 12ಕ್ಕೆ ಧ್ವಜಾರೋಹಣ ಮಾಡುತ್ತ ಬಂದಿದ್ದೇವೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಸಸಿ ವಿತರಿಸಿದ್ದೇವೆ’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸಮಿತಿಯ ಎಲ್ಲ ಸಭೆ-ಸಮಾರಂಭಗಳಲ್ಲಿ ಈಗಾಗಲೇ ಸಸಿ ವಿತರಣೆ ನಿರಂತರವಾಗಿದೆ. ಕಳೆದ ವರ್ಷ ಒಂದು ಸಾವಿರ ಸಸಿ ವಿತರಣೆ ಮಾಡಲಾಗಿತ್ತು. ಈ ವರ್ಷ ಎರಡು ಸಾವಿರ ಸಸಿ ವಿತರಣೆ ಗುರಿ ಇತ್ತು. ಆದರೆ, ಡಿಜೆ ಹಣವನ್ನೇ ಸಸಿಗಳಿಗೆ ನೀಡಿ, ಅವುಗಳನ್ನು ನೆಡುವಂತೆ ಮನವಿ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಸಹಕಾರದಿಂದ ಈ ಕಾರ್ಯ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
ಡಿಜೆ ಬಳಕೆಯಿಂದ ವಯಸ್ಸಾದವರಿಗೆ ತೊಂದರೆ ಉಂಟಾಗುತ್ತದೆ. ಡಿಜೆ ಬದಲಾಗಿ ಸ್ಥಳೀಯ ಕಲಾವಿದರು, ಸಾಂಪ್ರದಾಯಿಕ ವಾದ್ಯಗಳಿಗೆ ಆದ್ಯತೆ ನೀಡುವ ಮೂಲಕ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶ ಕೂಡ ಇದೆ ಎಂದರು.
ಕೊಪ್ಪಳ ಜಿಲ್ಲೆಯ ಕಿನ್ನಾಳ ತಾಲ್ಲೂಕಿನ ಯುವಕರು ಡಿಜೆಗೆ ಬಳಸುತ್ತಿದ್ದ ಹಣವನ್ನು ಹಳ್ಳಿಗಳ ರಸ್ತೆಯ ರಿಪೇರಿಗೆ ಬಳಸಿ ಮಾದರಿಯಾಗಿದ್ದಾರೆ. ಅವರ ಈ ಕಾರ್ಯ ನೋಡಿ ನಾವು ಸ್ಫೂರ್ತಿ ಹೊಂದಿ ಸಸಿಗಳನ್ನು ವಿತರಿಸಲು ನಿರ್ಧರಿಸಿದ್ದೇವೆ. ನಾವು ಮತ್ತೊಬ್ಬರ ಕಾರ್ಯಕ್ರಮಗಳಿಗೆ ಮಾದರಿಯಾಗಿ ಸಸಿ ನೆಡುವ ಕಾರ್ಯಕ್ರಮ ಮಾಡುತ್ತಿದ್ದು, ನಮ್ಮ ಕಾರ್ಯಕ್ರಮಗಳಿಂದ ಮತ್ತೊಬ್ಬರು ಪ್ರೇರಣೆಯಾಗಿ ಇಂತಹ ಕಾರ್ಯ ಮಾಡಲಿ ಎಂದು ಆಶಿಸುತ್ತೇವೆ ಎಂದು ಹೇಳಿದರು.
ಸುಮಂತ್ ಹಾರೋಗೇರಿ, ಶ್ರೀಧರ್ ಬಗಾಡೆ, ಕಾರ್ತಿಕ್ ಹಿರೇಮಠ, ಶಶಿ ಡಿಗ್ಗಾವಿ, ರವಿ ಘೋಡಕೆ, ಸಚಿನ್ ಮುಂಡವಾಡ, ಮನೋಜ್‌ಕುಮಾರ ಆಲೂರ, ಪುಟ್ಟರಾಜ ವೀರಶೆಟ್ಟರ್, ಸಿದ್ದಪ್ಪ ಚಿನ್ನಣ್ಣನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.