ADVERTISEMENT

ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಸಮಾವೇಶ: ಇಮ್ತಿಯಾಜ್‌ ಮಾನ್ವಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 16:10 IST
Last Updated 26 ಸೆಪ್ಟೆಂಬರ್ 2024, 16:10 IST

ಗದಗ: ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಗದಗ ಜಿಲ್ಲಾ ಶ್ರಮಜೀವಿಗಳ ವೇದಿಕೆ ವತಿಯಿಂದ ನಗರದ ವಿವಿಧ ಸ್ಲಂ ಪ್ರದೇಶದ ಕುಟುಂಬಗಳಿಗೆ ಕ್ರಯಪತ್ರ ವಿತರಣೆ, ಸ್ಲಂ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಗರದ ಶ್ರಮಿಜೀವಿಗಳಿಗೆ ಸನ್ಮಾನ ಮತ್ತು ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ವಿವಿಧ ಯೋಜನೆಗಳ ಪತ್ರಗಳ ವಿತರಣೆ ಸಮಾರಂಭ ಹಾಗೂ ಶ್ರಮಜೀವಿಗಳ ಬೃಹತ್ ಸಮಾವೇಶ ಸೆಪ್ಟೆಂಬರ್‌ 29ರಂದು ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಇಮ್ತಿಯಾಜ್ ಮಾನ್ವಿ ಹೆಳಿದರು.

‘ಭಾನುವಾರ ಬೆಳಿಗ್ಗೆ 11ಗಂಟೆಗೆ ನಗರದ ಡಾ.ಬಾಬು ಜಗಜೀವನರಾಮ್‌ ಕಲ್ಯಾಣ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸುವರು’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾರ್ಮಿಕರ ಭದ್ರತೆ, ಸಾಮಾಜಿಕ ಹಕ್ಕುಗಳಿಗಾಗಿ ಒತ್ತಾಯ ಮಾಡುತ್ತಿದ್ದೇವೆ. ರಾಜ್ಯದಾದ್ಯಂತ ಚಿಂದಿ ಆಯುವ ಹಲವು ಕುಟುಂಬಗಳಿವೆ. ಅವರಿಗೆ ವಿಮಾ ಸೌಲಭ್ಯ ಒದಗಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಜತೆಗೆ ಅವರ ಸ್ವಯಂ ಉದ್ಯೋಗಕ್ಕಾಗಿ ಸರ್ಕಾರ ಯೋಜನೆ ರೂಪಿಸಬೇಕು. ನೈಜ ಅಸಂಘಟಿಕ ಕುಟುಂಬಗಳನ್ನು ಗುರುತಿಸಿ ಸರ್ಕಾರದ ಸೌಲಭ್ಯ ಒದಗಿಸಬೇಕು. ಶೇ 90ರಷ್ಟು ಕಾರ್ಮಿಕರು ಕೊಳೆಗೇರಿಗಳಲ್ಲಿ ವಾಸವಾಗಿದ್ದಾರೆ. ಅಸಂಘಟಿತ ಕೆಲಸಗಾರರನ್ನು ಗುರುತಿಸಿ ಅವರಿಗೆ ಮೂಲಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಕ್ರಯಪತ್ರಗಳ ವಿತರಣೆಯನ್ನು ಮಾಡಲಿದ್ದಾರೆ. ಮಾಜಿ ಶಾಸಕ ಡಿ.ಆರ್.ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೆಂಕಟೇಶಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರವಿ ಗುಂಜೀಕರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ್ ಪೋತದಾರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಮಿತ್ ಬಿದರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸುವರು’ ಎಂದು ತಿಳಿಸಿದರು.

ಮೆಹಬೂಬಸಾಬ್ ಬಳ್ಳಾರಿ, ಮೆಹರುನ್ನಿಸಾ ಡಂಬಳ, ಇಬ್ರಾಹಿಂಸಾಬ ಮುಲ್ಲಾ, ಅಶೋಕ ಕುಸಬಿ, ಹವಾಲ್ದಾರ, ಪದ್ಮಾ ಮ್ಯಾಗೇರಿಮಠ, ಖಾಜಾಸಾಬ್, ಮಹಮ್ಮದರಫಿ ಗಡಾದ, ಸಲೀಂಅಹ್ಮದ್ ಡಾಲಾಯತ್, ಮೈಮುನ್ನಿಸಾ ಬೈರಕದಾರ, ಮುಕ್ತುಂಸಾಬ್ ಮುಲ್ಲಾನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.