ADVERTISEMENT

ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರ: ಸರ್ಕಾರಿ ವೈದ್ಯಾಧಿಕಾರಿ ಸಂಘ

ಮಾರ್ಚ್ 11ರಿಂದ ರಾಜ್ಯ ಸರ್ಕಾರಿ ವೈದ್ಯಾಧಿಕಾರಿ, ನೌಕರರ ಅನಿರ್ದಿಷ್ಟಾವಧಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 3:39 IST
Last Updated 1 ಮಾರ್ಚ್ 2026, 3:39 IST

ಗದಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಇಲಾಖೆಯ ಎಲ್ಲಾ ವೃಂದ ಸಂಘಗಳ ಸಹಯೋಗದಲ್ಲಿ ಮಾರ್ಚ್ 11ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು’ ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

‘ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಇಲಾಖೆಯಿಂದ ಔಷಧ ಸರಬರಾಜು, ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ 3 ವರ್ಷಕ್ಕೊಮ್ಮೆ ತಿದ್ದುಪಡಿ, ಇಲಾಖೆಯ ಎಲ್ಲ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲ ಕಾಲಕ್ಕೆ ಪ್ರಕಟಿಸುವುದು, ಎಲ್ಲಾ ವೃಂದದ ಯಾವುದೇ ಅಧಿಕಾರಿ-ನೌಕರರಿಗೆ ಮುಂಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಮುಷ್ಕರ ನಡೆಸಲಾಗುವುದು’ ಎಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಕೋರಲಾಗಿದೆ.  ಆದರೂ ಸರ್ಕಾರ ಸ್ಪಂದಿಸಿಲ್ಲ. ಆದಕಾರಣ ಮೊದಲ ಹಂತದಲ್ಲಿ ಮಾರ್ಚ್‌ 11ರಿಂದ 15ರ ವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳು, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲ ವೈದ್ಯರು, ನೌಕರರು ಕಪ್ಪುಪಟ್ಟಿ ಧರಿಸಿ ಹೊರರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸುವರು’ ಎಂದರು.

ADVERTISEMENT

‘ಈ ಅವಧಿಯೊಳಗೆ ಸರ್ಕಾರ ತನ್ನ ನಿಲುವು ಪ್ರಕಟಪಡಿಸದಿದ್ದಲ್ಲಿ ಮಾರ್ಚ್‌ 16ರಿಂದ ಎಲ್ಲ ಆಸ್ಪತ್ರೆಗಳಲ್ಲಿ ತುರ್ತುಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿಗೆ ಗೈರು ಹಾಜರಾಗುವ ಮೂಲಕ ಮುಷ್ಕರ ಮುಂದುವರಿಸಲಾಗುವುದು’ ಎಂದು ಹೇಳಿದರು.

ವೈದ್ಯಾಧಿಕಾರಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣು ಗಾಣಿಗೇರ, ಮಲ್ಲಿಕಾರ್ಜುನ ಕಲಾಕಂಬಿ, ಡಾ.ಅರುಣಪ್ರಸಾದ, ಅಜಯಕುಮಾರ ಕಲಾಲ, ಡಾ.ಪ್ರಲ್ಹಾದ್‌ ಹೊಸಮನಿ, ರವಿ ಗುಂಜೀಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.