ADVERTISEMENT

ಗದಗ: ಚುನಾವಣಾ ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 16:11 IST
Last Updated 29 ಏಪ್ರಿಲ್ 2024, 16:11 IST

ಗದಗ: ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲುಸ್ತುವಾರಿ ಸಮಿತಿಯಿಂದ (ಎಂಸಿಎಂಸಿ) ವಿವಿಧ ಮಾಧ್ಯಮಗಳಲ್ಲಿ  ನಿತ್ಯ ಪ್ರಸಾರವಾಗುವ ರಾಜಕೀಯ ಜಾಹೀರಾತುಗಳ ಬಗ್ಗೆ ನಿಗಾ ವಹಿಸಲಾಗಿದೆ.

ಆ ದಿಸೆಯಲ್ಲಿ ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎಂಸಿಎಂಸಿ ಸಮಿತಿಯ ಅನುಮತಿಯಿಲ್ಲದೆ ಚುನಾವಣಾ ರಾಜಕೀಯ ಜಾಹೀರಾತು ಪ್ರಕಟಿಸುವಂತಿಲ್ಲ. ಎಂಸಿಎಂಸಿ ಸಮಿತಿಯ ಪೂರ್ವಾನುಮತಿ ಪಡೆದು ರಾಜಕೀಯ ಜಾಹೀರಾತು ಪ್ರಕಟಿಸಬೇಕು.

ವಿದ್ಯುನ್ಮಾನ ಮಾಧ್ಯಮಗಳಾದ ಟಿ.ವಿ, ರೇಡಿಯೊ, ಮೊಬೈಲ್ ಸಂದೇಶ, ಧ್ವನಿ ಮುದ್ರಿತ ಸಂದೇಶಗಳು, ಬಲ್ಕ್ ಎಸ್‍ಎಂಎಸ್ ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಎಕ್ಸ್, ಇನ್‌ಸ್ಟ್ಯಾಗ್ರಾಂಗಳಲ್ಲಿ ಪ್ರಚಾರ ಕೈಗೊಳ್ಳುವವರು ಎಂಸಿಎಂಸಿ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.

ಮುದ್ರಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಮತದಾನದ ಪೂರ್ವ ದಿನವಾದ ಮೇ 6 ಮತ್ತು ಮತದಾನ ದಿನವಾದ ಮೇ 7 ರಂದು ಚುನಾವಣಾ ರಾಜಕೀಯ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಆ ನಿಟ್ಟಿನಲ್ಲಿ ಮೇ 4 ಅಥವಾ ಮೇ 5ರ ಮಧ್ಯಾಹ್ನ 3 ಗಂಟೆಯೊಳಗೆ ಅನುಮತಿ ಪಡೆಯಬೇಕು.

ADVERTISEMENT

ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ಚುನಾವಣಾ ರಾಜಕೀಯ ಜಾಹೀರಾತು ಪ್ರಸಾರ, ಪ್ರಕಟಣೆಗೆ ನಿಗದಿತ ನಮೂನೆಯಲ್ಲಿ ಎಂಸಿಎಂಸಿ ಸಮಿತಿಗೆ ಅರ್ಜಿ ಸಲ್ಲಿಸಿ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವೀಪ್ ವತಿಯಿಂದ ಮತದಾನ ಜಾಗೃತಿ ಜಾಥಾ ಇಂದು

ಗದಗ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ಸ್ವೀಪ್ ವತಿಯಿಂದ ಜಾಥಾ ಕಾರ್ಯಕ್ರಮವು ಮಂಗಳವಾರ ಸಂಜೆ 4ಕ್ಕೆ ನಡೆಯಲಿದೆ.

ಜಾಥಾ ಕಾರ್ಯಕ್ರಮವು ಗದಗ ಬೆಟಗೇರಿಯ ಅಂಬಾಭವಾನಿ ವೃತ್ತದಿಂದ ಕುರಟ್ಟಿಪೇಟೆ, ಬಸ್ ನಿಲ್ದಾಣ ಮಂಜುನಾಥ ನಗರ, ಹುಯಿಲಗೋಳ ರಸ್ತೆ ಮಾರ್ಗವಾಗಿ ತಾರಾಲಯದವರೆಗೆ ನಡೆಯಲಿದೆ.

ಈ ಜಾಥಾ ಕಾರ್ಯಕ್ರಮದಲ್ಲಿ ಬೈಕ್ ರ‍್ಯಾಲಿ, ನಾನಾ ಕಲಾ ತಂಡಗಳಿಂದ ಕಲಾ ಪ್ರದರ್ಶನ, ವಿದ್ಯಾರ್ಥಿಗಳ ವೇಷಭೂಷಣಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜೀಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.