ಗದಗ: ‘ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 11 ವರ್ಷಗಳಲ್ಲಿ ದೇಶದ ಅಭಿವೃದ್ಧಿಗಾಗಿ ಯಾವುದೇ ಹೊಸ ಕಾರ್ಯಕ್ರಮ ಮಾಡಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಯೋಜನೆಗಳಿಗೆ ಹೊಸ ಹೆಸರು ಕೊಟ್ಟು ದೇಶದ ಜನರನ್ನು ಮರುಳು ಮಾಡುತ್ತಿದ್ದಾರೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ದೂರಿದರು.
ನಗರದಲ್ಲಿ ಶನಿವಾರ ನಡೆದ ಯುವ ಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕೇಂದ್ರದಲ್ಲಿರುವುದು ಆರ್‌ಆರ್‌ಆರ್ (ರೀ-ನೇಮ್, ರೀ–ಪ್ಯಾಕೇಜ್, ರೀ–ಲಾಂಚ್) ಸರ್ಕಾರ. ನ್ಯಾಷನಲ್ ಇ-ಗೌವರ್ನೆನ್ಸ್ ಪ್ಲ್ಯಾನ್ ಹಿಂದೆಯೇ ಇತ್ತು; ಈಗ ಅದು ಡಿಜಿಟಲ್ ಇಂಡಿಯಾ ಆಗಿದೆ. ಆಮ್ ಆದ್ಮಿ ಬಿಮಾ ಯೋಜನೆ ಈಗ ಅಟಲ್ ಪಿಂಚಣಿಯಾಗಿದೆ, ನಿರ್ಮಲ್ ಭಾರತ ಈಗ ಸ್ವಚ್ಛ ಭಾರತವಾಗಿ ಮಾರ್ಪಟ್ಟಿದೆ. ಬಿಜೆಪಿ ತನ್ನದೆಂದು ಬಿಂಬಿಸಿಕೊಳ್ಳುವ ಎಲ್ಲ ಯೋಜನೆಗಳು ಯುಪಿಎ ಅವಧಿಯಲ್ಲಿಯೇ ಜಾರಿಯಲ್ಲಿದ್ದವು’ ಎಂದರು.
‘2014ಕ್ಕೂ ಮುಂಚೆ ದೇಶದ ಜನರೆಲ್ಲರೂ ಯಾವುದೇ ಸೌಕರ್ಯಗಳಿಲ್ಲದೇ ಗುಹೆಯಲ್ಲಿ ವಾಸ ಮಾಡುತ್ತಿದ್ದರು ಎಂಬಂತೆ ಬಿಂಬಿಸುತ್ತಾರೆ. ಮೋದಿ ಹೊಸದೇನನ್ನೂ ಮಾಡದಿದ್ದರೂ ಆರು ತಿಂಗಳಿಗೊಂದು ಹೊಸ ಸ್ಲೋಗನ್ ಘೋಷಿಸುತ್ತಾರೆ’ ಎಂದು ಲೇವಡಿ ಮಾಡಿದರು.
‘ಆತ್ಮನಿರ್ಭರ ಭಾರತ ಏನೆಂಬುದು ನನಗೆ ಈವರೆಗೆ ಗೊತ್ತಾಗಿಲ್ಲ. ದೇಶದಲ್ಲಿ ಒಂದಾದರೂ ಸ್ಮಾರ್ಟ್ ಸಿಟಿ ತೋರಿಸಿದರೆ ನಾನು ರಾಜೀನಾಮೆ ಕೊಡುವೆ’ ಎಂದು ಸವಾಲು ಹಾಕಿದರು.
‘ಕಳೆದ 11 ವರ್ಷಗಳಲ್ಲಿ ‘ದೇಶದ್ರೋಹಿ’ ಎಂಬ ಪದ ಪದೇಪದೇ ನಮ್ಮ ಕಿವಿಗೆ ಬೀಳುತ್ತದೆ. ಬಿಜೆಪಿ, ಆರ್‌ಎಸ್‌ಎಸ್‌ನ ಸಿದ್ಧಾಂತ ಹಾಗೂ ಅವರ ನಾಯಕರ ವಿರುದ್ಧ ಮಾತನಾಡಿದರೆ ದೇಹದ್ರೋಹಿ ಅನ್ನುತ್ತಾರೆ. ಸ್ವಾತಂತ್ರ್ಯ ಹೋರಾಟ, ಆನಂತರದಲ್ಲಿ ನಡೆದ ಯುದ್ಧ ಸನ್ನಿವೇಶಗಳು ಹಾಗೂ ದೇಶ ಕಟ್ಟುವ ವಿಚಾರದಲ್ಲಿ ಇವರ ಕೊಡುಗೆ ಶೂನ್ಯ. ಗೋಡ್ಸೆಯನ್ನು ದೇಶಭಕ್ತ ಅನ್ನುತ್ತಾರೆ; ಹಾಗಾದರೆ, ಗಾಂಧೀಜಿ ಯಾರು’ ಎಂದು ಪ್ರಶ್ನಿಸಿದರು.
ಬಿಜೆಪಿಗರಿಗೆ ಸಾವರ್ಕರ್ ಮೂಲ ಗುರು. ಅವರಿಗೆ ‘ವೀರ’ ಎಂಬ ಬಿರುದು ನೀಡಿದ್ದು ಯಾರು ಎಂಬ ಪ್ರಶ್ನೆಯನ್ನು ಸದನದಲ್ಲಿ ಕೇಳಿದ್ದಕ್ಕೆ ಬಿಜೆಪಿಗರು ನನ್ನ ಮೇಲೆ ಮುಗಿಬಿದ್ದರು. ದೇಶದ್ರೋಹಿ ಎಂದರು. ‘ವೀರ’ ಎಂಬುದು ಅವರೇ ಕೊಟ್ಟುಕೊಂಡ ಬಿರುದು ಎಂದರು.
‘ಅಂಡಮಾನ್‌ನ ಸೆಲ್ಯುಲರ್ ಜೈಲಿನಲ್ಲಿ 698 ಕೊಠಡಿಗಳಿವೆ. ಆ ಜೈಲು 33 ವರ್ಷಗಳ ಕಾಲ ನಡೆಯಿತು. ಆ ಅವಧಿಯಲ್ಲಿ ಒಟ್ಟು 80 ಸಾವಿರ ಮಂದಿ ಇದ್ದರು. ಅಷ್ಟು ಮಂದಿಯಲ್ಲಿ ಕ್ಷಮೆ ಕೋರಿ ಪತ್ರ ಬರೆದವರು ಮೂವರು. ಅದರಲ್ಲಿ ಸಾವರ್ಕರ್ ಕೂಡ ಒಬ್ಬರು. ಆರು ಬಾರಿ ಮಾಫಿ ಪತ್ರ ಬರೆದಿದ್ದರು. ಸತತ 18 ವರ್ಷಗಳ ಕಾಲ ಬ್ರಿಟಿಷ್ ಸರ್ಕಾರದಿಂದ ₹60 ಪಿಂಚಣಿ ತೆಗೆದುಕೊಂಡರು. ಇವುಗಳನ್ನು ಪ್ರಶ್ನೆ ಮಾಡಿದರೆ ದೇಶದ್ರೋಹಿ ಅನ್ನುತ್ತಾರೆ‘ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.