ADVERTISEMENT

ಮಹದಾಯಿ ಹೋರಾಟ: ಕಾಂಗ್ರೆಸ್‌ ‘ಉದ್ದೇಶ’ ಸ್ಪಷ್ಟಪಡಿಸಲಿ- ಪ್ರಲ್ಹಾದ್‌ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 7:31 IST
Last Updated 3 ಜನವರಿ 2023, 7:31 IST
ಪ್ರಲ್ಹಾದ್‌ ಜೋಶಿ
ಪ್ರಲ್ಹಾದ್‌ ಜೋಶಿ   

ಗದಗ: ‘ಗಾಂಧೀಜಿ ಹೆಸರು ಹೇಳಿಕೊಂಡು 55 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ದೇಶದಲ್ಲಿನ ಯಾವುದೇ ಸಮಸ್ಯೆ ಬಗೆಹರಿಸಲು ಆಗಲಿಲ್ಲ. ಈಗ ಯಾವ ಉದ್ದೇಶ ಇಟ್ಟುಕೊಂಡು ಕಾಂಗ್ರೆಸ್‌ ನಾಯಕರು ಮಹದಾಯಿ ಸಮಾವೇಶ ನಡೆಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದರು.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ನಮ್ಮ ಪಾಲು ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿಂದ ನಾವು ಕಾಲುವೆ ಕಟ್ಟಿದರೆ, ನೀರು ಹೋಗದಂತೆ ಗೋಡೆ ಕಟ್ಟಿದ್ದಕ್ಕೋ? ಒಂದು ಹನಿ ಕುಡಿಯುವ ನೀರು ಕೊಡುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿದ ಸೋನಿಯಾ ಗಾಂಧಿ ಹೇಳಿಕೆಗೋ? 2006ರಲ್ಲಿ ಕಾಂಗ್ರೆಸ್‌ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಕ್ಕೋ? ಮನಮೋಹನ್‌ ಸಿಂಗ್‌ ಸರ್ಕಾರ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಪಡಿಸಲಾರದೇ ಟ್ರಿಬುನಲ್‌ಗೆ ಕಳಿಸಿದ್ದಕ್ಕೋ? ಅಥವಾ ರೈತರ ಮೇಲೆ ಲಾಠಿಜಾರ್ಜ್‌ ಮಾಡಿಸಿದ್ದಕ್ಕೋ? ಇವಿಷ್ಟರಲ್ಲಿ ಹೋರಾಟ ಯಾವುದಕ್ಕಾಗಿ’ ಎಂದು ಲೇವಡಿ ಮಾಡಿದರು.

‘ಕಾಂಗ್ರೆಸ್‌ ಪಕ್ಷ ದೇಶ ಹಾಗೂ ರಾಜ್ಯದ ಹಿತ ಕಾಪಾಡುವಲ್ಲಿ ಸೋತಿದೆ. ಅಂತರರಾಷ್ಟ್ರೀಯ ಗಡಿ ವಿಷಯ ಬಂದಾಗ, 32 ಸಾವಿರ ಚ.ಕಿ.ಮೀ. ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ದೇಶಕ್ಕೆ ಸಿಗಬೇಕಿದ್ದ ಕಾಯಂ ಸ್ಥಾನದ ಅವಕಾಶವನ್ನು ತಪ್ಪಿಸಿದ ಕಾಂಗ್ರೆಸ್‌, ದೇಶವಿರೋಧಿ ಪಕ್ಷ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ದೇಶದ ಹಿತ ಕಡೆಗಣಿಸಿದ ಕಾಂಗ್ರೆಸ್‌ ಇವತ್ತು ಮಹದಾಯಿ ಹೋರಾಟ ಮಾಡುತ್ತಿದೆ. ಯಾರಿಗೂ ಕಾಣಿಸದ ಸಮಸ್ಯೆ ಎಚ್‌.ಕೆ.ಪಾಟೀಲ ಅವರಿಗೆ ಗೋಚರಿಸಿದೆ. ಅವರು ಪುಸ್ತಕ ಬರೆಸುವುದನ್ನು ಬಿಟ್ಟು ಬೇರೇನೂ ಕೆಲಸ ಮಾಡಲಿಲ್ಲ. ಮೋದಿ ಸರ್ಕಾರದ ಅವಧಿಯಲ್ಲಿ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸುತ್ತಿದ್ದೇವೆ. ಎಲ್ಲ ರಾಜ್ಯಗಳ ಅಭಿವೃದ್ಧಿಗೂ ಒತ್ತು ನೀಡಿದ್ದೇವೆ’ ಎಂದರು.

‘ನಂದಿನಿ ಮತ್ತು ಅಮುಲ್‌ ವಿಷಯದಲ್ಲಿ ಕಾಂಗ್ರೆಸ್‌ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಅಮೂಲ್‌ ಮಾರುಕಟ್ಟೆ ವಿಸ್ತಾರವಾಗಿದೆ. ಹಾಗಾಗಿ, ಅಲ್ಲಿನ ತಾಂತ್ರಿಕತೆ ಮತ್ತು ಮಾರುಕಟ್ಟೆ ತಂತ್ರಜ್ಞಾನವನ್ನು ನಂದಿನಿ ಕೂಡ ಅಳವಡಿಸಿಕೊಂಡರೆ ವಹಿವಾಟು ಇನ್ನಷ್ಟು ವಿಸ್ತರಿಸಿಕೊಳ್ಳಬಹುದು ಎಂದು ಅಮಿತ್‌ ಶಾ ಸಲಹೆ ನೀಡಿದ್ದಾರೆಯೇ ಹೊರತು; ಎರಡನ್ನೂ ವಿಲೀನಗೊಳಿಸುವುದಾಗಿ ಹೇಳಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಕಾಂಗ್ರೆಸ್‌ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬೆಂಕಿ ಹಚ್ಚುವುದೇ ಕೆಲಸ. ಅವರ ನೀತಿಗಳು ಜನರಿಗೆ ಅರ್ಥವಾಗಿವೆ’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.