ADVERTISEMENT

ಗೋಗೇರಿ: ಲಾಭದಾಯಕ ವೀಳ್ಯದೆಲೆ ಕೃಷಿ

ಸಮಗ್ರ ಕೃಷಿ: ಯಶಸ್ಸು ಕಂಡ ಭೋಸಲೆ ಕುಟುಂಬ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:02 IST
Last Updated 15 ಆಗಸ್ಟ್ 2025, 5:02 IST
ಗಜೇಂದ್ರಗಡ ಸಮೀಪದ ಗೋಗೇರಿ ಗ್ರಾಮದಲ್ಲಿ ವೀಳ್ಯದೆಲೆ ಬೆಳೆದಿರುವ ಸರೋಜಾ ಬಸವರಾಜ ಭೋಸಲೆ ಕುಟುಂಬ
ಗಜೇಂದ್ರಗಡ ಸಮೀಪದ ಗೋಗೇರಿ ಗ್ರಾಮದಲ್ಲಿ ವೀಳ್ಯದೆಲೆ ಬೆಳೆದಿರುವ ಸರೋಜಾ ಬಸವರಾಜ ಭೋಸಲೆ ಕುಟುಂಬ   

ಗಜೇಂದ್ರಗಡ: ಸಮೀಪದ ಗೋಗೇರಿ ಗ್ರಾಮದ ರೈತ ಕುಟುಂಬ ವೀಳ್ಯದೆಲೆ, ರೇಷ್ಮೆ ಹಾಗೂ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವ ಮೂಲಕ ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡು ಇತರ ರೈತರಿಗೆ ಮಾದರಿಯಾಗಿದೆ.

ಸರೋಜಾ ಬಸವರಾಜ ಭೋಸಲೆ ದಂಪತಿ 3.16 ಎಕರೆ ಜಮೀನಿನ ಪೈಕಿ 2.20 ಎಕರೆ ಜಮೀನಿನಲ್ಲಿ 2015ರಲ್ಲಿ 2 ಸಾವಿರ ವೀಳ್ಯದೆಲೆ ಬಳ್ಳಿ ನಾಟಿ ಮಾಡುವ ಜತೆಗೆ ನುಗ್ಗೆಕಾಯಿ, ಬೋರಲ, ಚೊಗಸಿ, ಅರಳಿ ಗಿಡಗಳಿಗೆ ಹಬ್ಬಿಸಿದ್ದಾರೆ. ಸರೋಜಾ ಅವರ ಪತಿ ಬಸವರಾಜ ಅವರು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿರುವುದರಿಂದ ವೀಳ್ಯದೆಲೆ ತೋಟ ಸಮೃದ್ಧವಾಗಿದ್ದು, ತಿಂಗಳಿಗೆ 6-8 ಪೆಂಡಿಗೆ (ಒಂದು ಪೆಂಡಿಯಲ್ಲಿ 12 ಸಾವಿರ ಎಲೆಗಳು) ಎಲೆಗಳನ್ನು ಕಟಾವು ಮಾಡಿ ಮಾರುಕಟ್ಟೆಗೆ ಕಳಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಒಂದು ಪೆಂಡಿಗೆ ಎಲಿಗೆ ₹3 ರಿಂದ ₹8 ಸಾವಿರ ಬೆಲೆ ಸಿಗುತ್ತಿದ್ದು, ಇದರಿಂದ ₹20 ಸಾವಿರದಿಂದ ₹50 ಸಾವಿರ ಲಾಭಗಳಿಸುತ್ತಿದ್ದಾರೆ.

ವೀಳ್ಯದೆಲೆ ಜತೆಗೆ ಮತ್ತೊಂದು ಜಮೀನಿನಲ್ಲಿ ಕಳೆದ 9 ವರ್ಷಗಳಿಂದ ರೇಷ್ಮೆ ಕೃಷಿ ಮಾಡುತ್ತಿದ್ದು, ವಾರ್ಷಿಕವಾಗಿ ಸುಮಾರು ₹80 ಸಾವಿರ ಲಾಭ ಗಳಿಸುತ್ತಿದ್ದಾರೆ. ಅಲ್ಲದೆ 5 ಎಕರೆ ಜಮೀನು ಲಾವಣಿಗೆ ಪಡೆದಿರುವ ಭೋಸಲೆ ಕುಟುಂಬ ಅದರಲ್ಲಿ ಬೀಜೊತ್ಪಾದನೆ ಹತ್ತಿ ಹಾಗೂ ಗೋವಿನಜೋಳ ಬೆಳೆದಿದ್ದಾರೆ. ಜತೆಗೆ ಆಡು, ಟಗರು ಸಾಕುತ್ತಿದ್ದು, ಭೋಸಲೆ ಕುಟುಂಬ ಸಮಗ್ರ ಕೃಷಿಯಲ್ಲಿ ಖರ್ಚು ಕಳೆದು ವಾರ್ಷಿಕವಾಗಿ ಸುಮಾರು ₹4 ಲಕ್ಷ ಆದಾಯ ಗಳಿಸುತ್ತಿದ್ದಾರೆ.

ADVERTISEMENT

ಸರೋಜಾ ಭೋಸಲೆ ಅವರಿಗೆ 2022-23ರಲ್ಲಿ ಕೃಷಿ ಇಲಾಖೆಯಿಂದ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, 2023-24ರಲ್ಲಿ ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿ ಲಭಿಸಿವೆ.

‘ವೀಳ್ಯದೆಲೆ ಕೃಷಿಯಲ್ಲಿ ಉತ್ತಮ ಲಾಭವಿದೆ. ಆದರೆ, ಕಾರ ಹುಣ್ಣಿಮೆ ಆಸುಪಾಸಿನಲ್ಲಿ ವೀಳ್ಯದೆಲೆ ಬೆಲೆ ಕಡಿಮೆ ಆಗುವುದರಿಂದ ನಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ರೇಷ್ಮೆ ಕೃಷಿ, ಸಾಂಪ್ರದಾಯಿಕ ಬೆಳೆಗಳು ಕೈ ಹಿಡಿಯುತ್ತವೆ. ಕೃಷಿ ಕಾಯಕದಲ್ಲಿ ಕುಟುಂಬದ ಎಲ್ಲರೂ ಕೈಜೋಡಿಸಿದರೆ ಉತ್ತಮ ಆದಾಯ ಗಳಿಸಬಹುದಾಗಿದೆ’ ಎನ್ನುತ್ತಾರೆ ಬಸವರಾಜ ಭೋಸಲೆ.

ಗಜೇಂದ್ರಗಡ ಸಮೀಪದ ಗೋಗೇರಿ ಗ್ರಾಮದಲ್ಲಿ ಸರೋಜಾ ಬಸವರಾಜ ಭೋಸಲೆ ಅವರು ಲಾವಣಿಗೆ ಪಡೆದ ಜಮೀನಿನಲ್ಲಿ ಹತ್ತಿ ಬೆಳೆದಿರುವುದು
ಪರಿಶ್ರಮದಿಂದ ಸಮಗ್ರ ಕೃಷಿಯಲ್ಲಿ ಒಳ್ಳೆ ಆದಾಯ ಪಡೆಯಬಹುದಾಗಿದೆ. ಸಮಗ್ರ ಕೃಷಿಯಲ್ಲಿ ಬಹುಬೆಳೆ ಬೆಳೆಯುವುದರಿಂದ ಒಂದು ನಷ್ಟವಾದರೆ ಮತ್ತೊಂದು ಲಾಭ ತಂದುಕೊಡುತ್ತದೆ
ಸರೋಜಾ ಬಸವರಾಜ ಭೋಸಲೆ ರೈತ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.