ADVERTISEMENT

ಗದಗ: ಲಾಭದಾಯಕ ಬೆಲೆ ಘೋಷಿಸಲು ಒತ್ತಾಯ

ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಭಾರತೀಯ ಕಿಸಾನ್‌ ಸಂಘ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 6:14 IST
Last Updated 12 ಜನವರಿ 2022, 6:14 IST
ಭಾರತೀಯ ಕಿಸಾನ್‌ ಸಂಘದ ಗದಗ ತಾಲ್ಲೂಕು ಘಟಕವು ತಹಶೀಲ್ದಾರ್‌ ಕಿಶನ್‌ ಕಲಾಲ್‌ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು
ಭಾರತೀಯ ಕಿಸಾನ್‌ ಸಂಘದ ಗದಗ ತಾಲ್ಲೂಕು ಘಟಕವು ತಹಶೀಲ್ದಾರ್‌ ಕಿಶನ್‌ ಕಲಾಲ್‌ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು   

ಗದಗ: ‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ರೈಲ್ವೆ, ರಸ್ತೆ, ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಮಂಗಳ ಗ್ರಹದ ಅಂಗಳದವನ್ನೂ ತಲುಪಿದ್ದೇವೆ. ಆದರೆ, ಜೀವನಕ್ಕೆ ಅತ್ಯಾವಶ್ಯಕವಾಗಿ ಬೇಕಾದ ಆಹಾರವನ್ನು ಉತ್ಪಾದಿಸುವ ಕೃಷಿ ಕ್ಷೇತ್ರವು ಇಂದು ದುಃಸ್ಥಿತಿಯತ್ತ ಸಾಗುತ್ತಿದೆ’ ಎಂದು ಭಾರತೀಯ ಕಿಸಾನ್‌ ಸಂಘದ ಗದಗ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಕೆ. ಸೂರಣಗಿ ಬೇಸರ ವ್ಯಕ್ತಪಡಿಸಿದರು.

ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಭಾರತೀಯ ಕಿಸಾನ್‌ ಸಂಘದ ಗದಗ ತಾಲ್ಲೂಕು ಘಟಕವು ತಹಶೀಲ್ದಾರ್‌ ಕಿಶನ್‌ ಕಲಾಲ್‌ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

‘90ರ ದಶಕದಿಂದ 3.5 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಪ್ರತಿ ವರ್ಷ ಕೃಷಿ ತ್ಯಜಿಸಿ ನಗರದತ್ತ ಸಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ರೈತರು ತಾವು ಬೆಳೆದ ಬೆಳೆಗಳ ವೆಚ್ಚ ಅಧಿಕವಾಗಿ, ಪ್ರಕೃತಿ ವಿಕೋಪದಿಂದ ನಷ್ಟವುಂಟಾಗಿ ಮತ್ತು ಲಾಭದಾಯಕ ಬೆಲೆ ಸಿಗದೆ ಕಾರಣ ಕೃಷಿಯಿಂದ ವಿಮುಖರಾಗುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಬೇರೆ ಕ್ಷೇತ್ರಗಳ ಉತ್ಪಾದಕರು ತಾವು ಉತ್ಪಾದಿಸಿದ ಉತ್ಪನ್ನಗಳಿಗೆ ತಾವೇ ದರ ನಿಗದಿಪಡಿಸುತ್ತಾರೆ. ಆದರೆ ರೈತನಿಗೆ ಮಾತ್ರ ಇದು ಸಾಧ್ಯವಾಗುತ್ತಿಲ್ಲ. ಮಧ್ಯವರ್ತಿಗಳು ದರ ನಿಗದಿ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕೃಷಿ ಕ್ಷೇತ್ರ ಅವನತಿಗೊಂಡು ಆಹಾರದ ಅಭಾವ ಉಂಟಾಗುತ್ತದೆ. ಈ ವ್ಯವಸ್ಥೆ ಸರಿಯಾಗಬೇಕಾದರೆ ರೈತರಿಗೆ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಲಾಭದಾಯಕ ಬೆಲೆ ಸಿಗಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡ ಎಂ.ಎಸ್.ಪರ್ವತಗೌಡ್ರ ಮಾತನಾಡಿ, ‘ಪ್ರತಿ ವರ್ಷ ಬೆಲೆ ಘೋಷಣೆಯು ಹಣದುಬ್ಬರ ದರಕ್ಕೆ ಅನುಗುಣವಾಗಿರಲಿ. ಮಂಡಿ ಒಳಗೆ ಅಥವಾ ಹೊರಗೆ ಘೋಷಿತ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸಿದರೆ ಶಿಕ್ಷಾರ್ಹ ಎಂಬ ಕಾನೂನು ಜಾರಿ ಮಾಡಬೇಕು’ ಎಂದು ಆಗ್ರಹಿಸಿದರು.

ಎಂ.ಜಿ.ನೀಲಪ್ಪಗೌಡ್ರ, ವೆಂಕಟೇಶ ಎ.ದೊಗಡೆ, ಮಂಜುನಾಥ ಬ.ಜಲರಡ್ಡಿ, ಎಚ್.ಎಂ.ಹಳ್ಳಿ, ಫಕ್ಕೀರಗೌಡ್ರ ಫ.ಗೌಡ್ರ, ಎಸ್.ಎಸ್.ಮುಸ್ಕಿನಭಾವಿ, ಪ್ರಕಾಶ ಬಂಡಿಹಾಳ, ಪವಾಡಿಗೌಡ ಕಲಬಂಡಿ, ಮಂಜಪ್ಪ ಕೋಳಿವಾಡ, ಎಚ್.ಎಫ್.ಪಾಟೀಲ, ರಾಜು ಕುರಿ, ರಾಮನಗೌಡ ಪಾಟೀಲ, ಎ.ಐ.ಅಣ್ಣಿಗೇರಿ, ಗುಡದಪ್ಪ ಬಾಗಲಿ ಇದ್ದರು.

ರೈತರ ಆದಾಯ ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ಚಿಂತನೆ ಒಳ್ಳೆಯದೇ. ಆದರೆ ಕನಿಷ್ಠ ಬೆಂಬಲ ಘೋಷಿಸಿದರೆ ಸಾಲದು. ರೈತನ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಿ, ಖರೀದಿಸಬೇಕು
ಎಂ.ಎಸ್.ಪರ್ವತಗೌಡ್ರ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.