ADVERTISEMENT

ವಾಡಿ: ರಸ್ತೆಯಲ್ಲಿ ನಮಾಜ್, ಇಫ್ತಾರ್‌ ಕೂಟ

ಎನ್‌ಆರ್‌ಸಿ, ಸಿಎಎ ವಿರೋಧಿಸಿ ವಿಭಿನ್ನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 8:56 IST
Last Updated 8 ಜನವರಿ 2020, 8:56 IST
ವಾಡಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ಮುಸ್ಲಿಂ ಸಮಾಜದ ವತಿಯಿಂದ ಸೋಮವಾರ ರಸ್ತೆ ಮಧ್ಯದಲ್ಲಿ ಇಫ್ತಾರ್‌ ಕೂಟ ಆಯೋಜಿಸಿ ಪ್ರತಿಭಟನೆ ನಡೆಸಲಾಯಿತು
ವಾಡಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ಮುಸ್ಲಿಂ ಸಮಾಜದ ವತಿಯಿಂದ ಸೋಮವಾರ ರಸ್ತೆ ಮಧ್ಯದಲ್ಲಿ ಇಫ್ತಾರ್‌ ಕೂಟ ಆಯೋಜಿಸಿ ಪ್ರತಿಭಟನೆ ನಡೆಸಲಾಯಿತು   

ವಾಡಿ: ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್‌ಆರ್‌ಸಿಯಂತಹ ಕರಾಳ ಕಾಯ್ದೆಗಳನ್ನು ಜಾರಿಗೊಳಿಸಿ ಇಡೀ ದೇಶವನ್ನು ಅತಂತ್ರದತ್ತ ತಳ್ಳುತ್ತಿದೆ. ನೈಜ ಸಮಸ್ಯೆಗಳನ್ನು ಮರೆ ಮಾಚಿಸುತ್ತಿದೆ ಎಂದು ಆರೋಪಿಸಿ ಮುಸ್ಲಿಂ ಸಮಾಜದವರು ಸೋಮವಾರ ಒಂದು ದಿನ ಉಪವಾಸ ಆಚರಿಸಿ ರಸ್ತೆಯಲ್ಲಿ ಸಾಮೂಹಿಕವಾಗಿ ನಮಾಜ್‌ ನಡೆಸಿದರು.

ಪಟ್ಟಣದ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಚೌಕ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ದಿನದ ನಾಲ್ಕು ನಮಾಜ್‌ಗಳನ್ನು ರಸ್ತೆಯಲ್ಲೇ ಮುಗಿಸಿ ಸಂಜೆ ನಡು ಬೀದಿಯಲ್ಲಿ ಹಣ್ಣು ಹಂಪಲುಗಳನ್ನು ಸೇವಿಸಿ ಇಫ್ತಾರ್‌ ಕೈಗೊಂಡರು.

ADVERTISEMENT

ಈ ವೇಳೆ ವಾಡಿ-ಶಹಾಬಾದ್ ನಗರ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಸೇನ ಮೇನಗಾರ ಮಾತನಾಡಿ, ‘ಆರ್ಥಿಕ ದಿವಾಳಿಗೆ ಕಾರಣವಾಗಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಹರಿದು ಬರುತ್ತಿದೆ. ಹೀಗಿರುವಾಗ ಜನರ ಗಮನ ಬೇರೆಡೆ ಸೆಳೆಯಲು ಮೋದಿಯವರು ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆ ಜಾರಿಗೆ ಮುಂದಾಗಿದ್ದಾರೆ. ಇದರ ವಿರುದ್ಧ ಇಡೀ ದೇಶ ಹೋರಾಟಕ್ಕೆ ಮುಂದಾಗಿರುವುದು ಕೇಂದ್ರ ಸರ್ಕಾರಕ್ಕೆ ನಡುಕ ಹುಟ್ಟಿಸಿದೆ’ ಎಂದರು.

ಮುಖಂಡರಾದ ಬಶೀರ ಖುರೇಶಿ, ಶಮಶೀರ್ ಅಹಮದ್‌ ಹಾಗೂ ಅಲ್ತಾಫ‌್ ಸೌಧಾಗರ ಮಾತನಾಡಿದರು.

ಜಾಮಿಯಾ ಮಸೀದಿ ಅಧ್ಯಕ್ಷ ಮುಕ್ಬುಲ್‌ ಜಾನಿ, ಮುಖಂಡರಾದ ಸೂರ್ಯಕಾಂತ ರದ್ದೇವಾಡಿ, ಶರಣು ನಾಟೇಕಾರ, ಮಹ್ಮದ್‌ ಗೌಸ್‌, ರಾಜಾ ಪಟೇಲ್, ಪೃಥ್ವಿರಾಜ ಸೂರ್ಯವಂಶಿ, ಅಜೀಜ್‌ ತೇಲಿ, ಯುನ್ಯೂಸ್‌ ಪ್ಯಾರೆ, ಮುಕ್ರುಂ ಪಟೇಲ‌್, ಸೈಯ್ಯದ್‌ ಹುಸೇನ ಬಳವಡಗಿ, ಡಾ.ಮಹೆಬೂಬ ಪಟೇಲ್, ಬಾಷಾ ನಾಟೇಕರ, ನವಾಬ ಪಟೇಲ‌್, ಶೇರ್‌ ಅಲಿ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.