ADVERTISEMENT

ಅಲ್ಪ ಮೊತ್ತದಲ್ಲಿ ರಾಜಕಾಲುವೆ ಅಭಿವೃದ್ಧಿ

₹50 ಲಕ್ಷ ವೆಚ್ಚದ ಕಾಮಗಾರಿ ₹5 ಲಕ್ಷದಲ್ಲಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 16:24 IST
Last Updated 16 ಜೂನ್ 2021, 16:24 IST
ರೋಣ ನಗರದಲ್ಲಿ ನಡೆಯುತ್ತಿರುವ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ
ರೋಣ ನಗರದಲ್ಲಿ ನಡೆಯುತ್ತಿರುವ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ   

ರೋಣ: ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾಂಘಿಕವಾಗಿ ಅಭಿವೃದ್ಧಿಗೆ ಮುಂದಾದರೆ ಎಂತಹುದೇ ಕ್ಲಿಷ್ಟಕರ ಕೆಲಸವನ್ನು ಸುಲಭವಾಗಿ ಮಾಡಬಹುದು ಎಂಬುದನ್ನು ಇಲ್ಲಿನ ಪುರಸಭೆ ಸದಸ್ಯರು, ಸಿಬ್ಬಂದಿ ಮಾಡಿ ತೋರಿಸಿದ್ದಾರೆ. ಅಂದಾಜು ₹50 ಲಕ್ಷದ ವೆಚ್ಚದ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು ಕೇವಲ ₹5 ಲಕ್ಷದಲ್ಲಿ ಪೂರ್ತಿಗೊಳಿಸಿದ್ದಾರೆ.

ಮಳೆಯ ನೀರು ತುಂಬಿದಾಗ ಹರಿದು ಹೋಗಲು ಸರಿಯಾದ ಮಾರ್ಗಗಳಿಲ್ಲದೆ ಮನೆಗಳಿಗೆ ನುಗ್ಗುತ್ತಿತ್ತು. ಇದನ್ನು ತಪ್ಪಿಸಲು ರಾಜಕಾಲುವೆ ಕಾಮಗಾರಿ ನಡೆಸಲು ₹50 ಲಕ್ಷ ಅವಶ್ಯವಿತ್ತು. ಹಣದ ಕೊರತೆಯಿದ್ದ ಕಾರಣ ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್ ಅವರು ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರ ಮುಂದೆ ವಿಷಯ ಪ್ರಸ್ತಾಪ ಮಾಡಿದ್ದರು. ಲಭ್ಯವಿರುವ ಸಂಪನ್ಮೂಲಗಳನ್ನು ಉಪಯೋಗಿಸುವಂತೆ ಡಿ.ಸಿ ಸಲಹೆ ನೀಡಿದ್ದರು.

8 ತಂಡಗಳನ್ನು ರಚಿಸಿಕೊಂಡು ಗದಗ, ನರೇಗಲ್‌, ಗಜೇಂದ್ರಗಡ, ರೋಣ ಸ್ಥಳೀಯ ಸಂಸ್ಥೆಗಳ 4 ಜೆಸಿಬಿಗಳನ್ನು ತಂದು ಮೇ 30ಕ್ಕೆ ರಾಜಕಾಲುವೆ ಅಭಿವೃದ್ಧಿಗೆ ಮುಂದಾದರು. ರಜೆ ಇಲ್ಲದಂತೆ ನಿತ್ಯವೂ 50 ಕಾರ್ಮಿಕರು ದುಡಿಯುತ್ತಿದ್ದಾರೆ. ತಾಸಿಗೆ ₹1,400 ರಂತೆ 1 ಇಟಾಚಿ, ₹800ರಂತೆ 1 ಜೆಸಿಬಿ, 4 ಟ್ರಾಕ್ಟರ್‌ಗಳನ್ನು ಮಾತ್ರ ಖಾಸಗಿಯಾಗಿ ಬಳಸಿಕೊಳ್ಳಲಾಗಿದೆ. ಇತರೆ ಸ್ಥಳೀಯ ಸಂಸ್ಥೆಯಿಂದ ಬಂದ ವಾಹನಗಳಿಗೆ ಇಂಧನ ಹಾಗೂ ಚಾಲಕರಿಗೆ ಉಪಾಹಾರಕ್ಕೆ ಮಾತ್ರ ಖರ್ಚಾಗುತ್ತಿದೆ.

ADVERTISEMENT

‘22ನೇ ವಾರ್ಡ್‌ನ ಕಲ್ಯಾಣ ನಗರ, ಶ್ರೀನಗರ, 23ನೇ ವಾರ್ಡ್‌ನ ನ್ಯಾಯಾಲಯದ ಹಿಂದೆ, ಉರ್ದು ಶಾಲೆ ಹಿಂದೆ, ಮುದೆನಗುಡಿ ರಸ್ತೆಯಿಂದ ಬಾಚಲಾಪುರ ರಸ್ತೆವರೆಗೆ, ಶಾಂತಗೇರಿಮಠ ಸ್ಮಶಾನದಿಂದ ಹಾಗೂ 1ನೇ ವಾರ್ಡ್‌ನ ಬಾಚಲಾಪುರ ಕ್ರಾಸ್‌ವರೆಗೆ ಒಟ್ಟು 6 ರಾಜಕಾಲುವೆಗಳನ್ನು ಕೇವಲ ₹5 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ’ ಎಂದು ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್‌ ತಿಳಿಸಿದರು.

‘ರಾಜಕಾಲುವೆ ಅಭಿವೃದ್ಧಿ ವೇಳೆ 19ನೇ ವಾರ್ಡ್‌ನ ಬೆಳವಣಿಕೆಯವರ ಪ್ಲಾಟಿಗೆ ಹೋಗುವ 2 ರಸ್ತೆಗಳು, 7ನೇ ವಾರ್ಡ್‌ನ ಶೌಚಾಲಯದ 1 ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಅಂದಾಜು ₹8 ಲಕ್ಷ ಪುರಸಭೆಗೆ ಉಳಿತಾಯವಾಗಿದೆ’ ಎಂದು ಹೇಳಿದರು.

₹2 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ

‘13.28 ಎಕರೆ ವ್ಯಾಪ್ತಿಯಿದ್ದ ಪುರಸಭೆಯ ಕೆರೆಯಲ್ಲಿ 6 ಎಕರೆಯನ್ನು ಸಂತೆಗಾಗಿ ಮೀಸಲಿರಿಸಲಾಗಿದೆ. ಉಳಿದಂತೆ ಒತ್ತುವರಿಯಾಗಿತ್ತು. ಸ್ಥಳೀಯ ಆಡಳಿತದಿಂದ ಒತ್ತುವರಿ ತೆರೆವುಗೊಳಿಸಿದ ನಂತರ ಈಗ 6.28 ಎಕರೆ ವ್ಯಾಪ್ತಿಯ ಕೆರೆ ಉಳಿದಿದೆ. ₹2 ಕೋಟಿ ಅನುದಾನದಲ್ಲಿ ನಿರ್ಮಿತಿ ಕೇಂದ್ರದಿಂದ ಕೆರೆ ಅಭಿವೃದ್ಧಿಪಡಿಸಲಾಗಿದೆ. ಚರಂಡಿ ನೀರು ನೇರವಾಗಿ ಹಳ್ಳಕ್ಕೆ ಸೇರುವಂತೆ ಮಾಡಿ ಸುತ್ತಲೂ ತಂತಿ ಬೇಲಿ ಹಾಕಲಾಗಿದೆ’ ಎಂದು ಪುರಸಭೆ ಅಧ್ಯಕ್ಷೆ ವಿದ್ಯಾ ಎಸ್.‌ ದೊಡ್ಡಮನಿ ತಿಳಿಸಿದರು.

‘ಸೌಂದರ್ಯೀಕರಣ ಕೆಲಸ ಮಾತ್ರ ಬಾಕಿ ಉಳಿದಿದೆ. ₹1 ಕೋಟಿ ವೆಚ್ಚದಲ್ಲಿ ಕೃಷ್ಣಾಪುರ ಕೆನಾಲ್‌ನಿಂದ ಕೆರೆಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಯನ್ನು ಬೃಹತ್‌ ನೀರಾವರಿ ಇಲಾಖೆಯವರು ಮಾಡುತ್ತಿದ್ದಾರೆ. ಕೆರೆ ಪಕ್ಕದಲ್ಲಿ ₹20 ಲಕ್ಷದಲ್ಲಿ ಉದ್ಯಾನ ನಿರ್ಮಾಣಕ್ಕೆ ಪುರಸಭೆ ಮುಂದಾಗಿದೆ. ಇತರೆ ಯೋಜನೆಯಡಿ ಕೆರೆ ಪಕ್ಕದಲ್ಲಿ 62 ಮಳಿಗೆಗಳನ್ನು ನಿರ್ಮಿಸಲಾಗಿದ್ದು, 20 ಮಳಿಗೆಗಳು ಬಾಡಿಗೆಗೆ ಸಿದ್ಧವಿವೆ. ಅವು ತಿಂಗಳಿಗೆ ₹2 ಲಕ್ಷ ಆದಾಯ ನೀಡುತ್ತವೆ’ ಎಂದು ಮಾಹಿತಿ ನೀಡಿದರು.

ಅಲ್ಪ ಖರ್ಚಿನಲ್ಲಿ ದೊಡ್ಡಮಟ್ಟದ ಅಭಿವೃದ್ಧಿಗೆ ಸಾಕ್ಷಿಯಾಗಿದ್ದು ಖುಷಿ ನೀಡಿದೆ. ಇದೇ ಮಾದರಿಯಲ್ಲಿ ಕಾಮಗಾರಿಗಳು ಮುಂದುವರಿಯಲಿವೆ.

ಮಿಥುನ್‌ ಜಿ. ಪಾಟೀಲ, ಪುರಸಭೆ ಉಪಾಧ್ಯಕ್ಷ

ಸಾಂಘಿಕ ಪ್ರಯತ್ನದಿಂದ ಮಾತ್ರ ಅಭಿವೃದ್ಧಿ ಕಾರ್ಯಗಳು ನಡೆಯಲು ಸಾಧ್ಯ. ಪುರಸಭೆಯಿಂದ ಈ ಕಾರ್ಯವಾಗಿರುವುದು ಖುಷಿ ಎಂ. ಎ. ನೂರುಲ್ಲಾಖಾನ್‌, ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.