ಲಕ್ಷ್ಮೇಶ್ವರ: ‘ಪಂ. ಪುಟ್ಟರಾಜ ಕವಿ ಗವಾಯಿಗಳು ಜಗತ್ತಿನ ಕಲ್ಯಾಣಕ್ಕಾಗಿ ಬದುಕಿದವರು. ಅವರನ್ನು ಜಗತ್ತು ಸದಾ ಸ್ಮರಿಸುತ್ತದೆ’ ಎಂದು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ಸ್ವಾಮೀಜಿ ಹೇಳಿದರು.
ಗದುಗಿನ ಗಾನಯೋಗಿ ಪಂ. ಪುಟ್ಟರಾಜ ಸೇವಾ ಸಮಿತಿ, ಗುರು ಪುಟ್ಟರಾಜ ಸಂಗೀತ ಶಿಕ್ಷಣ ಸಮಿತಿ ಯಳವತ್ತಿ ಹಾಗೂ ಯಳವತ್ತಿ ಗ್ರಾಮಸ್ಥರ ಸಹಯೋಗದಲ್ಲಿ ಪಂ. ಪುಟ್ಟರಾಜ ಕವಿ ಶಿವಯೋಗಿಗಳವರ 15ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಪಂ. ಪಂಚಾಕ್ಷರಿ ಗವಾಯಿಗಳ ಕೃಪೆಯಿಂದ ಪುಟ್ಟರಾಜ ಕವಿ ಗವಾಯಿಗಳು ಅದ್ಭುತ ಲೋಕ ಸೃಷ್ಟಿಸಿದರು. ಗುರುವಿನ ನಿಷ್ಠೆ ಗಟ್ಟಿಯಾದರೆ ಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎಂಬುದಕ್ಕೆ ಪುಟ್ಟರಾಜ ಗವಾಯಿಗಳ ಗುರುನಿಷ್ಠೆ ಕಾರಣವಾಗಿದೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಹರ್ಲಾಪುರ ಕೊಟ್ಟೂರೇಶ್ವರ ಮಠದ ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿ, ‘ಯಳವತ್ತಿ ಗ್ರಾಮವು ಗದುಗಿನ ವೀರೇಶ್ವರ ಪುಣ್ಯಾಶ್ರಮದ ತವರು ಮನೆಯಾಗಿದೆ. ಪುಟ್ಟರಾಜ ಗವಾಯಿಗಳವರ ಪುಣ್ಯಸ್ಮರಣೋತ್ಸವದ ನೆಪದಲ್ಲಿ ಯಳವತ್ತಿಯಲ್ಲಿ ಆಧ್ಯಾತ್ಮಿಕ ಚಿಂತನೆ ನಡೆಯುತ್ತಿರುವುದು ಸ್ವಾಗತಾರ್ಹ’ ಎಂದರು.
‘ಗುರುವಿನ ಆಶ್ರಯವಿದ್ದರೆ ಮೂಕನು ಮಾತನಾಡುತ್ತಾನೆ, ಅಂಗವಿಕಲನೂ ನಡೆಯುತ್ತಾನೆ. ಅಂಧ- ಅನಾಥ, ಬಡ ಮಕ್ಕಳಿಂದ ಭಿಕ್ಷಾ ಪಾತ್ರೆ ಕಸಿದು ಸಂಗೀತದ ಅಕ್ಷಯಪಾತ್ರೆ ನೀಡಿ ಅವರನ್ನು ಶ್ರೀಮಂತಗೊಳಿಸಿದ್ದಾರೆ. ನಿಸ್ವಾರ್ಥ ಸೇವೆಗೆ ಶ್ರೀಗಳ ಆಶೀರ್ವಾದ ಸದಾ ಇರುತ್ತದೆ. ವೀರೇಶ್ವರ ಪುಣ್ಯಾಶ್ರಮದಲ್ಲಿ ಕಲಿತ ವಿದ್ಯಾರ್ಥಿಗಳು ಸಾಕಷ್ಟು ಸಾಧನೆ ಮಾಡುವ ಮೂಲಕ ಉಭಯ ಗುರುಗಳ ಹೆಸರನ್ನು ಅಜರಾಮರಗೊಳಿಸಿದ್ದಾರೆ’ ಎಂದರು.
ಧಾರವಾಡ-ಹುಬ್ಬಳ್ಳಿ ಮಹಾನಗರ ಪಾಲಿಕೆಯ ಮಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿ, ‘ಸಂತರು, ಶರಣರ ಪ್ರವಚನ ಆಲಿಸುವುದರಿಂದ ಒತ್ತಡದ ಜೀವನದಲ್ಲಿ ದಣಿದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಬಿತ್ತಿದ ಬೀಜ ಬೆಳೆ ಆಗುವಂತೆ, ಪ್ರವಚನದ ಬೀಜ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ನಾನು ಕೂಡ ಇದೇ ಗ್ರಾಮದ ಮೊಮ್ಮಗಳಾಗಿದ್ದು, ಇಲ್ಲಿನ ಜನರ ಪ್ರೀತಿ ವಿಶ್ವಾಸ ಮರೆಯುವುದಿಲ್ಲ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗದುಗಿನ ಪಂ.ವೀರೇಶ ಕಿತ್ತೂರ, ಕೊಪ್ಪಳದ ಪಂ. ಸದಾಶಿವ ಪಾಟೀಲ ಹಾಗೂ ಬೆಂಗಳೂರಿನ ಪಂ. ನಾಗಲಿಂಗಯ್ಯ ಗವಾಯಿಗಳು ಅವರಿಗೆ ‘ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಸಿದ್ದಲಿಂಗಯ್ಯಸ್ವಾಮಿ ಹಿರೇಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಷ್ಮಾಬಾನು ಹಳೆಮನೆ, ಎಸ್.ಎಚ್.ಶಿವನಗೌಡ್ರ, ಮುದುಕಯ್ಯಸ್ವಾಮಿ ಹಿರೇಮಠ, ಸಮಾಜಸೇವಕ ಉಮೇಶ ಹಡಪದ ಇದ್ದರು.
ಹರ್ಲಾಪುರದ ಸದಾನಂದ ಶಾಸ್ತ್ರಿ ಹರ್ತಿಮಠ ನಿರೂಪಣೆ ಮಾಡಿದರು. ಈರಣ್ಣ ಹತ್ತಿಕಾಳ ಸ್ವಾಗತಿಸಿದರು. ಶಿವಲಿಂಗಯ್ಯಶಾಸ್ತ್ರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೃಷ್ಟಿ ಭರಮಗೌಡ್ರ್ರ ಅವರಿಂದ ಭರತನಾಟ್ಯ ಜರುಗಿತು.
ಸಭಾ ಕಾರ್ಯಕ್ರಮಕ್ಕೂ ಮೊದಲು ಶಿವಯೋಗಿ ಪಂ. ಪುಟ್ಟರಾಜ ಗುರುವರ್ಯರ ಭಾವಚಿತ್ರ ಮೆರವಣಿಗೆಯು ಯಳವತ್ತಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಡೆಯಿತು.
ಸಂಜೆ ‘ಮಹಾತ್ಮರ ಬದುಕು ಬೆಳಕು’ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ ನಡೆಯಿತು.
‘ಸಾಹಿತ್ಯ ನೀಡಿದ ಗವಾಯಿಗಳು’
‘ಪಂ. ಪುಟ್ಟರಾಜ ಗವಾಯಿಗಳು ಏನೂ ಇಲ್ಲದವರಿಗೆ ಎಲ್ಲವನ್ನೂ ಕೊಟ್ಟಿದ್ದಾರೆ. ಸಂಗೀತ ಸಾಹಿತ್ಯ ಸೇರಿದಂತೆ ಸಮಗ್ರ ಕಲೆಯನ್ನು ನಾಡಿಗೆ ನೀಡಿರುವ ಶ್ರೇಯಸ್ಸು ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕಿದೆ. ಅವರ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಸೂಕ್ತವಾಗಿದೆ’ ಎಂದು ಪೀಠಾಧಿಪತಿ ಕಲ್ಲಯ್ಯಜ್ಜನವರು ತಿಳಿಸಿದರು. ವೀರೇಶ್ವರ ಪುಣ್ಯಾಶ್ರಮದಲ್ಲಿ ಪ್ರತಿವರ್ಷ ಗುರುಗಳ ಪುಣ್ಯಸ್ಮರಣೋತ್ಸವ ನಡೆದುಕೊಂಡು ಬರುತ್ತಿದೆ. ಅದೇರೀತಿ ಗುರುಗಳ ಜೀವನದರ್ಶನ ಚಿಂತನೆಗಳು ಎಲ್ಲಿ ಹರಡುತ್ತದೆಯೋ ಆ ಕ್ಷೇತ್ರ ಪಾವನವಾಗುತ್ತದೆ. ಆದ್ದರಿಂದ ಯಳವತ್ತಿ ಗ್ರಾಮದ ಜನರ ಸುಖ ಶಾಂತಿ ಸಮೃದ್ಧಿಗೆ ಗುರುಗಳ ಆಶೀರ್ವಾದ ಇರಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.