
ಲಕ್ಷ್ಮೇಶ್ವರ: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಿಂಗಾರು ಬಿತ್ತನೆಗೆ ಅಡ್ಡಿ ಆಗಿದೆ. ಅಕ್ಟೋಬರ್ ಮೊದಲ ವಾರದಲ್ಲೇ ಹಿಂಗಾರು ಹಂಗಾಮಿನ ಕಡಲೆ, ಗೋಧಿ, ಬಿಳಿಜೋಳ, ಕುಸುಬಿ ಬಿತ್ತನೆ ಕಾರ್ಯ ಮುಗಿಯಬೇಕಾಗಿತ್ತು. ಆದರೆ, ಆಗಾಗ ಸುರಿಯುತ್ತಿರುವ ಮಳೆ ಬಿತ್ತನೆಗೆ ತಡೆಯೊಡ್ಡಿದೆ.
ಈ ಮಧ್ಯೆ ಧೈರ್ಯ ಮಾಡಿ ಬಿತ್ತನೆ ಮಾಡಿರುವ ಬೀಜಗಳು ಹೆಚ್ಚಿನ ತೇವಾಂಶದಿಂದಾಗಿ ಭೂಮಿಯಲ್ಲೇ ಕೊಳೆಯುತ್ತಿವೆ. ಹೀಗಾಗಿ ಈಗಾಗಲೇ ಬಿತ್ತನೆ ಆಗಿರುವ ಭೂಮಿಯನ್ನು ಹರಗಿ ಮತ್ತೊಂದು ಬಾರಿ ಬಿತ್ತನೆ ಮಾಡಲು ರೈತರು ಪರದಾಡುತ್ತಿದ್ದಾರೆ.
ಒಂದು ಬಾರಿ ಬಿತ್ತನೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರು ಎರಡನೇ ಬಾರಿ ಬಿತ್ತನೆಗೆ ಖರ್ಚು ಮಾಡಲು ಹಣ ಹೊಂದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಬಿಡದೆ ಸುರಿಯುತ್ತಿರುವ ಮಳೆಯು ಗೋವಿನಜೋಳದ ಒಕ್ಕಣಿಗೆ ಅಡ್ಡಿ ಉಂಟು ಮಾಡಿದೆ. ಒಕ್ಕಣಿಗಾಗಿ ಕಣದಲ್ಲಿ ಕೊಯ್ಲು ಮಾಡಿ ಒಣಗಿಸಲು ಹಾಕಿರುವ ಗೋವಿನಜೋಳ ಅಲ್ಲಿಯೇ ಮೊಳಕೆ ಒಡೆಯುತ್ತಿವೆ. ಶೇ 80ರಷ್ಟು ಗೋವಿನಜೋಳದ ಒಕ್ಕಣಿ ಬಾಕಿ ಇದ್ದು, ರೈತರು ಬಿಸಿಲಿಗಾಗಿ ಕಾಯುತ್ತಿದ್ದಾರೆ.
ಬಳ್ಳಿಶೇಂಗಾ ಇಷ್ಟೊತ್ತಿಗಾಗಲೇ ಹರಗಬೇಕಾಗಿತ್ತು. ಆದರೆ, ಮಳೆ ಕಾರಣದಿಂದಾಗಿ ಹರಗಲು ಅನನುಕೂಲ ಆಗುತ್ತಿದೆ. ಈಗಾಗಲೇ ಶೇಂಗಾ ಕಾಯಿ ಬಲಿತಿವೆ. ಹರಗದೇ ಬಿಟ್ಟರೆ ಅವು ಸಹ ಬಳ್ಳಿಯಲ್ಲಿಯೇ ಮೊಳಕೆ ಒಡೆಯುವ ಭಯ ರೈತರನ್ನು ಕಾಡುತ್ತಿದೆ. ಇದರೊಂದಿಗೆ ಮೆಣಸಿನಕಾಯಿ ಬೆಳೆಗೂ ಮಳೆ ಮಾರಕವಾಗಿದೆ. ನಿರಂತರ ಮಳೆಗೆ ಮೆಣಸಿನಕಾಯಿ ಗಿಡಗಳ ಬೇರುಗಳು ಕೊಳೆತು ಇಡೀ ಬೆಳೆಯೇ ಹಾಳಾಗುವ ಆತಂಕ ಎದುರಾಗಿದೆ.
ಈ ವರ್ಷದ ಮುಂಗಾರು ಮಳೆಗೆ ಎಲ್ಲ ಬೆಳೆಗಳೂ ಹಾಳಾಗಿದ್ದು ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹಿಂಗಾರು ಬೆಳೆಗಳಾದರೂ ಕೈ ಹಿಡಿಯುತ್ತದೆ ಎಂಬ ಆಸೆ ರೈತರಲ್ಲಿತ್ತು. ಆದರೆ ಇದೀಗ ಸುರಿಯುತ್ತಿರುವ ಮಳೆ ನಮ್ಮ ಆಸೆಗೆ ತಣ್ಣೀರು ಎರಚಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ.
ಅತಿವೃಷ್ಟಿಗೆ ಈ ವರ್ಷದ ಮುಂಗಾರು ಬೆಳೆಗಳು ರೈತರಿಗೆ ದಕ್ಕಿಲ್ಲ. ಹಿಂಗಾರು ಬೆಳೆಗಳಾದರೂ ಬರಲಿ ಎಂಬ ಆಸೆ ಇತ್ತು. ಆದರೆ ಇದೀಗ ಸುರಿಯುತ್ತಿರುವ ಮಳೆ ಅದನ್ನೂ ಹಾಳು ಮಾಡಿದೆ.-ಸೋಮಣ್ಣ ಡಾಣಗಲ್ಲ ಶಿಗ್ಲಿಯ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.