ADVERTISEMENT

ನರೇಗಲ್, ಗದುಗಿನಲ್ಲಿ ಧಾರಾಕಾರ ಮಳೆ

ತುಂಬಿ ಹರಿದ ಹಳ್ಳಗಳು; ಕೃಷಿ ಹೊಂಡಗಳು ಭರ್ತಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 14:03 IST
Last Updated 19 ಅಕ್ಟೋಬರ್ 2019, 14:03 IST
ನರೇಗಲ್ ಹೋಬಳಿ ವ್ಯಾಪ್ತಿಯ ಹೊಲವೊಂದರಲ್ಲಿ ನಿಂತಿರುವ ಮಳೆ ನೀರು
ನರೇಗಲ್ ಹೋಬಳಿ ವ್ಯಾಪ್ತಿಯ ಹೊಲವೊಂದರಲ್ಲಿ ನಿಂತಿರುವ ಮಳೆ ನೀರು   

ಗದಗ/ನರೇಗಲ್: ಗದಗ–ಬೆಟಗೇರಿ ಅವಳಿ ನಗರ, ನರೇಗಲ್‌ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ತಡರಾತ್ರಿ 4 ಗಂಟೆ ಧಾರಾಕಾರ ಮಳೆ ಸುರಿದಿದೆ. ರಾತ್ರಿ 12 ಗಂಟೆ ಸುಮಾರಿಗೆ ಆರಂಭವಾದ ಮಳೆಯು ಬೆಳಗಿನ ಜಾವ 4 ಗಂಟೆಯವರೆಗೆ ಆರ್ಭಟಿಸಿತು.

ನರೇಗಲ್‌ ಹೋಬಳಿ ವ್ಯಾಪ್ತಿಯಲ್ಲಿ ಹಲವು ಹಳ್ಳಗಳು ತುಂಬಿ ಹರಿಯುತ್ತಿವೆ. ಹೊಲಗಳಲ್ಲಿ ಒಡ್ಡು ಒಡೆದು ನೀರು ನಿಂತಿದೆ. ಕೃಷಿ ಹೊಂಡಗಳಲ್ಲಿ ನೀರು ಭರ್ತಿಯಾಗಿದೆ. ಮಾರನಬಸರಿ ಗ್ರಾಮದ ಹಳ್ಳ ಸೇರಿದಂತೆ ಕೆಲವೆಡೆ ರಭಸದಿಂದ ಹಳ್ಳಗಳು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಜಕ್ಕಲಿ, ನಿಡಗುಂದಿ, ಬೂದಿಹಾಳ, ತೋಟಗಂಟಿ, ಮಾರನಬಸರಿ, ಹಾಲಕೆರೆ, ನಿಡಗುಂದಿಕೊಪ್ಪ, ಕಳಕಾಪುರ, ಹೊಸಳ್ಳಿ, ಕೊಚಲಾಪುರ, ದ್ಯಾಂಪುರ, ಕೋಟುಮಚಗಿ, ನಾರಾಯಣಪುರ, ಅಬ್ಬಿಗೇರಿ, ಡ.ಸ.ಹಡಗಲಿ, ಯರೇಬೆಲೇರಿ,ಕುರಡಗಿ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಗಡ್ಡಿಹಳ್ಳ, ಕಲ್ಲಹಳ್ಳ, ಜಕ್ಕಲಿ ಹಳ್ಳ, ಮಾರನಬಸರಿ ಹಳ್ಳಗಳು ತುಂಬಿ ಹರಿಯುತ್ತಿದ್ದು, ಗ್ರಾಮಸ್ಥರು ಹಳ್ಳ ತುಂಬಿ ಹರಿಯುವುದನ್ನು ನೋಡಲು ಧಾವಿಸುತ್ತಿದ್ದಾರೆ. ಕೆಲವು ಯುವಕರು ಸೆಲ್ಫಿ ತೆಗೆದುಕೊಳ್ಳುಲು ಮುಗಿಬಿದ್ದಿದ್ದಾರೆ.

ADVERTISEMENT

ಗದಗ: ಗದಗ–ಬೆಟಗೇರಿ ಅವಳಿ ನಗರದಲ್ಲಿ ಶುಕ್ರವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಮಳೆಯಿಂದ ಗಂಗಿಮಡಿ ಬಡಾವಣೆ, ಹಳೆಯ ಬಸ್‌ ನಿಲ್ದಾಣ, ಲಕ್ಷ್ಮೀಚಾಳ್‌ನಲ್ಲಿ ಮಳೆ ನೀರು ಮನೆಗಳ ಆವರಣಕ್ಕೆ ನುಗ್ಗಿತ್ತು. ನಗರದ ಹಲವೆಡೆ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಕೆಸರುಗದ್ದೆಯಾಗಿದೆ. ಹಲವೆಡೆ ರಸ್ತೆ ಅಗೆದು ಹಾಕಿದ್ದು, ಮಳೆಯಿಂದ ಜಲ್ಲಿಕಲ್ಲುಗಳು ಕಿತ್ತುಬಂದಿವೆ. ಕೆಲವೆಡೆ ದೊಡ್ಡ ಗುಂಡಿಗಳು ಬಿದ್ದಿವೆ. ಪಿ.ಬಿ ರಸ್ತೆ, ಹಳೆ ಜಿಲ್ಲಾಧಿಕಾರಿ ಕಚೇರಿ ಎದುರಿನ ವೃತ್ತದಿಂದ ಹೊಸ ಬಸ್‌ ನಿಲ್ದಾಣದವರೆತೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.