ಗಜೇಂದ್ರಗಡ: ರಾಜೂರ ಗ್ರಾಮದ ಹಲವು ಬಡಾವಣೆಗಳಲ್ಲಿ ಸುಸಜ್ಜಿತ ರಸ್ತೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದ್ದು, ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗದೇ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.
ಗ್ರಾಮಗಳಲ್ಲಿ ಅವೈಜ್ಞಾನಿಕವಾಗಿ ಸಿಸಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೆ, ಅಲ್ಲಲ್ಲಿ ನಿಂತು ಗಬ್ಬೆದ್ದು ನಾರುತ್ತಿದೆ. ರಸ್ತೆ ತುಂಬ ಕೊಳಚೆ ನೀರು ತುಂಬಿಕೊಂಡು ಓಡಾಡಲು ತೊಂದರೆಯಾಗುತ್ತಿದೆ. ಅಲ್ಲದೇ ಗ್ರಾಮದ ಖಾಲಿ ಜಾಗಗಳಲ್ಲಿ ಕಸದ ರಾಶಿ ಬಿದ್ದಿರುವುದರಿಂದ ಅಲ್ಲಿನ ನಿವಾಸಿಗಳು ಪರದಾಡುವಂತಾಗಿದೆ. ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಿಂದ ಗಜೇಂದ್ರಗಡ-ರೋಣ ರಸ್ತೆ ವರೆಗಿನ ರಸ್ತೆ ಮೇಲೆ ಹಾಕಲಾದ ಚರಂಡಿಯಲ್ಲಿನ ತ್ಯಾಜ್ಯ ವಿಲೇವಾರಿ ಮಾಡಿಲ್ಲ.
ಗ್ರಾಮದ ಶಿವನಗೌಡ ಪಾಟೀಲ ಅವರ ಪ್ಲಾಟ್‌ನಲ್ಲಿ ಸರಿಯಾದ ರಸ್ತೆ ನಿರ್ಮಿಸದ ಕಾರಣ ಮಳೆ ಬಂದರೆ ಸಾಕು ಮಳೆ ನೀರು ಹಾಗೂ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತದೆ. ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಹಲವು ವರ್ಷಗಳಿಂದ ಕೆಟ್ಟು ನಿಂತಿದ್ದು, ಗ್ರಾಮಸ್ಥರು ಖಾಸಗಿ ಘಟಕದ ಶುದ್ಧ ಕುಡಿಯುವ ನೀರು ಅವಲಂಬಿಸಿದ್ದಾರೆ. ಕೆಲವರು ನಲ್ಲಿಯ ನೀರನ್ನೇ ಕುಡಿಯಲು ಬಳಸುತ್ತಿದ್ದಾರೆ.
ಗ್ರಾಮದ ಹೊರ ವಲಯದಲ್ಲಿರುವ ಮುಖ್ಯ ರಸ್ತೆಗಳು, ಜಮೀನುಗಳಿಗೆ ಸಂಪರ್ಕಿಸುವ ರಸ್ತೆಗಳು ಹಾಗೂ ಬಯಲು ಜಾಗೆಗಳಲ್ಲಿ ತಿಪ್ಪೆ ಗುಂಡಿಗಳನ್ನು ಹಾಕಲಾಗಿದ್ದು, ಅಲ್ಲಿ ಮುಳ್ಳು ಕಂಟಿ, ಕಸ ಬೆಳೆದು ಬಯಲು ಶೌಚಾಲಯಗಳಾಗಿ ಮಾರ್ಪಟ್ಟಿವೆ. ಇದರಿಂದ ಅಲ್ಲಿನ ನಿವಾಸಿಗಳು ತಿಪ್ಪೆಗಳಿಂದ ಹಾಗೂ ಮಲದಿಂದ ಬರುವ ದುರ್ವಾಸನೆಗೆ ಬೇಸತ್ತಿದ್ದು, ರೋಗಗಳ ಭೀತಿ ಎದುರಿಸುತ್ತಿದ್ದಾರೆ.
ʼಗ್ರಾಮ ಪಂಚಾಯಿತಿಗೆ ಬರುವ ಅನುದಾನ್ನು ಆಡಳಿತ ಮಂಡಳಿಯವರು ಹಂಚಿಕೊಳ್ಳಲು ಬಡಿದಾಡುತ್ತಾರೆ. ಗ್ರಾಮಗಳಲ್ಲಿನ ಮುಖ್ಯ ರಸ್ತೆಗಳಲ್ಲಿನ ಕುಡಿಯುವ ನೀರಿನ ಪೈಪ್‌ಗಳು ಒಡೆದು ನೀರು ಸೋರಿಕೆಯಾಗುತ್ತಿದ್ದರೂ ಸಹ ಹಲವು ತಿಂಗಳಾದರೂ ದುರಸ್ಥಿ ಮಾಡುವುದಿಲ್ಲ. ಆದರೆ 15ನೇ ಹಣಕಾಸಿನಲ್ಲಿ ಕುಡಿಯುವ ನೀರಿಗಾಗಿ ಎಲೆಕ್ಟ್ರಿಕಲ್ ಅಂಗಡಿಗಳಲ್ಲಿ ಲಕ್ಷ ಲಕ್ಷ ಖರ್ಚು ಹಾಕಿರುತ್ತಾರೆʼ ಎಂದು ಗ್ರಾಮಸ್ಥರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ನಿರ್ಮಾಣವಾಗದ ಸಿಸಿ ರಸ್ತೆಗಳು
ಗ್ರಾಮದ ಹಪ್ಪಳದ ಅವರ ಹಿಟ್ಟಿನ ಗಿರಣಿಯಿಂದ ಸುಣ್ಣದ ಬಟ್ಟಿಯವರೆಗೆ ಹಾಗೂ ಭೀಮಾಂಭಿಕಾ ಬಡಾವಣೆಯಲ್ಲಿ ಭೀಮಾಂಭಿಕಾ ದೇವಸ್ಥಾನದಿಂದ ಮುಜಾವರ ಅವರ ಮನೆ ವರೆಗಿನ ಸಿಸಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಿಸಿ ರಸ್ತೆ ನಿರ್ಮಾಣಕ್ಕೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ಯ ಇಲಾಖೆಯಿಂದ ₹80 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ರಾಮಲಿಂಗೇಶ್ವರ ದೇವಸ್ಥಾನದಿಂದ ಬಾಲಕರ ವಸತಿ ಶಾಲೆ ವರೆಗಿನ ಮುಖ್ಯ ರಸ್ತೆ ಪಕ್ಕದ ಮುಖ್ಯ ಕಾಲುವೆ ವರೆಗೆ ಸಿಸಿ ಚರಂಡಿ ನಿರ್ಮಾಣಕ್ಕೆ ಟೆಂಡರ್ ಆಗಿದೆ ಎಂದು ಹಲವು ತಿಂಗಳುಗಳಿಂದ ಹೇಳಲಾಗುತ್ತಿದೆ. ಆದರೆ ಕಾಮಗಾರಿ ಆರಂಭವಾಗಿಲ್ಲ.
ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿ ವೈಜ್ಞಾನಿಕವಾಗಿ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು-ಎಸ್.ಎಸ್.ತೊಂಡಿಹಾಳ, ಪಿಡಿಓ, ಗ್ರಾಮ ಪಂಚಾಯಿತಿ, ರಾಜೂರ.
ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಬರುವ ಅಲ್ಪ ಅನುದಾನದಲ್ಲಿ ಬಹಳಷ್ಟು ಅವಶ್ಯಕತೆಯಿರುವ ಕಡೆಗಳಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಹೀಗಾಗಿ ಕೆಲವು ಕಡೆಗಳಲ್ಲಿ ತೊಂದರೆಯೂ ಆಗಿದೆ. ಗ್ರಾಮದಲ್ಲಿ ಇನ್ನೂ ಉಳಿದ ಸಿಸಿ ರಸ್ತೆ, ಸಿಸಿ ಚರಂಡಿ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗುವುದು.-ಕಳಕವ್ವ ಯಮನೂರಪ್ಪ ಜೊಳ್ಳಿಯವರ, ಅಧ್ಯಕ್ಷೆ, ಗ್ರಾಮ ಪಂಚಾಯಿತಿ, ರಾಜೂರ.
’ಈ ಮೊದಲು ಕಳಿಸಿದ್ದ ಟೆಂಡರ್ ತಾಂತ್ರಿಕ ತೊಂದರೆಯಿಂದ ವೃತ್ತ ಕಚೇರಿಯಿಂದ ರದ್ದುಪಡಿಸಲಾಗಿದ್ದು, ಮರು ಟೆಂಡರ್ ಕರೆಯಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಕೆಲಸದ ಆದೇಶಕ್ಕೆ ಕ್ರಮ ವಹಿಸಲಾಗುವುದು.-ರಾಘವೇಂದ್ರ ಪುರೋಹಿತ, ಕಾರ್ಯನಿರ್ವಾಹಕ ಇಂಜನಿಯರ್, ಪಂಚಾಯತ್ ರಾಜ್ಯ ಎಂಜನಿಯರಿಂಗ್ ವಿಭಾಗ, ಗದಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.